ಮಾನ್ವಿಯಲ್ಲಿ ‘ಬಸವಾದಿ ಶರಣರ ನಡೆ ಶಾಲೆಗಳ ಕಡೆ’ ಕಾರ್ಯಕ್ರಮ

ಮಾನ್ವಿ

ಬಸವಾದಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಸ್ತ್ರೀ-ಪುರುಷ ಎಂಬ ಭೇದಭಾವವಿಲ್ಲದೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು, ಆ ಮೂಲಕ ಅವರು ಅಲ್ಲಿ ನಿಜ ಶರಣ-ಶರಣೆಯರಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎಂದು ಮಾನ್ವಿ ತಾಲ್ಲೂಕು ಬಸವ ಕೇಂದ್ರದ ಅಧ್ಯಕ್ಷ ರಂಗಪ್ಪ ಮ್ಯಾದರ ಹೇಳಿದರು.

ಬಸವ ಕೇಂದ್ರ, ಮಹಿಳಾ ಬಸವ ಕೇಂದ್ರ, ಯುವ ಬಸವ ಕೇಂದ್ರ ಮಾನವಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವಿ ಪಟ್ಟಣದ ಅಂಬೇಡ್ಕರ್ ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಬಸವಾದಿ ಶರಣರ ನಡೆ ಶಾಲೆಗಳ ಕಡೆ” ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ….ಎಂಬ ಬಸವಣ್ಣನವರ ವಚನವನ್ನು ಮಕ್ಕಳಿಗೆ ನಿರ್ವಚನ ಮಾಡಿ ಮ್ಯಾದರ ತಿಳಿಸಿದರು.

ಪ್ರಾಸ್ತಾವಿಕವಾಗಿ ಲಕ್ಷ್ಮಣ ಜಾನೇಕಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಯಮನಪ್ಪ ಚಲವಾದಿ ವಹಿಸಿದ್ದರು. ಅತಿಥಿಗಳಾಗಿ ಶರಣೆ ಕಲ್ಯಾಣೇಶ್ವರಿ ನೀರಮಾನವಿ, ಶರಣಬಸವ ನೀರಮಾನವಿ, ಅಮರೇಶ ಗವಿಗಟ್ಟ, ಬಸನಗೌಡ ಚಿಮಲಪೂರ, ಅಮರೇಶ ಹಡಪದ, ರಾಜಪ್ಪ ಮ್ಯಾದರ ವೇದಿಕೆಯಲ್ಲಿದ್ದರು.

ಶಿಕ್ಷಕಿ ಅಶ್ವಿನಿ ಸಂಗಮೇಶ ಮುದೋಳ, ಸಹ ಶಿಕ್ಷಕ-ಶಿಕ್ಷಕಿಯರು ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *