ಚಿತ್ರದುರ್ಗ
ಇಂದಿನ ಕಾಲದಲ್ಲಿ ಯಾವುದೇ ಘಟನೆ ನಡೆದರೂ ಕ್ಷಣಮಾತ್ರದಲ್ಲಿ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತದೆ. ಆದರೆ ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು ಎಷ್ಟೇ ದೊಡ್ಡ ಕೆಲಸ ಮಾಡಿದರೂ ಸಹ ಅದನ್ನು ತಾನು ಮಾಡಿದ್ದು ಎಂದು ಗುರುತಿಸಿಕೊಳ್ಳಲಿಲ್ಲ. ಸುಮ್ಮನೇ ಸಮಾಜ ಕಾರ್ಯವನ್ನು ಮಾಡುತ್ತ ಸಾಗಿದರು. ಹಾಗಾಗಿ ಅಂಥ ಮಹಾನುಭಾವರ ಜೀವನ ಸಾಧನೆಗಳನ್ನು, ಅವರು ಮಾಡಿದಂತಹ ಸತ್ಕಾರ್ಯಗಳನ್ನು ಸದಾ ಸ್ಮರಿಸಬೇಕಾಗುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.
ಹೊಳಲ್ಕೆರೆಯ ಒಂಟಿ ಕಂಬದ ಮುರುಘಾಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೩೨ನೇ ಸ್ಮರಣೋತ್ಸವದ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತ, ಮಹಾತ್ಮರ ಮೂಲ ಹುಡುಕಬಾರದು ಎನ್ನುವ ಮಾತಿದೆ. ಜಯದೇವ ಶ್ರೀಗಳವರ ಮಾತುಗಳು ಭಾಷಣ ಆಗಿರುತ್ತಿತ್ತು. ಅವರ ಅಂತರಂಗದ ನುಡಿಯು ಲಿಂಗ ಮೆಚ್ಚುವಂತಿರುತ್ತತ್ತು. ಅವರ ಒಂದು ಭಾಷಣ ಕೇಳಿದರೆ ಸಾಕು ಧನ್ಯತಾಭಾವ ಮೂಡುತ್ತಿತ್ತು. ಅಷ್ಟೊಂದು ಅಧ್ಯಯನಶೀಲರಾಗಿದ್ದರು. ಈಗಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ತುಂಬ ಸುಲಭ. ಆದರೆ ಸುಮಾರು ೭೦ ವರ್ಷಗಳ ಹಿಂದೆ ಸಂಸ್ಥೆಗಳನ್ನು ಕಟ್ಟುವುದು ಸುಲಭ ಆಗಿರಲಿಲ್ಲ. ಮಲ್ಲಿಕಾರ್ಜುನ ಶ್ರೀಗಳು ೧೯೬೪ರಲ್ಲಿ ಎಸ್.ಜೆ.ಎಂ. ವಿದ್ಯಾಪೀಠವನ್ನು ಸ್ಥಾಪಿಸಿ ತಾಂತ್ರಿಕ, ದಂತವೈದ್ಯಕೀಯ, ಔಷಧೀಯ, ಪದವಿ, ಪದವಿ ಪೂರ್ವ, ಪ್ರೌಢಶಾಲೆ, ಪ್ರಾಥಮಿಕ ಹೀಗೆ ಒಂದೊಂದೆ ಶಾಲಾ ಕಾಲೇಜುಗಳನ್ನು ಕಟ್ಟಿ ಶಿಕ್ಷಣಸಂಸ್ಥೆಗಳ ಮೂಲಪ್ರವರ್ತಕರಾಗಿದ್ದಾರೆ. ಅಂತಹ ಮಹಾಂತರ ಸ್ಮರಣೆಯನ್ನು ಎಲ್ಲರೂ ಸೇರಿ ಆಗಸ್ಟ್ ೮ರಂದು ಅರ್ಥಪೂರ್ಣವಾಗಿ ಮಾಡೋಣ ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳವರು ಜ್ಞಾನದ ಸೂರ್ಯ. ಯಾವಾಗಲೂ ಅವರ ವಾಣಿಯಲ್ಲಿ ಜ್ಞಾನದ ಗಂಗೆ ಹರಿದುಬರುವಂತೆ ಭಾಸವಾಗುತ್ತಿತ್ತು. ಶ್ರೀಗಳು ಸಮಾಜಕ್ಕೆ ತಾತ್ವಿಕವಾದ ಸಂದೇಶವನ್ನು ನೀಡಿದ್ದಾರೆ. ಮಾತನಾಡಿದರೆ ಮುತ್ತಿನಂತೆ ಮಾತನಾಡಬೇಕು. ಮಾತೆಂಬುದು ಜ್ಯೋತಿರ್ಲಿಂಗ ಎನ್ನುವ ಅಲ್ಲಮಪ್ರಭುಗಳ ವಾಣಿಗೆ ಶ್ರೀಗಳು ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರಲ್ಲದೆ, ಇಂಥ ಶ್ರೀಗಳವರ ಸ್ಮರಣೋತ್ಸವವನ್ನು ೨೦೨೨ರಿಂದ ಪ್ರತಿವರ್ಷ ಆಗಸ್ಟ್ ೮ನೇ ತಾರೀಕು ಆಯೋಜಿಸುತ್ತ ಬರಲಾಗಿದೆ. ಈ ಬಾರಿಯೂ ಆಗಸ್ಟ್ ೮ಕ್ಕೆ ಆಚರಿಸಲು ಶ್ರೀಮಠದ ಆಡಳಿತ ಮಂಡಳಿಯು ತೀರ್ಮಾನಿಸಿದೆ ಎಂದರು.
ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಮಾಡಿರುವ ಸಾಧನೆಗಳು, ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಶಾಲಾಕಾಲೇಜುಗಳ ಸ್ಥಾಪಿಸುವುದರ ಮೂಲಕ ನಾಡಿನಲ್ಲಿ ಶೈಕ್ಷಣಕ ಕ್ರಾಂತಿಯನ್ನೇ ಮಾಡಿದ್ದಾರೆ. ಅಪರಿಮಿತವಾದ ಹೆಸರು ಮಾಡಿದವರು. ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಅವರ ಘನತೆ, ಗಾಂಭಿರ್ಯ ಮತ್ತು ಪ್ರೌಢಿಮೆಯಿಂದ ಮೇರುವ್ಯಕ್ತಿತ್ವವುಳ್ಳರಾಗಿದ್ದರು. ಅಂಥ ಪೂಜ್ಯರನ್ನು ಸದಾ ಸ್ಮರಿಸಿಕೊಳ್ಳುತ್ತ ಗೌರವ ಸಲ್ಲಿಸುವಂತಾಗಬೇಕು ಎನ್ನುವುದು ಇಡೀ ಸಮಾಜಕ್ಕೆ ಒಪ್ಪಿಗೆಯಾಗಿರುವ ಮಾತಾಗಿದೆ. ಈ ಬಾರಿಯ ಸ್ಮರಣೋತ್ಸವಕ್ಕೆ ಹೊಳಲ್ಕೆರೆ ಭಾಗದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕೆಂದರು.
ಶ್ರೀಮಠಕ್ಕೆ ನಾವೆಲ್ಲ ಭಕ್ತರಷ್ಟೆ. ಯಾವುದೇ ಪ್ರತಿಫಲಾಪೇಕ್ಷೆ ಹೊಂದಿದವರಲ್ಲ. ಮಠವು ಎತ್ತರಕ್ಕೆ ಬೆಳೆದಷ್ಟೂ ಸಮಾಜವು ಅಷ್ಟೇ ಸಂತೋಷವಾಗಿರುತ್ತದೆ. ಜಯದೇವ ಶ್ರೀಗಳು ಹಾಕಿಕೊಟ್ಟಿರುವ ದಾರಿಯಲ್ಲಿ ಜಯವಿಭವ ಶ್ರೀಗಳು ಮಾಡಿದಂತಹ ಕಾರ್ಯಕ್ರಮಗಳು, ಅದಕ್ಕೆ ಪೂರಕವಾದಂತಹ ವ್ಯವಸ್ಥೆಯ ತಂದಂತಹ ಮಲ್ಲಿಕಾರ್ಜುನ ಶ್ರೀಗಳವರನ್ನು ಭೂಮಿ-ಚಂದ್ರ-ಸೂರ್ಯ ಇರುವವರೆಗೂ ಸ್ಮರಿಸುವಂತಹ ಕರ‍್ಯ ಇಂಥ ಪವಿತ್ರ ಜಾಗದಲ್ಲಿ ನಡೆಯುತ್ತದೆ ಎಂದು ಹೇಳಿದರು.
ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಗಿರೀಶ್, ಕೆಇಬಿ ಷಣ್ಮುಖಪ್ಪ, ರೈತಸಂಘದ ಮುಖಂಡರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ, ನೂರಾರು ಸಂಖ್ಯೆಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಿಂದ ಭಕ್ತರು ಭಾಗವಹಿಸಿದ್ದರು.
ಮುರುಘೇಶ್ ಸ್ವಾಗತಿಸಿ, ನಿರೂಪಿಸಿದರು.