ಗುಳೇದಗುಡ್ಡ:
ಬಸವ ಕೇಂದ್ರ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಪ್ರಶಾಂತ ತಮ್ಮಣ್ಣೆಪ್ಪ ಉದ್ನೂರ ಅವರ ಮನೆಯಲ್ಲಿ ಶನಿವಾರ ನಡೆಯಿತು.
ಅಂದು ವಚನ ಚಿಂತನೆಗಾಗಿ ಆಯ್ದುಕೊಂಡ ವ್ಯೂಮ ಮೂರುತಿ ಅಲ್ಲಮಪ್ರಭು ತಂದೆಗಳ ವಚನ ಹೀಗಿದೆ –
ಚಿತ್ತಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
ಮನಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
ಶಿವಧ್ಯಾನ ಕರಿಗೊಳ್ಳದವನ ಮಾತು ಸಟೆ
ಗುಹೇಶ್ವರಲಿಂಗವನರಿಯದ ಭ್ರಾಂತಿ ಯೋಗಿಗಳ ಮನ
ಬೇತಾಳದಂತೆ ಕಾಡುವುದು.
ಕಾರ್ಯಕ್ರಮವು ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ವಚನ ಗಾಯನದೊಂದಿಗೆ ಪ್ರಾರಂಭವಾಯಿತು. ಶರಣ ಪ್ರೊ. ಶ್ರೀಕಾಂತ ಗಡೇದ ಅವರು ವಚನ ಚಿಂತನೆಗೆ ತೊಡಗುತ್ತಾ, ಸಂಕ್ತಿಪ್ತವಾಗಿ ವಚನಕಾರರಾದ ಅಲ್ಲಮ ತಂದೆಗಳ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಿಸುತ್ತಾ, ಚಲನೆ ಮನದ ಸಹಜ ಸ್ವಭಾವ. ಮಲತ್ರಯಗಳ ಪ್ರಭಾವದಿಂದ ಮನ ಅರಿಷಡ್ವರ್ಗಗಳ ಕಡೆ ಮುಖ ಮಾಡಿಕೊಂಡಿರುತ್ತದೆ. ಅರಿಷಡ್ವರ್ಗಗಳಿಂದ ಮುಕ್ತರಾಗಲು ಬಸವಯೋಗ (ಶಿವಯೋಗ) ಸಹಕಾರಿಯಾಗುತ್ತದೆ.
ಚಿತ್ತಶುದ್ಧತೆಯಿಂದ ಶಾಂತತೆ ದೊರೆಯುತ್ತದೆ., ನಿಷ್ಕಲ್ಮಶ ಮನದ ಭಕ್ತಿ ಗಟ್ಟಿಗೊಳ್ಳಲು ಅನುವು ಮಾಡಿಕೊಡುತ್ತದೆ. ಬಾಹ್ಯಾಡಂಬರ ಮೂರ್ತಿ ಪೂಜೆಗೆ ಪ್ರಚೋದಿಸುತ್ತದೆ. ಅರಿವು ಆಂತರಿಕವಾದಾಗ ಮನದ ಸಂಚಲನವನ್ನು ಹತೋಟಿಗೆ ತರಬಹುದು. ಪ್ರಾಮಾಣಿಕತೆ, ತ್ರಿಕರಣ ಶುದ್ಧ, ನಿಷ್ಠೆ, ತಪಸ್ಸು … ಗಳಿಂದ ಕೂಡಿದ ಕಾಯ/ಕಾಯಕ ನಮ್ಮೊಳಗಿನ ಶಿವತತ್ವದಲ್ಲಿರುವುದನ್ನು ಪ್ರತಿನಿಧಿಸುತ್ತವೆ.
ಲಿಂಗವಂತನಲ್ಲಿ ತತ್ವಗಳು/ಸಿದ್ಧಾಂತಗಳ ಆಚರಣೆಗಳು ಅವಧಾನವಾಗಿರದಿದ್ದರೆ ಲಿಂಗವನರಿಯಲಿಕ್ಕೆ ಸಾಧ್ಯವಾಗದೇ ಬೇತಾಳದಂತೆ ನಮ್ಮ ಮನ ಭ್ರಾಂತಿಗೆ ಒಳಗಾಗುತ್ತದೆ. ಕಾರಣ ಶರಣರ ವಚನ ಪಥದಲ್ಲಿ ನಮ್ಮ ಬದುಕನ್ನು/ಮನವನ್ನು ಕಟ್ಟಿಗೊಳ್ಳಬೇಕೆಂದು ತಿಳಿಸಿದರು.
ವಚನ ಚಿಂತನೆಯನ್ನು ಮುಂದುವರಿಸಿದ ಆಯುರ್ವೇದ ವಾಚಸ್ಪತಿಗಳಾದ ಡಾ. ಗಿರೀಶ ನೀಲಕಂಠಮಠ ಅವರು ಪುರುಷನು (ದೇಹ/ಜೀವ) ಪಂಚವಿಂಶತಿ ತತ್ತ್ವಗಳಿಂದ ಸಂಘಟಿಸಲ್ಪಟ್ಟಿದ್ದೆ. ಆ ಇಪ್ಪತ್ತೈದು ತತ್ತ್ವಗಳಲ್ಲಿ ಉಭಯೇಂದ್ರಿಯವಾಗಿರುವ ಮನಸ್ಸು ಸ್ವಭಾವತಃ ಚಂಚಲವಾಗಿರುವುದು. ಪ್ರವೃತ್ತಿ ಮಾರ್ಗದಲ್ಲಿ ಬಹಿರ್ಮುಖಿ ಗತಿಯಲ್ಲಿರುವ ಅದು ಐಹಿಕ ವಿಷಯಗಳ ಚಾಪಲ್ಯಕ್ಕೆ ಒಳಗಾಗಿ ಪುರುಷ(ಜೀವ)ನನ್ನು ಭವ ಬಂಧನದಲ್ಲಿ ಸಿಲುಕಿಸುತ್ತದೆ.

ಅಂತಹ ಚಂಚಲತೆಯುಳ್ಳ ಮನವು ಶಿವಧ್ಯಾನಕ್ಕೆ ಎಡೆ ನೀಡದು. ಶಿವಧ್ಯಾನ/ಶಿವತತ್ತ್ವ ಅಳವಡದವನ ಮಾತು ಅಸತ್ಯವಾಗಿರುತ್ತದೆ, ಭವದ ಸೂತಕಕ್ಕೊಳಗಾಗಿರುತ್ತದೆ. ಗುಹೇಶ್ವರನೆಂಬ ಅನಾದಿ ಪರಶಿವ ತತ್ತ್ವವನ್ನು ಅರಿಯದಂತಹ ಭವಿಗಳನ್ನು ಪ್ರಭುದೇವರು ಭ್ರಾಂತಿಯೋಗಿಗಳೆಂದು ವಿಡಂಬಿಸುತ್ತಾರೆ. ಅವರ ಮನ ಬೇತಾಳನಂತೆ ಸದಾ ಪ್ರಾಪಂಚಿಕ ವಿಷಯಗಳಿಗೆ ಕಟ್ಟಿಹಾಕಿ ಅವರನ್ನು ಬದ್ಧಭವಿಗಳನ್ನಾಗಿಸುತ್ತದೆಂದು ಪ್ರಭುದೇವರು ಎಚ್ಚರಿಸುತ್ತಾರೆ.
ತನುವಿನಲ್ಲಿ ಹುಸಿ, ಮನದಲ್ಲಿ ಪ್ರಾಪಂಚಿಕ ವಿಷಯ ತುಂಬಿದ್ದರಿಂದ, ದೇಹವೆಂಬ ಮನೆಯಲ್ಲಿರುವ ಮನೆಯೊಡೆಯ ಜಾಗೃತಿರಹಿತನಾಗಿ ಮಲಗಿಬಿಟ್ಟಿದ್ದಾನೆ. ತನುವೆಂಬ ವೃಕ್ಷದಲ್ಲಿ, ಇಂದ್ರಿಯಗಳೆಂಬ ಶಾಖೆಗಳಲ್ಲಿಯ, ವಿಷಯವೆಂಬ ಹಣ್ಣುಗಳನ್ನು ಭೋಗಿಸುವುದಲ್ಲಿ ಮಗ್ನವಾಗಿರುವ ಮನವೆಂಬ ಮಂಗವನ್ನು ಶಿವತತ್ತ್ವದ ನೆನಹು ಎಂಬ ಪಾಶದಲ್ಲಿ ಕಟ್ಟಿಹಾಕಬೇಕಿದೆ. ಪಲ್ಲಕ್ಕಿಯ ಮೇಲಿನ ನಾಯಿಯು ರಸ್ತೆಯ ಮೇಲಿನ ಎಲುಬನ್ನು ಕಂಡು ಪೂರ್ವದ ವಾಸನೆಗೆಳಸಿ ಥಟ್ಟನೆ ಅದರತ್ತ ನೆಗೆಯುವಂತೆ, ಸಾಧನಾ ಪಥದಲ್ಲಿರುವ ಸಾಧಕನ ಮನವೂ ಕೂಡ ಪ್ರಾಪಂಚಿಕತೆಗೆ ಎಳಸಿ ಒಂದು ಕ್ಷಣ ಲಂಘಿಸಬಹುದು.
ಆದರೆ, ಅದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಶಿವಪಥದಲ್ಲಿರಿಸಿದರೆ ಅತ್ತಲಿತ್ತ ಹೋಗದಂತೆ, ಅನ್ಯ ವಿಷಯಕ್ಕೆಳಸದಂತೆ ಹೆಳವನಾಗಿಸಿ ಬಿಡುತ್ತದೆ. ಲೋಕದ ಚಟುವಟಿಕೆಗಳಿಗೆಲ್ಲ ಸೂರ್ಯನೇ ಕಾರಣನಾದಂತೆ, ಇಂದ್ರಿಯಗಳ ಚೇಷ್ಟೆಗಳಿಗೆಲ್ಲ ಮೂಲ ಕಾರಣವಾಗಿರುವ ಮನಸ್ಸನ್ನು ಶಿವತತ್ತ್ವದಲ್ಲಿ ನೆಲೆಗೊಳಿಸಿದ ಬಳಿಕ ಭವವೆಂಬುದು ನಾಶವಾಗಿ ಬಿಡುತ್ತದೆ.
ಮನೆಯನ್ನು ಹಸನಾಗಿಡಲು ನಿತ್ಯ ಕಸಗುಡಿಸುವಂತೆ, ದೇಹದ ಶುದ್ಧಿಗಾಗಿ ನಿತ್ಯ ಸ್ನಾನಮಾಡುವಂತೆ, ಮನದ ಮೈಲಿಗೆಯ ಕಳೆಯಲು ಶಿವತತ್ತ್ವದ ಸಾರವ ಗರ್ಭೀಕರಿಸಿಕೊಂಡಿರುವ ಧರ್ಮಗ್ರಂಥವಾದ ವಚನಶಾಸ್ತ್ರವನ್ನು ಅಭ್ಯಸಿಸುತ್ತ ಶಿವಯೋಗದ ಅನುಷ್ಠಾನವನ್ನು ನಿಚ್ಚಕ್ಕೆ ನಿಚ್ಚದಲ್ಲಿ ಮಾಡಬೇಕು.

ಆಲಿ-ಗಾಳಿಗಳು ನಿಯಂತ್ರಣಗೊಂಡ ಬಳಿಕ ಮನ ತಾನಾಗಿಯೇ ಸಹಜವಾಗಿ ಲಿಂಗಾನುಸಂಧಾನದಲ್ಲಿ ನಿರತವಾಗುತ್ತದೆ. ನಿತ್ಯದಲ್ಲಿ ಲಿಂಗ ನಿರೀಕ್ಷೆಣೆಯ ವಿಕಸಿತ ಹಂತದಲ್ಲಿ ತೊಡಗುತ್ತಾ, ಅಂಗ ಭಾವವಳಿದು ಲಿಂಗಭಾವ ಅಳವಟ್ಟಲ್ಲಿ ನಿವೃತ್ತಿ ಮಾರ್ಗ ಸನ್ನಿಹಿತ. ಚಂಚಲದ ಮನವು ಲಿಂಗದಲ್ಲಿ ನಿಶ್ಚಲವಾಗಿರಲು ಶಿವತತ್ತ್ವವು ಪಕ್ವವಾಗಿ ಸಾಧಕನು ಭ್ರಾಂತಿಯೋಗಿಯಾಗದೇ ಶಿವಯೋಗಿಯಾಗುತ್ತಾನೆ ಎಂದು ಮಾರ್ಮಿಕವಾಗಿ ಸವಿಸ್ತಾರವಾಗಿ ವಚನ ನಿರ್ವಚನಗೈದರು.
ಕಾರ್ಯಕ್ರಮವು ಜಯಶ್ರೀ ಬರಗುಂಡಿ ಹಾಗೂ ಸಂಗಡಿಗರ ಸಾಮೂಹಿಕ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ, ನೇತ್ರಾವತಿ ರಕ್ಕಸಗಿ, ಕುಮಾರ ಅರುಟಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಸಿದ್ಧಲಿಂಗಪ್ಪ ಬರಗುಂಡಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
