ವಚನಗಳಿಂದ ಸದೃಢ ಮನಸ್ಸುಗಳ ಮಕ್ಕಳನ್ನು ರೂಪಿಸಲು ಸಾಧ್ಯ: ವಾಣಿ ಬಸವರಾಜ

ಮಮತಾ ನಾಗರಾಜ
ಮಮತಾ ನಾಗರಾಜ

ದಾವಣಗೆರೆ:

ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀಮತಿ ಸಹನಾ ರವಿ ಇಂಟರ್ನ್ಯಾಷನಲ್ ಸ್ಕೂಲನಲ್ಲಿ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದಿಂದ 176ನೇ ಕದಳಿ ಕಮ್ಮಟದಲ್ಲಿ ಶರಣೆ ನೀಲಾಂಬಿಕೆಯವರ ಶರಣೋತ್ಸವ, ಮಕ್ಕಳ ದಿನಾಚರಣೆ, ವಚನ ದಾಸೋಹ ಹಾಗೂ ಲಿಂ. ಗಂಗಮ್ಮ ಸಿದ್ದಬಸಪ್ಪ ಮತ್ತು ಶರಣ ಸಿದ್ದಬಸಪ್ಪ ಅವರ ದತ್ತಿ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ಕದಳಿ ಮಹಿಳಾ ವೇದಿಕೆಯ ಸದಸ್ಯೆ ಭವಾನಿ ಶಂಭುಲಿಂಗಪ್ಪ ವಿದ್ಯಾರ್ಥಿಗಳಿಗೆ ವಚನಗಳನ್ನು ಹೇಳಿಕೊಟ್ಟರು. ಮುಖ್ಯ ಅತಿಥಿಯಾಗಿದ್ದ ಸಹನಾ ರವಿ ಮಕ್ಕಳಿಗೆ ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೂ ಗುರುಹಿರಿಯರ ಆಶೀರ್ವಾದ ಹಾಗೂ ಒಳ್ಳೆಯ ಗುರಿಯ ಅವಶ್ಯಕತೆ ಇದೆ ಎಂದು ಸಣ್ಣ ಕಥೆಯ ಮೂಲಕ ಹಿತನುಡಿಗಳನ್ನು ಆಡಿದರು.

ದತ್ತಿದಾನಿಗಳು  ಹಾಗೂ ಬಹುಮಾನದ ಪ್ರಾಯೋಜಕರಾದ ವೈ. ಎಸ್. ನಟರಾಜ ಮತ್ತು ಪ್ರಮೀಳಾ ನಟರಾಜ ಮಕ್ಕಳಿಗೆ ಉತ್ತಮ ಪ್ರಜೆಗಳಾಗಲು ವಿದ್ಯಾಭ್ಯಾಸ ಬಹಳ ಮುಖ್ಯವಾದದ್ದು ಎಂದು ಹೇಳಿ, ಶರಣರ ವಚನ ಲಿಖಿತ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, ವೇದಿಕೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ವಾಣಿ ಬಸವರಾಜ “ಶರಣರ ವಚನ ಸಾಹಿತ್ಯ ಮಕ್ಕಳಿಗೆ ಅತ್ಯಗತ್ಯ” ಎಂಬ ವಿಷಯದ ಬಗ್ಗೆ ಮಕ್ಕಳ ಜೊತೆ ಸಂವಾದ ನಡೆಸುತ್ತಾ ಉಪನ್ಯಾಸ ನೀಡಿದರು.

ಉಪನ್ಯಾಸದಲ್ಲಿ, ಸದೃಢ ಸಮಾಜದ ಸದೃಢ ಮನಸ್ಸುಗಳು ಮಕ್ಕಳು ಎಂದು ಹೇಳಿದರು. ಹಾಗೆ ವಚನ ಎಂದರೆ ಜೀವನದ ಮೌಲ್ಯಗಳನ್ನು ತಿಳಿಹೇಳುವ ಪದಗಳ ಜೋಡಣೆಯಾಗಿವೆ ಎಂದರು.

ಜಾತಿ ಅಸ್ಪೃಶ್ಯತೆಯನ್ನು ತೊಡೆದು ಹಾಕುವಲ್ಲಿ, ಸಮಾಸಮಾಜದ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ಅತಿ ಹಿರಿದಾದುದು ಎಂದರು. ಶರಣ ಶರಣೆಯರ ಹಿತನುಡಿಗಳೇ ಅನುಭವಾಮೃತಗಳಾಗಿರುವ,ಮನದ ಮೈಲಿಗೆಯನ್ನು ಹೊಡೆದೋಡಿಸುವ ಸ್ವಚ್ಛತಾ ಸಾಧನವೇ ವಚನಗಳು.

ಸ್ಪರ್ಧಾತ್ಮಕ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳದೆ ಸಮಾಜದ ಸದೃಢ ಪರಿಪೂರ್ಣ ವ್ಯಕ್ತಿಯಾಗಿ ತಾವು ಬೆಳೆಯಬೇಕು, ಬೇರೆಯವರನ್ನೂ ಬೆಳೆಸಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.

ಬೇವಿನ ಬೀಜ ಬಿತ್ತಿ ಮಾವಿನ ಫಲ ಪಡೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆ ನಮ್ಮ ಮನಸ್ಸಿನಲ್ಲಿ ಬಿತ್ತುವ ಬೀಜಗಳು ಫಲ ಭರಿತವಾಗಿರಬೇಕು ಎಂದರು. ಮೊದಲು ನಮ್ಮನ್ನು ನಾವು ಸರಿಯಾಗಿ ಅರಿತು ಅರ್ಥ ಮಾಡಿಕೊಂಡು ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡಬೇಕು.

ನಾವು ಗಳಿಸಿದ್ದರಲ್ಲಿ ನಮಗೆ ಅವಶ್ಯಕತೆ ಇರುವಷ್ಟು ಇಟ್ಟುಕೊಂಡು ಉಳಿದದ್ದನ್ನು ಬೇರೆಯವರಿಗೆ ದಾಸೋಹ ಮಾಡಬೇಕು, ಇಂತಹ ಕಾರ್ಯಕ್ರಮಕ್ಕೆ ದಾನಿಗಳೇ ಕಾರಣ. ಇಂತಹ ಮನೋಭಾವ ತಾವು ಬೆಳೆಸಿಕೊಳ್ಳಬೇಕು ಎಂದು ಅತ್ಯಂತ ಮೌಲ್ಯಯುತವಾದ ವಿಷಯಗಳನ್ನು ಮಕ್ಕಳಿಗೆ ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಮಮತಾ ನಾಗರಾಜ ಶರಣೆ ನೀಲಾಂಬಿಕೆಯವರ  ವೈಚಾರಿಕ ನಿಲುವನ್ನು ತಿಳಿಸಿದರು. ವಚನಗಳು ಎಲ್ಲರಿಗೂ ಅರ್ಥವಾಗುವ ಸರಳ ಕನ್ನಡ ಬಾಷೆಯಲ್ಲಿ ರಚನೆಯಾಗಿವೆ, ಮಕ್ಕಳು ಪ್ರತಿನಿತ್ಯ ಅವುಗಳನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಜಿಲ್ಲಾ ಘಟಕದ ಸಹಕಾರ್ಯದರ್ಶಿಯಾದ ನಂದಿನಿ ಗಂಗಾಧರ್ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿನಿ ದಿಶಾ ಪ್ರಾರ್ಥಿಸಿದರು. ಉಪಾಧ್ಯಕ್ಷೆ ವಿಜಯ ಚಂದ್ರಶೇಖರ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ ಕೆ.ಆರ್  ದತ್ತಿ ಮತ್ತು ದತ್ತಿದಾನಿಗಳ ಪರಿಚಯ ಮಾಡಿದರು. ಖಜಾಂಚಿ ಸೌಮ್ಯ ಸತೀಶ ಉಪನ್ಯಾಸಕರನ್ನು ಪರಿಚಯಿಸಿದರು.  ಸಹಕಾರ್ಯದರ್ಶಿ ಪೂರ್ಣಿಮಾ ಪ್ರಸನ್ನಕುಮಾರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.

ಶಾಲೆಯ ಸಿಬ್ಬಂದಿ ವರ್ಗದವರು, ತಾಲೂಕು ಘಟಕದ ಅಧ್ಯಕ್ಷರಾದ ನಿರ್ಮಲಾ ಶಿವಕುಮಾರ, ವಿನೋದ ಅಜಗಣ್ಣನವರ, ಗಾಯತ್ರಿ ವಸ್ತ್ರದ, ಆಶಾ ಮಹಾಬಲೇಶ್ವರ ಗೌಡ, ಸುಜಾತಾ ರವೀಂದ್ರ, ಲಕ್ಷ್ಮಿ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *