ಮಕ್ಕಳಿಗೆ ಸಂಸ್ಕಾರ ನೀಡಿ: ವಚನ ಜಾತ್ರಾ ಮಹೋತ್ಸವದಲ್ಲಿ ಮಹಾಂತಪ್ರಭು ಶ್ರೀ

ಜಮಖಂಡಿ

‘ಜೀವನ ನಶ್ವರ ಎಂಬ ಅರಿವು ಇರಬೇಕು. ಹಾಗಾಗಿ ಇನ್ನುಳಿದವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಯಾವ ವಿದ್ಯೆ ಕಲಿತರೂ ಸಾವು ತಪ್ಪಿದ್ದಲ್ಲ. ಹೋಗುವಾಗ ಏನನ್ನೂ ಒಯ್ಯುವುದಿಲ್ಲ. ಆದ್ದರಿಂದ ತನ್ನ ಹೊಟ್ಟೆ ಹಸಿದಿದ್ದರೂ ಇನ್ನೊಬ್ಬರ ಹೊಟ್ಟೆ ತಣ್ಣಗಿರಲಿ ಎಂದು ಬಯಸಬೇಕು’ ಎಂದು ಶೇಗುಣಶಿ ವಿರಕ್ತ ಮಠದ ಮಹಾಂತಪ್ರಭು ಶ್ರೀ ನಗರದ ಓಲೇಮಠದ ವಚನ ಜಾತ್ರಾ ಮಹೋತ್ಸವದಲ್ಲಿ ಹೇಳಿದರು.

ಶ್ರೀಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಆಹಾರಧಾನ್ಯ, ಕಾರು ಬೇರೆ ಬೇರೆ ವಸ್ತುಗಳ ಕೊರತೆಯಾದರೆ ಆಮದು ಮಾಡಿಕೊಳ್ಳಬಹುದು. ಆದರೆ, ಸಂಸ್ಕಾರವಂತ ಮಕ್ಕಳ ಕೊರತೆಯಾದರೆ ಆಮದು ಮಾಡಿಕೊಳ್ಳಲಾಗದು. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ನೀಡಬೇಕು’ ಎಂದರು.

ಝುಂಜರವಾಡದ ಬಸವ ರಾಜೇಂದ್ರ ಶರಣರು ಮಾತನಾಡಿ, ‘ಭಕ್ತಿ ನಮ್ಮನ್ನು ಸಂಸ್ಕಾರಯುತರನ್ನಾಗಿ ಮಾಡುತ್ತದೆ. ಭಕ್ತಿಯಿಂದಲೇ ಶಕ್ತಿ, ಮುಕ್ತಿ ಮತ್ತು ಮೋಕ್ಷ. ಭಕ್ತರು ಭಕ್ತಿ ಮಾರ್ಗದಲ್ಲಿ ಸಾಗಬೇಕು’ ಎಂದು ತಿಳಿಸಿದರು.

ರೈತ ಮುಖಂಡ ಬಿ.ಎಸ್. ಸಿಂಧೂರ ಮಾತನಾಡಿ, ‘ಮನಸ್ಸಿನ ಕಲ್ಮಶ ಕಳೆಯಲು ಮತ್ತು ವ್ಯಸನಗಳಿಗೆ ದಾಸರಾಗುತ್ತಿರುವ ಯುವಕರನ್ನು ಸನ್ಮಾರ್ಗದತ್ತ ಕೊಂಡ್ಯೊಯಲು ವಚನ ಮಹೋತ್ಸವ ಸಹಾಯಕವಾಗಿದೆ’ ಎಂದರು.

ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಸದಸ್ಯರಾದ ಸಿದ್ದು ಮೀಶಿ, ಕಿರಣ ಪಿಸಾಳ, ಈಶ್ವರ ವಾಳೆನ್ನವರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಈಶ್ವರ ಕರಬಸನವರ, ನಿಂಗಪ್ಪ ಕಡಪಟ್ಟಿ, ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಆಶಾದೇವಿ ಗುಡಗುಂಟಿ, ಕಸ್ತೂರಿ ಹೊಟ್ಟಿ, ಶಂಕರ ಹನಗಂಡಿ, ಅಣ್ಣಪ್ಪ ಜಗದೇವ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *