‘ಮಕ್ಕಳನ್ನು ಮೊಬೈಲು ಗೀಳಿನಿಂದ ಹೊರತರಲು ವಚನ ಮೇಳ ನಡೆಯಲಿ’

ಬಸವ ಮೀಡಿಯಾ
ಬಸವ ಮೀಡಿಯಾ

ಮಕ್ಕಳ ವಚನಮೇಳ ಸಂಸ್ಕೃತಿಯ ಉತ್ಸವ

ಬೆಂಗಳೂರು

ಮಕ್ಕಳನ್ನು ಮೊಬೈಲು ಗೀಳಿನಿಂದ ಹೊರತರಲು ಮಕ್ಕಳ ವಚನ ಮೇಳಗಳು ಹೆಚ್ಚೆಚ್ಚು ನಡೆಯಬೇಕು ಎಂದು ನಗರಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿ ಡಾ. ನಾಗೇಂದ್ರ ಹೊನ್ನಳ್ಳಿ ಅಭಿಪ್ರಾಯಪಟ್ಡರು.

ವಚನಜ್ಯೋತಿ ಬಳಗವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಕ್ಕಳ ವಚನ ಮೇಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ ಕಿಕ್ಕಿರಿದು ನೆರೆದಿರುವ ಅಪಾರ ಸ್ತೋಮವು ವಚನಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮಹಾತ್ಮ ಬಸವಣ್ಣನವರ ಆದರ್ಶಗಳನ್ನು ಮಕ್ಕಳಿಗೆ ಮುಟ್ಟಿಸುವ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಅನುಕರಣೀಯ ಎಂದು ಪ್ರಶಂಸಿದರು.

ಕನ್ನಡದ ಸಾಂಸ್ಕೃತಿಕ ಸಂಪತ್ತು ವಚನಗಳ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ ಬಿತ್ತನೆ ಮಾಡುತ್ತಿರುವ ಮಕ್ಕಳ ವಚನ ಮೇಳವು ಸಂಸ್ಕೃತಿಯ ಉತ್ಸವ ಎಂದು ಉದ್ಯಮಿ ಎಸ್. ಷಡಕ್ಷರಿ ಹೇಳಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಲೆಗುಂಪಾಗುತ್ತಿರುವ ಕನ್ನಡದ ಉಳಿವಿಗೆ ವಚನ ಮೇಳಗಳು ಬೇಕಾಗಿದೆ ಎಂದು ಪ್ರತಿಪಾದಿಸಿದರು.

ಸಾನಿಧ್ಯ ವಹಿಸಿದ್ದ ಬೇಲಿಮಠದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರಸ್ವಾಮಿಗಳು ಮಾತನಾಡಿ, ನಿರಂತರವಾಗಿ ವಚನ ಸಂಸ್ಕೃತಿಯನ್ನು ಪಸರಿಸುತ್ತ ವಚನ ಸಂಕ್ರಾಂತಿಯಿಂದ ವಚನ ಕಾರ್ತಿಕದವರೆಗೆ ಎಡೆಬಿಡದೆ ಮನೆಯಿಂದ ಮನಕ್ಕೆ ವಚನಗಳನ್ನು ತಲುಪಿಸಲಾಗುತ್ತದೆ.

ಅಲಕ್ಷಿತ ವಚನಕಾರರ ಜಯಂತಿಗಳನ್ನು ಆಚರಿಸಿ ಮಹಾತ್ಮ ಬಸವಣ್ಣನವರ ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ನುಡಿಗೆ ಸಾಕ್ಷಿಯಾಗಿ ನಡೆದುಕೊಂಡು ಮಕ್ಕಳ ವಚನ ಮೇಳ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿಕೊಂಡು ನಾಲ್ಕೈದು ವೇದಿಕೆಗಳನ್ನು ರೂಪಿಸಿ ವಚನ ಪ್ರಕಾರದಲ್ಲಿ ವಚನ ಗಾಯನ, ವಚನ ವಿವೇಚನ, ವಚನ ಪ್ರಬಂಧ, ವಚನ ಚಿತ್ರ, ವಚನ ವೇಷಭೂಷಣ, ವಚನ ಕಥೆ, ವಚನ ರೂಪಕ, ವಚನ ರಸಪ್ರಶ್ನೆ, ವಚನ ಅಂತ್ಯಾಕ್ಷರಿ, ವಚನ ಕಂಠಪಾಠ, ವಚನ ನೃತ್ಯ, ಸಮೂಹ ವಚನಗಳೆಂಬ ವಿವಿಧ ಮಜಲುಗಳ ಮೂಲಕ ಶಿಶುವಿಹಾರದಿಂದ ಹತ್ತನೇ ತರಗತಿಯವರೆಗೆ ವಚನಗಳನ್ನು ಬಿತ್ತುತ್ತಿರುವ ವಚನಜ್ಯೋತಿ ಬಳಗದ ಕಾರ್ಯವನ್ನು ಯಾವ ಮಠಗಳೂ ಮಾಡಲಾಗುತ್ತಿಲ್ಲ, ದೊಡ್ಡ ದೊಡ್ಡ ಸಂಸ್ಥೆಗಳು ಮಾಡುತ್ತಿಲ್ಲ.

ಆದರೆ ವಚನವನ್ನೇ ಮೈಮನದಲ್ಲಿ ತುಂಬಿಕೊಂಡಿರುವ ಪಿನಾಕಪಾಣಿ ಅವರ ನೇತೃತ್ವದಲ್ಲಿ ವಚನಜ್ಯೋತಿ ಬಳಗ ಈ ವಚನ ಬಿತ್ತನೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದು ಸಮಾಜದ ನಾಯಕರು, ಮಠಾಧೀಶರು ಅವರ ನೆರವಿಗೆ ನಿಲ್ಲಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಎಳೆಯ ಮನಸ್ಸುಗಳಿಗೆ ಸದಾಚಾರದ ವಚನಗಳು ಸಂಜೀವಿನಿಯಾಗಿದ್ದು, ಪ್ರೀತಿ ವಿಶ್ವಾಸದ ಸಹಬಾಳ್ವೆಗೆ ಹದ ಮಾಡುತ್ತವೆ.

ಹಾಗಾಗಿಯೇ ವಚನಜ್ಯೋತಿ ಬಳಗ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಒಂದು ಮಗು ವಚನವನ್ನು ಹಾಡಿದರೆ ಕನ್ನಡವನ್ನು ಹಾಡಿದಂತೆ, ವಚನವನ್ನು ಬರೆದರೆ ಕನ್ನಡವನ್ನು ಬರೆದಂತೆ, ವಚನಗಳ ಕುರಿತಾಗಿ ಮಾತನಾಡಿದರೆ ಕನ್ನಡದ ಚಿಂತನೆ ಎಂದು ವಿವರಿಸಿದರು.

ಏಳು ದಿನಗಳು, ನಾಲ್ಕು ವೇದಿಕೆಗಳು, ಹನ್ನೆರಡು ಪ್ರಕಾರಗಳಲ್ಲಿ ನಡೆದ ಮಕ್ಕಳ ವಚನ ಮೇಳದಲ್ಲಿ ನೂರೈವತ್ತಕ್ಕೂ ಹೆಚ್ಚು ಶಾಲೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಳುನೂರ ಐವತ್ತಕ್ಕೂ ಹೆಚ್ಚು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವಬಂಧು ಫೌಂಡೇಷನ್ನಿನ ಡಾ. ಸಿದ್ದಯ್ಯ ಗುರೂಜಿ, ದೊಡ್ಡಮರಳವಾಡಿಯ ಶಿವಮಠದ ಶ್ರೀ ಪ್ರಭು ಕಿರೀಟಸ್ವಾಮಿಗಳು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಬಸವ ಸಮಿತಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಉದ್ಯಮಿ ಬಸವನಗೌಡರು, ವೀರಲೋಕದ ವೀರಕಪುತ್ರ ಶ್ರೀನಿವಾಸ್, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಾರ್ಶ್ವನಾಥ, ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ ಮೊದಲಾದವರು ಪಾಲ್ಗೊಂಡಿದ್ದರು.

ವಚನಜ್ಯೋತಿ ಬಳಗದ ರಾಜಾ ಗುರುಪ್ರಸಾದ, ಪ್ರಭು ಇಸುವನಹಳ್ಳಿ, ಮೀನಾಕ್ಷಿ ಮೇಟಿ, ಜಾನಕಿ, ಮಧು, ಶಿವಪ್ರಕಾಶ, ಗಂಗಾಧರ, ಡಾ. ರುದ್ರೇಶ ಅದರಂಗಿ, ವಿಶಾಲ್, ಸುರೇಶ, ಕಲ್ಯಾಣ ಬಡಾವಣೆಯ ವಚನ ಕಲಿಕಾ ವಿದ್ಯಾರ್ಥಿಗಳು ಮೇಳದ ಯಶಸ್ಸಿಗೆ ಶ್ರಮಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *