ಮಂಡ್ಯ
ಹನ್ನೆರಡನೆಯ ಶತಮಾನದಲ್ಲಿ ವಚನಸಾಹಿತ್ಯ ರಚನೆಯ ಮೂಲಕ ಕನ್ನಡ ಭಾಷೆಯನ್ನು ದೈವೀಕರಿಸಿ, ದೇಶ ವಿದೇಶಗಳಲ್ಲಿ ಕನ್ನಡದ ಕಂಪು ಬೀರಿದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಹಾಗೂ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಅಗೌರವ ತೋರಿಸಲಾಗಿದೆ ಎಂದು ಕಲ್ಯಾಣ ಬಸವೇಶ್ವರ ಮಠದ ಪೀಠಾಧ್ಯಕ್ಷರಾದ ಓಂಕಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ನಡೆಸಿದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಭಾಷೆಗೆ ಮೆರಗು ತಂದುಕೊಟ್ಟ ಸಾಂಸ್ಕೃತಿಕ ನಾಯಕ ಅಣ್ಣಬಸವಣ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಶರಣರ ಭಾವಚಿತ್ರಗಳನ್ನು ಮುದ್ರಿಸಬೇಕು ಹಾಗೂ ಶರಣರ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಾಣಮಾಡಿ ಗೌರವಿಸಬೇಕೆಂದು ಮನವಿ ನೀಡಿದ್ದರೂ ಸಹ ಕಸಾಪ ರಾಜ್ಯಾಧ್ಯಕ್ಷರು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಅವರ ವೈದಿಕಶಾಹಿ ಮನೋಭಾವವನ್ನು ತೋರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೨ನೇ ಶತಮಾನಕ್ಕಿಂತ ಮೊದಲು ಪಂಡಿತರು ರಚಿಸುತ್ತಿದ್ದ ಸಾಹಿತ್ಯ ಪಂಡಿತರಿಗೆ ಮಾತ್ರ ಅರ್ಥವಾಗುತ್ತಿತ್ತು. ಜನಸಾಮಾನ್ಯರು ಬಳಸುತ್ತಿದ್ದ ಭಾಷೆಯನ್ನೇ ವಚನ ಸಾಹಿತ್ಯದ ಮಾಧ್ಯಮವನ್ನಾಗಿ ಮಾಡಿಕೊಂಡು ಹಿಂದುಳಿದವರು, ದೀನ ದಲಿತರು, ಮಹಿಳೆಯರು, ವಿದೇಶದಿಂದ ಬಂದು ಕನ್ನಡ ಕಲಿತು ವಚನ ಸಾಹಿತ್ಯ ರಚಿಸಿದ ಶರಣರ ಕೊಡುಗೆ ಕನ್ನಡ ನಾಡಿನಲ್ಲಿ ಸುವರ್ಣಾಕ್ಷರಗಳಿಂದ ಬರೆಸುವಂತಹದ್ದಾಗಿದೆ.
೧೨ನೇ ಶತಮಾನದಲ್ಲಿ ನಿಜವಾದ ಸಾಹಿತ್ಯ ಪರ್ವ ಪ್ರಾರಂಭವಾಯಿತು. ತುಳಿತಕ್ಕೊಳಗಾಗಿದ್ದ ಜನರು ಕೂಡ ಮುಖ್ಯವಾಹಿನಿಗೆ ಬಂದರು. ಬಸವಕಲ್ಯಾಣದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದುದರ ಫಲವಾಗಿ ವಿವಿಧ ದೇಶ ಮತ್ತು ನಾಡಿನಿಂದ ೭೭೦ ಅಮರ ಗಣಂಗಳು ಮತ್ತು ಒಂದು ಲಕ್ಷದ ೯೬ ಸಾವಿರ ಶರಣರು ಸೇರಲು ಕಾರಣೀಭೂತರಾಗಿ ಕರ್ನಾಟಕದ ಕೀರ್ತಿ ವಿದೇಶದಲ್ಲೆಲ್ಲಾ ಹರಡಲು ಕಾರಣರಾದರು.
ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವವನ್ನು ಜಾರಿಗೆ ತಂದುದರ ಫಲವಾಗಿ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ ಎಂಬಂತೆ ಅಲ್ಲಿನ ಪ್ರಜೆಗಳು ಆರ್ಥಿಕವಾಗಿ ಸದೃಢರಾದರು. ದೇಹವೇ ದೇವಾಲಯ ಎಂಬ ತತ್ವದ ಮೂಲಕ ಮಾನವನು ಕೂಡ ಮಹಾದೇವನಾಗಬಹುದು ಎಂಬುದನ್ನು ಸ್ವತಃ ಆಚರಿಸಿ ಇತರರಿಗೆ ಬೋಧಿಸಿದರು.
ಬಸವಣ್ಣನವರ ತತ್ವಗಳಿಂದ ಆಕರ್ಷಿತರಾಗಿ ಅಫ್ಘಾನಿಸ್ತಾನದಿಂದ ಮರುಳ ಶಂಕರ ದೇವ, ಕಾಶ್ಮೀರದಿಂದ ಮೋಳಿಗೆ ಮಾರಯ್ಯ, ಮೋಳಿಗೆ ಮಹಾದೇವಿ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಉತ್ತರ ಪ್ರದೇಶದಿಂದ ತೆಲುಗೇಶ ಮಂಕಣ್ಣ, ಮಹಾರಾಷ್ಟ್ರದಿಂದ ಸಿದ್ದರಾಮೇಶ್ವರ, ಆಂಧ್ರಪ್ರದೇಶದಿಂದ ಉರಿಲಿಂಗ ದೇವ, ಗುಜರಾತನಿಂದ ಆದಯ್ಯ ಹೀಗೆ ವಿವಿಧ ಭಾಷೆಗಳ ಜನರು ಕರ್ನಾಟಕಕ್ಕೆ ಬಂದರು. ಅವರಿಗೆ ಕನ್ನಡವನ್ನು ಕಲಿಸಿ ಕನ್ನಡದ ಪ್ರಥಮ ಅಭಿಮಾನಿಯಾದವರು ವಿಶ್ವಗುರು ಬಸವಣ್ಣನವರು.
ವಿಧಾನಸೌಧದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡುವುದರ ಮೂಲಕ ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರೂ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗಣಿಸುತ್ತಿರುವುದು ಖಂಡನೀಯ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕುರಿತು ಹಾಗೂ ಬಸವಾದಿ ಶರಣರನ್ನು ಕುರಿತು ವಿಚಾರಗೋಷ್ಠಿ, ಉಪನ್ಯಾಸ, ವಚನನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಬಸವಣ್ಣನವರು ಪ್ರತಿಪಾದಿಸಿರುವ ಸಮಾನತೆಯ ತತ್ವವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪ್ರಚುರಪಡಿಸಿ ಆ ತತ್ವಗಳನ್ನು ಕನ್ನಡ ನಾಡಿನ ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಂಡು ಮೌಲ್ಯಯುತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಾಗಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ದ್ವಾರ ಹಾಗೂ ಸಭಾ ಮಂಟಪ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಸಾಂಸ್ಕೃತಿಕ ನಾಯಕನಿಗೆ ಗೌರವ ಹೆಚ್ಚಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನನ್ನ ಸಹಮತವಿದೆ