ಬೀದರ
ಮಕ್ಕಳು ನಮ್ಮ ನೆಲದ ಸಂಸ್ಕೃತಿ ಸಂಸ್ಕಾರದ ವಾರಸುದಾರರು, ಆದ್ದರಿಂದ ಮಕ್ಕಳು ತಮ್ಮ ತಮ್ಮ ಜೀವನದಲ್ಲಿ ವಿಶ್ವಗುರು ಬಸವಣ್ಣನವರ ನಡೆ ನುಡಿಗಳನ್ನು ಅಳವಡಿಸಿಕೊಂಡು ಒಳ್ಳೆಯ ನಾಗರಿಕರಾಗಬೇಕು ಎಂದು ಬೈಲೂರು-ಮುಂಡರಗಿ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ತಿಳಿಸಿದರು.
ಇಂದು ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ಅಡಿಯಲ್ಲಿ ಆಯೋಜಿಸಿದ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೀದರ ಜಗತ್ತಿಗೆ ಸಮಾನತೆ ಸಾರಿದ ನೆಲ, ಇಲ್ಲಿನ ವಿದ್ಯಾರ್ಥಿಗಳು ಜಗತ್ತಿಗೆ ಮಾದರಿಯಾಗಬೇಕು. ಇತ್ತೀಚಿಗೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಸೋಶಿಯಲ್ ಮೀಡಿಯಾ ಬಳಕೆಯಿಂದ ತಮ್ಮ ಮನಸ್ಸನ್ನು ಕಲುಷಿತ ಗೊಳಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದಿನ ಮಕ್ಕಳಿಗೆ ಸನ್ಮಾರ್ಗದ ದಾರಿ ತೋರುವ ಉದ್ದೇಶದಿಂದ ಈ ಅಭಿಯಾನ ಅವಶ್ಯಕವಾಗಿದೆ ಎಂದರು.
ಗದಗ ಸಂಸ್ಥಾನಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಬಸವಣ್ಣನ್ನವರು ಸಮಾನತೆಗಾಗಿ ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿ ನಡೆಸಿದರು. ಇಂತಹ ಚಳುವಳಿ ಜಗತ್ತಿನಲ್ಲಿ ಇನ್ನೂವರೆಗೂ ಇನ್ನೊಂದು ನಡೆದಿಲ್ಲ. ಬಸವಣ್ಣನವರು ಬಿತ್ತಿದ ಸಂಸ್ಕಾರದಿಂದ ಇಂದಿನ ಮಕ್ಕಳು ವಿಮುಖರಾಗುತ್ತಿರುವ ಈ ಸನ್ನಿವೇಶದಲ್ಲಿ ಈ ಕಾರ್ಯಕ್ರಮ ಬಹುಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ವಚನ ಸಾಹಿತ್ಯದ ಕುರಿತು ಅವರಲ್ಲಿರುವ ಪ್ರಶ್ನೆಗಳನ್ನು ಕೇಳಿದರು, ಇದಕ್ಕೆ ವೇದಿಕೆ ಮೇಲಿದ್ದ ಪೂಜ್ಯರು ಸಮರ್ಪಕ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಮಹಾಸ್ವಾಮೀಜಿ, ಬೆಳಗಾವಿ ಅಲ್ಲಮಪ್ರಭು ಮಹಾಸ್ವಾಮೀಜಿ, ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ, ಶಾಹೀನ್ ಸಂಸ್ಥೆಯ ಮುಖ್ಯಸ್ಥೆ ಮೊಹಮ್ಮದ್ ಖದಿರ್, ಸೇರಿದಂತೆ ಅನೇಕ ಪೂಜ್ಯರು, ಮುಖಂಡರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.