ಲಿಂಗಾಯತ ಮತ್ತು ಬಸವಾದಿ ಶರಣರ ಮೇಲೆ ಆಗಾಗ ಅನೇಕ ದಾಳಿಗಳು ನಡೆಯುತ್ತಿರುವುದರಿಂದ ಅದನ್ನು ಎದುರಿಸಲು ಲಿಂಗಾಯತ ಗಣಾಚಾರ ಪಡೆಯನ್ನು ಹುಟ್ಟು ಹಾಕಿ: ಕೋರಣೇಶ್ವರ ಶ್ರೀ
ಸೊಲ್ಲಾಪುರ
ಕರ್ನಾಟಕದಲ್ಲಿದ್ದಂತೆ ಮಹಾರಾಷ್ಟದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರಿದ್ದು, ಮುಂದಿನ ದಿನಗಳಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯಮಟ್ಟದ ಮಹಾಧಿವೇಶನ ನಡೆಸಲಾಗುವದು, ಅದಕ್ಕಾಗಿ ಮಹಾರಾಷ್ಟ್ರದ ಎಲ್ಲಾ ಘಟಕಗಳು ತಯಾರಿ ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೇಳಿದರು.

ಭಾನುವಾರ ಪುಣೆಯ ಆಕುರ್ಡಿಯ ಜಿ.ಡಿ. ಮಾಡಗೂಳಕರ ಸಭಾಭವನದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿಯ ತ್ರೈಮಾಸಿಕ ಅಧಿವೇಶನದಲ್ಲಿ ಮಾತನಾಡಿದರು.
ಕೆಲವೇ ವರ್ಷಗಳಲ್ಲಿ ಮಹಾಸಭಾ ವ್ಯಾಪಕವಾಗಿ ಬೆಳೆಯುತ್ತಿದೆ. ಕರ್ನಾಟಕ ಬಿಟ್ಟು ಈಗ ಮಹಾರಾಷ್ಟ್ರ, ಆಂಧ್ರ, ತಮಿಳನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಮಹಾರಾಷ್ಟ್ರ ರಾಜ್ಯದಲ್ಲಿ ರಾಜ್ಯ ಘಟಕ, ಜಿಲ್ಲಾ ಘಟಕಗಳ ಸ್ಥಾಪನೆಗೆ ಚಾಲನೆ ನೀಡಲಾಯಿತು. ಲಿಂಗಾಯತ ಬಾಂಧವರು ಸದಸ್ಯರಾಗಿ ನೋಂದಾಯಿಸಿಕೊಳ್ಳಲು ಮರಾಠಿ ಭಾಷೆಯಲ್ಲಿ ಅರ್ಜಿ ಪೂರೈಸಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಲಿಂಗಾಯತ ಇದು ಸ್ವತಂತ್ರ ಧರ್ಮ ಎಂದು ನಮ್ಮವರಲ್ಲೀಗ ಹೆಚ್ಚೆಚ್ಚು ಮನವರಿಕೆಯಾಗುತ್ತಿದೆ. ಲಿಂಗಾಯತ ಸಮಾಜ ಹಿತದ ಕಾರ್ಯಕ್ರಮಗಳನ್ನು ಹಾಕಿಕೊಂಡು, ಸಮಾಜದ ಸಮಸ್ಯೆಗಳು ಬಿಡಿಸುವಲ್ಲಿ ಸಕ್ರಿಯವಾಗಲಿರುವ ಮಹಾರಾಷ್ಟ್ರ ಜೆ.ಎಲ್.ಎಂ. ಘಟಕ ಈ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಉಪಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಕೆಂಪಗೌಡರು ಹಲವಾರು ನಿರ್ಣಯಗಳನ್ನು ಮಂಡಿಸಿದರು. ಅದಕ್ಕೆ ಮಹಾಸಭಾದ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅನುಮೋದನೆ ನೀಡಿದರು.

ಸಭೆಯ ಸಾನಿಧ್ಯ ವಹಿಸಿದ್ದ ಕೋರಣೇಶ್ವರ ಸ್ವಾಮಿಗಳು ಲಿಂಗಾಯತ ಮತ್ತು ಬಸವಾದಿ ಶರಣರ ಮೇಲೆ ಆಗಾಗ ಅನೇಕ ದಾಳಿಗಳು ನಡೆಯುತ್ತಿರುವುದರಿಂದ ಅದನ್ನು ಎದುರಿಸಲು ಲಿಂಗಾಯತ ಗಣಾಚಾರ ಪಡೆಯನ್ನು ಹುಟ್ಟು ಹಾಕಬೇಕು. ಅಲ್ಲಲ್ಲಿ ಲಿಂಗಾಯತ ಮಠಾಧೀಶರ ಸಮಾವೇಶ ಮಾಡಬೇಕು. ಕುಂಭಮೇಳದಲ್ಲಿ ಅನುಮತಿ ಪಡೆದು ಲಿಂಗಾಯತ ಧರ್ಮದ ಮಂಟಪ ಹಾಕಿ ವಿವಿಧ ಭಾಷೆಗಳ ಮೂಲಕ ಲಿಂಗಾಯತ ತತ್ವಜ್ಞಾನ ಬಿಂಬಿಸಬೇಕು ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಹೊರ ರಾಜ್ಯಗಳಿಂದ ಕೇಂದ್ರೀಯ ಕಮೀಟಿಯಲ್ಲಿ ಒಬ್ಬರನ್ನು ಸದಸ್ಯರೆಂದು ತೆಗೆದುಕೊಳ್ಳಬೇಕು. ಅನ್ಯ ರಾಜ್ಯದಲ್ಲಿರುವ ಲಿಂಗಾಯತರಿಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ರಾಷ್ಟ್ರೀಯ ಉಪಾಧ್ಯಕ್ಷ ಜಿ.ಬಿ. ಪಾಟೀಲ, ಬೆಳಗಾವಿಯ ಬಸವರಾಜ ರೊಟ್ಟಿ, ಮಹಿಳಾ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಮಹಾರಾಷ್ಟ್ರ ರಾಜ್ಯಅಧ್ಯಕ್ಷ ರಾಜಶೇಖರ ತಂಬಾಕೆ, ಕಾರ್ಯದರ್ಶಿ ಬಸವರಾಜ ಕಣಜೆ, ಬೀದರ ಅಧ್ಯಕ್ಷ ಬಸವರಾಜ ಧನ್ನೂರ, ಕಲಬುರಗಿ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಸೊಲ್ಲಾಪುರ ಅಧ್ಯಕ್ಷ ಶಿವಾನಂದ ಗೋಗಾವ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಲಗೆ, ಅಶೋಕ ಮಳಗಲಿ, ವಕೀಲ ಕೋಗವಾಡ, ಚಂದ್ರಕಾಂತ ಹರಕುಡೆ, ಅಶೋಕ ಲೋಣಿ, ರಾಜ್ಯ ಮಹಿಳಾ ಅಧ್ಯಕ್ಷೆ ನಂದಿನಿ ಪಾಟೀಲ, ಮಹಾದೇವ ಶಿಂಗಾರಿ ಸೇರಿದಂತೆ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪೋಷಕರು, ದಾಸೋಹಿಗಳು ಆಹ್ವಾನಿತರು ಉಪಸ್ಥಿತರಿದ್ದರು.

ಸರಿಯಾದ ಕ್ರಮವಾಗಿದೆ…..👍👍🅰️🅰️🙏🙏