ಮಂಗಳೂರು
ಜನವರಿ 4ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಸುತ್ತೂರು ಮಠದ ಮಠಾಧೀಶ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಗುರುಪುರದ ಜಂಗಮ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ನೇತೃತ್ವದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8:30ಕ್ಕೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ‘ವಚನ ಸಾಹಿತ್ಯ ದಿಬ್ಬಣ’ ಹೊರಡಲಿದೆ. 10ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೇಯರ್ ಮನೋಜಕುಮಾರ ರಾಷ್ಟ್ರ ಧ್ವಜಾರೋಹಣ, ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಎಂ.ಪಿ. ಕನ್ನಡ ಧ್ವಜಾರೋಹಣ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಸಮ್ಮೇಳನದ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಮಂಗಳವಾರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಗ್ಗೆ 10:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಸುತ್ತೂರು ಮಠಾಧೀಶ ಡಾ.ಶಿವರಾತ್ರಿ ದೇಶೀ ಕೇಂದ್ರ ಮಹಾಸ್ವಾಮಿ, ಗುರುಪುರ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತರಿರುವರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ ಸಭಾಧ್ಯಕ್ಷತೆ ವಹಿಸಲಿದ್ದು, ಕಟೀಲು ಹರಿನಾರಾಯಣ ಆಸ್ರಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಡಾ.ವೈ. ಭರತ ಶೆಟ್ಟಿ ವಸ್ತು ಪ್ರದರ್ಶನದ ಉದ್ಘಾಟನೆ ಮಾಡುವರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ವಸ್ತು ಪ್ರದರ್ಶನ ಮಾರಾಟ ಮಳಿಗೆ ಉದ್ಘಾಟಿಸುವರು. ಬೆಂಗಳೂರಿನ ಶಂಕರ್ ಬಿದರಿ ಸಾಕ್ಷ್ಯ ಚಿತ್ರ ಉದ್ಘಾಟಿಸುವರು. ವಿವಿಧ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಗೋಷ್ಠಿಗಳು
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಅಧ್ಯಕ್ಷೆ ಎಂತಳಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಧುನಿಕ ವಚನಗೋಷ್ಠಿ ನಡೆಯಲಿದೆ. ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅನುಸಂಧಾನ’ ವಿಷಯದ ಬಗ್ಗೆ ಚಿಂತನ ಗೋಷ್ಠಿಯಲ್ಲಿ ಡಾ.ವರದರಾಜ ಚಂದ್ರಗಿರಿ ವಿಷಯ ಮಂಡಿಸುವರು. ‘ತುಳುನಾಡಿನಲ್ಲಿ ವೀರಶೈವ ಪರಂಪರೆ ಒಂದು ಐತಿಹಾಸಿಕ ನೋಟ’ ವಿಷಯದ ಬಗ್ಗೆ ಡಾ.ಪುಂಡಿಕ್ಕಾ ಗಣಪತಿ ಭಟ್ ಮಾತನಾಡಲಿರುವರು. ‘ವಚನ ಸಾಹಿತ್ಯ ಅವಲೋಕನ’ ಎಂಬ ಗೋಷ್ಠಿ ಉಪನ್ಯಾಸಕ ರಘು ಇಡೀದು ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಕಾಯಕ ರತ್ನ ಪ್ರಶಸ್ತಿ
ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಡಾ.ಹರಿಕೃಷ್ಣ ಪುನರೂರು (ಸಮಾಜ ಸೇವೆ), ಡಾ.ಮೊಹನ ಆಳ್ವ (ಶಿಕ್ಷಣ/ಸಾಂಸ್ಕೃತಿಕ), ಮಣಿಕಾಂತ ಕದ್ರಿ (ಸಂಗೀತ), ಡಾ. ಶಾಲಿನಿ ನಾಲ್ವಾಡ್(ವೈದ್ಯಕೀಯ), ಡಾ.ಗುರುಕಿಣ್ (ಸಂಗೀತ), ಮಲ್ಲಮ್ಮ ಯಾಳವಾರ (ಸಹಕಾರಿ ಬ್ಯಾಂಕ್), ರಾಜೇಶ್ವರಿ ಜಮಖಂಡಿ (ಸಮಾಜ ಸೇವೆ), ಕೆ.ಯುವರಾಜ್ ಶಿವಮೊಗ್ಗ (ಜನಪದ ಗಾಯಕ/ಸಂಗೀತ ನಿರ್ದೇಶಕ),ಡಾ.ದೇವದಾಸ್ ಕಾಪಿಕಾಡ್(ತುಳು ಸಿನಿಮಾ/ನಾಟಕರಂಗ), ಜನಾರ್ದನ ಬಿಜೊಡಿ (ದೈವ ನರ್ತನ), ಮುಹಮ್ಮದ್ ಯಾಸಿರ್ (ಪುರಾತನ ವಸ್ತುಸಂಗ್ರಹ), ವಾಲ್ಟರ್ ನಂದಳಿಕೆ (ಪತ್ರಿಕೊದ್ಯಮ) ಹಾಗೂ ಬೆಂಗಳೂರಿನ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸಂಘಟನೆಗಳನ್ನು ಗೌರವಿಸಲಾಗುವುದು.
ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿ, ಪೇಜಾವರ ಮಠಾಧಿಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ರುದ್ರಮುನಿ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರೋಪ ಸಮಾರಂಭ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಡಾ. ಅರವಿಂದ ಜತ್ತಿ ಉಪಸ್ಥಿತರಿರಲಿದ್ದು, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಮಾನ್ವಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಜಾನಪದ ಗಾಯಕ ಮತ್ತು ಸಂಗೀತ ನಿರ್ದೇಶಕ ಕೆ.ಯುವರಾಜ್ ಶಿವಮೊಗ್ಗ ಮತ್ತು ಸಿ.ಎ. ಅಮೂಲ್ಯ ಮಲ್ಲಿಕಾರ್ಜುನ ಮಂಗಳೂರು ಅವರಿಂದ ‘ವಚನ ಗಾಯನ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ, ಶರಣ ಸಾಹಿತ್ಯ ಕೃತಿಗಳ ಪ್ರದರ್ಶನ ಇದೆ. ಸಮೂಹ ವಚನ ಗಾಯನ ಸ್ಪರ್ಧೆ ಮತ್ತು ಸಮೂಹ ವಚನ ನೃತ್ಯ ಸ್ಪರ್ಧೆಗಳೂ ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಸುರೇಂದ್ರ ರಾವ್, ಅಕ್ಕಮಹಾದೇವಿ ವೀರಶೈವ ಮಹಾಸಂಘದ ಅಧ್ಯಕ್ಷೆ ಸುಮಾ ಮಾನ್ವಿ, ಕೋಶಾಧಿಕಾರಿ ಉಮಾ ಪಾಲಾಕ್ಷಪ್ಪ, ಡಾ.ಮೀನಾಕ್ಷಿ ರಾಮಚಂದ್ರ, ಪ್ರೊ. ಜಯಪ್ಪ ಉಪಸ್ಥಿತರಿದ್ದರು
Don’t invate the pejavara. He against to basavanna and VACHANA…
ಶಿವದಾರವನ್ನು ಜನಿವಾರವಾಗಿಸುವ ಯತ್ನ ಢಾಳಾಗಿ ಎದ್ದು ಕಾಣುತ್ತಿದೆ ಕಾರ್ಯಕ್ರಮದ ವಿವರ ಕಂಡಾಗ !
ಇದು ಶರಣರ ವಿಚಾರ ಅಲ್ಲ ಇದು ಶರಣರ ಅನುಭಾವ ಕೊಲ್ಲುವ ಪ್ರಯತ್ನ ಬಸವ ವಿರೋಧಿ ಇರುವ ಇದು ಇಂಥಾ ಘಟನೆ ನೆಡೆಯ ಬಾರದು
ವಚನ ಸಾಹಿತ್ಯವನ್ನು ವಚನಗಳ ವಿರೋಧಿಗಳಜೊತೆಗೂಡಿ ಮಾಡುತ್ತಿರುವುದು ಜನರನ್ನು ಮತ್ತೇ ಮುಖ೯ರನ್ನಾಗಿಸಬಹುದೆಂಬ ಲೆಕ್ಕಾಚಾರ ಮನೂವಾದಿಗಳದು, ಆದರೆ ಇವರಮೂಖ೯ತನದ ಪ್ರಯತ್ನಗಳಿಗೆ ಪ್ರಜ್ಞಾವಂತ ಲಿಂಗಾಯತರು/ ಬಸವತತ್ವ ಅನುಯಾಯಿಗಳು ಬಲಿಯಾಗೋದಿಲ್ಲಾ .
ಇದು ಬಸವ ಧರ್ಮ ವಿರೋಧಿ
ಇರಲಿ.. ಇಂತಹ ಸಮ್ಮೇಳನಗಳು ವೈದಿಕ ಪ್ರಭಾವ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚಾಗಿ ನಡೆಯಬೇಕು… ಅವಾಗದ್ರು ಶರಣ ತತ್ವ ಚಿಂತನೆಗಳ ಪ್ರಸ್ತುತತೆ ಅವರಿಗೂ ಅಲ್ಪ ಸ್ವಲ್ಪ ಮುಟ್ಟಲಿ.
From- ಸಿದ್ಧರಾಮ ಕೊಡಬಳಗಿ, ಆಗ್ರಾ (ಉತ್ತರ ಪ್ರದೇಶ)