ಬಸವ ತತ್ವದಿಂದ ಸುಸ್ಥಿರ ಸಮಾಜ ನಿರ್ಮಾಣ : ಭಾಲ್ಕಿಶ್ರೀ
ಮಂಡ್ಯ
ಸ್ವಸ್ಥ ಸಮಾಜ ನಿರ್ಮಾಣವಾಗಲು ಬಸವ ತತ್ವದ ಧರ್ಮಾಚರಣೆ ಪೂರಕವಾಗಿದ್ದು, ಜಾತಿಗಳು ಮಾರಕವಾಗಿ ಪರಿಣಮಿಸಿವೆ ಎಂದು ಭಾಲ್ಕಿ ಮಠದ ಡಾ.ಬಸವಲಿಂಗಪಟ್ಟದ ದೇವರು ಸ್ವಾಮೀಜಿ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಜಾತಿಗಳು ಜಾಲಿ ಮರವಿದ್ದಂತೆ, ಧರ್ಮ ಎಂಬುದು ಮಾವಿನ ಮರವಿದ್ದಂತೆ ಎನ್ನುವ ಮೂಲಕ ಪ್ರಸ್ತುತ ಸಾಮಾಜಿಕ ವೈಪರೀತ್ಯಗಳ ಕುರಿತು ಮಾರ್ಮಿಕವಾಗಿ ವಿಶ್ಲೇಷಿಸಿದರು.

ಧರ್ಮ ಎಂದೂ ಸಂಕುಚಿತವಾಗಿರುವುದಿಲ್ಲ. ಇತ್ತೀಚೆಗೆ ಸಮಾಜದಲ್ಲಿ ಧರ್ಮವನ್ನು ಅಪಾರ್ಥ ಮಾಡಿಕೊಂಡು, ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ಅದನ್ನು ರಾಡಿಯಾಗಿಸಲಾಗಿದೆ. ಧರ್ಮವೆಂದರೆ ಕೆಳಗೆ ಬಿದ್ದವರನ್ನು ಮೇಲೆತ್ತುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಹಸಿದವರಿಗೆ ಅನ್ನ ನೀಡುವುದು, ಇಂತಹ ಆಚಾರಗಳೇ ಧರ್ಮದ ಮೂಲ ಆಶಯಗಳಾಗಿವೆ. ಆದರೆ ಇತ್ತೀಚೆಗೆ ಜಾತಿಗಳನ್ನು ಮುನ್ನೆಲೆಗೆೆ ತಂದು ಅದನ್ನು ರೋಗವಾಗಿ ಮಾರ್ಪಡಿಸಿಕೊಂಡಿದ್ದೇವೆ. ಈ ರೋಗಕ್ಕೆ ಔಷಧವೇ ಧರ್ಮವಾಗಿದೆ ಎಂದು ಹೇಳಿದರು.
ವಿಶ್ವಗುರು ಎಂದೆನಿಸಿದವರು ಬಸವಣ್ಣ ಮಾತ್ರ:
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಬೇಬಿ ಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಪೀಠಾಧ್ಯಕ್ಷರಾದ ಶಿವಬಸವ ಸ್ವಾಮೀಜಿ, ೧೧ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಕ್ರಾಂತಿಯನ್ನೇ ಮಾಡಿದರು. ಅಂದಿನಿಂದ ಇಂದಿನ ೨೧ನೇ ಶತಮಾನದವರೆಗೂ ವಿಶ್ವದ ಗುರು ಆಗಿರುವವರು ಬಸವಣ್ಣನವರು ಮಾತ್ರ ಎಂದರು.

ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪ ಎಂಬುದಿರಲೇ ಇಲ್ಲ ಎಂಬ ಆರೋಪಗಳು ಎದುರಾದವು. ಆಗ ವಕೀಲರಾಗಿದ್ದ ಫ.ಗು.ಹಳಕಟ್ಟಿ ಅವರು ಅತ್ಯಂತ ಬಡತನದಲ್ಲಿದ್ದರೂ ಕೂಡ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಮೂಲಕ ಅನುಭವ ಮಂಟಪದ ಫಲವನ್ನು ಜನಮಾನಸಕ್ಕೆ ತಲುಪಿಸಿದ್ದರು. ಹಳಕಟ್ಟಿಯವರು ಈ ಪ್ರಯತ್ನ ಮಾಡದಿದ್ದರೆ ಇಂದಿನ ತಲೆಮಾರು ಅನುಭವ ಮಂಟಪವನ್ನು ನಂಬುತ್ತಲೇ ಇರಲಿಲ್ಲ. ಆದ್ದರಿಂದ ಬಸವಾದಿ ಶರಣರ ಆದರ್ಶ ತತ್ವಗಳನ್ನು ಜನಮಾನಸದಲ್ಲಿ ಬಿತ್ತಬೇಕಾಗಿದೆ.
ಆಸ್ತಿಕತೆಯನ್ನು ಮರೆತು ನಾಸ್ತಿಕತೆ ಹೆಚ್ಚಾಗಿದೆ. ಕಂದಾಚಾರ ಎಂಬುದು ಸಮಾಜದಲ್ಲಿ ವಿಜೃಂಭಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಬಸವ ತತ್ವವನ್ನು ಬಿತ್ತಿದರೆ ಮುಂದೆ ಅದು ಬೆಳಕಾಗಿ ಪರಿವರ್ತನೆಯಾಗಲಿದೆ. ಸ್ವಸ್ಥ ಸಮಾಜಕ್ಕೆ ಅದುವೇ ಮಾರ್ಗದರ್ಶನ ನೀಡಲಿದೆ ಎಂಬ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಾಗುತ್ತಿದೆ ಎಂದು ಹೇಳಿದರು.
ಜ್ಞಾನದಷ್ಟೇ ಸಂಸ್ಕಾರವೂ ಮುಖ್ಯ:
ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ನಗರಸಭೆ ಆಯುಕ್ತರಾದ ಪಂಪಾಶ್ರೀ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪುಸ್ತಕ ಜ್ಞಾನ ಎಷ್ಟು ಮುಖ್ಯವೋ ಸಂಸ್ಕಾರವೂ ಅಷ್ಟೇ ಮುಖ್ಯವಾಗಿದೆ. ನಾವೆಲ್ಲರೂ ಕಾಯಕಕ್ಕೆ ಆದ್ಯತೆ ನೀಡಿ ಈ ಸಮಾಜವನ್ನು ಬೆಳೆಸಬೇಕು. ಸುಜ್ಞಾನದತ್ತ ಸಾಗಬೇಕು, ಸಾಂಸ್ಕೃತಿಕ ಜೀವನ ನಡೆಯಲು ಸಂಸ್ಕಾರ ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಚಾಲನೆ ನೀಡಿದ ಮಹಾಂತ ಸ್ವಾಮೀಜಿ ಶೀಗುಣಸಿ ಅವರು ಮಾತನಾಡಿ, ಸೆ.೧ರಿಂದ ಆರಂಭವಾದ ಬಸವ ಸಂಸ್ಕೃತಿ ಅಭಿಯಾನ ಇಂದು ಮಂಡ್ಯದಲ್ಲಿ ೨೫ನೇ ದಿನದಲ್ಲಿ ಮುಂದುವರೆದಿದೆ. ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದವರೇ ಬಸವಣ್ಣನವರು ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಬಣ್ಣಿಸಿದ್ದಾರೆ. ನಮ್ಮ ಅನುಭವವನ್ನು ಬಹಿರಂಗವಾಗಿ ಹಂಚಿಕೊಳ್ಳುವುದೇ ಅನುಭವ ಮಂಟಪ. ಸುಮಾರು ೨೭೦ ಶರಣರು, ೩೫ ಶರಣೆಯರು ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಈಗ ನಮಗೆ ದಕ್ಕಿರುವುದು ೨೩,೦೦೦ ವಚನಗಳು ಮಾತ್ರ, ಆದರೆ ೧೬೮ ಕೋಟಿ ವಚನಗಳಿದ್ದವು ಎಂಬುದನ್ನು ಇತಿಹಾಸ ತಿಳಿಸುತ್ತದ. ಹೀಗಿರುವಾಗ ಹಳಕಟ್ಟೆಯವರಂತಹ ಮನಸ್ಸುಗಳು ಬಹಳ ಶ್ರಮಿಸಿವೆ. ಯಡಿಯೂರಿನ ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ ವಚನ ಸಾಹಿತ್ಯದ ಮೂಲಕ ಲಿಂಗಾಯತ ಸಂಸ್ಕೃತಿಯನ್ನು ಪ್ರೇರೇಪಿಸಿದ್ದಾರೆ, ಹಾನಗಲ್ಲದ ಕುಮಾರಸ್ವಾಮಿ ಸೇರಿದಂತೆ ಅನೇಕರು ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ೩೦ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿರುವ ಸಾಹಿತ್ಯ ಎಂಬುದು ಇದ್ದರೆ ಅದುವೇ ವಚನ ಸಾಹಿತ್ಯ ಎಂದು ಹೆಮ್ಮೆಯಿಂದ ನುಡಿದರು.

ಬಳಿಕ ಮಾತೆ ಪ್ರಭುತಾಯಿ ಅವರು ಸ್ವರ್ಗ-ನರಕಗಳ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಸಾಮರಸ್ಯ ನಡಿಗೆ ರಥಯಾತ್ರೆ ಹೊರಟು ಜೆ.ಸಿ.ವೃತ್ತ, ಮಹಾವೀರ ವೃತ್ತದ ಮೂಲಕ ಸಾಗಿ ಕಲಾಮಂದಿರದಲ್ಲಿ ಸಮಾವೇಶಗೊಂಡಿತು.
ಕಾರ್ಯಕ್ರಮದಲ್ಲಿ ಅಲ್ಲಮ ಪ್ರಭುದೇವಸ್ವಾಮಿ, ಮಹಾಂತ ಸ್ವಾಮೀಜಿ, ಹುಣಸೂರಿನ ಶಿವಾನಂದ ಸ್ವಾಮೀಜಿ, ಅವ್ವೇರಹಳ್ಳಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು, ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ವೀರಶೈವ ವಿದ್ಯಾರ್ಥಿನಿಲಯದ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ಶಿವರುದ್ರಪ್ಪ, ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಎಂ.ಶಿವಕುಮಾರ್, ಮಹಾಂತಪ್ಪ, ಮಲ್ಲಿಕಾರ್ಜುನಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾಧ್ಯಕ್ಷ ಮಹಾದೇವಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.