ಹುಣಸೂರು ಬಳಿ ಮಾರಗೌಡನಹಳ್ಳಿಯಲ್ಲಿ ಬಸವೇಶ್ವರರ ಪುತ್ತಳಿ ಅನಾವರಣ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ಹುಣಸೂರು 

ಹುಣಸೂರು ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ಸ್ನೇಹ ಬಳಗ ವತಿಯಿಂದ ಶುಕ್ರವಾರ ಜಗಜ್ಯೋತಿ ಬಸವೇಶ್ವರರ ಮತ್ತು ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳು ಅನಾವರಣಗೊಂಡವು. 

ದಿವ್ಯಸಾನಿದ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಗರ್ಭಗುಡಿಯ ಒಳಗಿರುವ ನಂದಿಯ ಅವತಾರವೆಂದೇ ಭಾವಿಸಿರುವ ಜಗಜ್ಯೋತಿ ಬಸವೇಶ್ವರರ ಪುತ್ತಳಿಯ ಅನಾವರಣವಾಗಿದೆ. ಬಸವೇಶ್ವರರು ಪವಿತ್ರವಾದ ಪವಾಡ ಸದೃಶವಾದ ಬದುಕನ್ನ ನಡೆಸಿದ್ದರಿಂದ ಅವರನ್ನು ಇವತ್ತಿಗೂ ನೆನಪು ಮಾಡಿಕೊಳ್ಳುತ್ತೇವೆ ಎಂದರು.

ಒಂದೆಡೆ ಮಂತ್ರಿಯಾಗಿ ಇನ್ನೊಂದೆಡೆ ಆಧ್ಯಾತ್ಮಿಕ ಚೈತನ್ಯವಾಗಿ ಎರಡೂ ಜವಾಬ್ದಾರಿಯನ್ನು ಸಮಾನವಾಗಿ ತೂಗಿಸಿಕೊಂಡು ಹೋದವರು ಬಸವಣ್ಣನವರು. ರಾಜ್ಯದ ಬೊಕ್ಕಸವನ್ನು ಅನುಭವ ಮಂಟಪಕ್ಕಾಗಲಿ ಅನುಭವ ಮಂಟಪದ ಹೋರಾಟವನ್ನು ರಾಜ್ಯದ ಆಡಳಿತಕ್ಕಾಗಿ ಬೆರೆಸದೆ ಎರಡನ್ನೂ ಬೇರೆ ಬೇರೆಯಾಗಿ ಸಮಾನವಾಗಿ ತೂಗಿಸಿಕೊಂಡು ಹೋದವರು ಬಸವಣ್ಣನವರು.

ಬಸವಣ್ಣನವರು ತುಂಬಾ ಗೌರವಸ್ಥ ಕುಟುಂಬದಲ್ಲಿ ಜನಿಸಿದ್ದರು. ಅವರಿಗೆ ಹೇಗೆ ಗೌರವ ಆದರಗಳು ದೊರೆಯುತ್ತಿದ್ದವೋ ಹಾಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆ ಗೌರವ ಸ್ಥಾನಮಾನಗಳು ದೊರೆಯಬೇಕು ಎಂಬ ಕಾರಣಕ್ಕೆ ಅವರು ಸಮಾಜ ಸುಧಾರಕರಾಗಿ ದೀನ ದುರ್ಬಲರ ಏಳಿಗೆಗಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು, ಎಂದು ಹೇಳಿದರು.

ಶಾಸಕ ಜಿ ಡಿ ಹರೀಶ್ ಗೌಡರವರು ಅಧ್ಯಕ್ಷತೆ ವಹಿಸಿದ್ದರು. ಹುಣಸೂರು ಕ್ಷೇತ್ರದ ಮಾಜಿ ವಿಧಾನಸಭಾ ಸದಸ್ಯರಾಗಿದ್ದ ಎಚ್ ಪಿ ಮಂಜುನಾಥ್ ರವರು ಬಸವಣ್ಣನವರ ವಚನದಂತೆ ನಾವು ನುಡಿದು ನಡೆದರೆ ಮೊದಲು ಮನುಷ್ಯರಾಗ್ತೀವಿ ನಂತರ ದೇವರಾಗಿ ಬಿಡುತ್ತೇವೆ ಎಂದರು. “ನನ್ನ ಸಣ್ಣ ಜೀವಿತಾವಧಿಯಲ್ಲಿ ನಾನು ಈ ಗುಣಗಳನ್ನು ಕಂಡದ್ದು ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳಲ್ಲಿ. ಅವರು ತಮ್ಮ ಬದುಕಿನದ್ದಕ್ಕೂ ಕೊನೆಗೆ ಮಣ್ಣಲ್ಲಿ ಮಣ್ಣಾಗುವಾಗಲೂ ಸಹ ಬಸವಣ್ಣನವರ ವಚನಗಳನ್ನು ಚಾಚು ತಪ್ಪದೇ ಪಾಲಿಸಿದರು,” ಎಂದರು. 

ಪ್ರೌಢಶಾಲಾ ಶಿಕ್ಷಕಿ ಪಂಕಜ ಬಸವರಾಜು ಕಾರ್ಯಕ್ರಮ ನಿರೂಪಿಸಿದರು. ಮೈಸೂರಿನ ನಾಗರತ್ನ ಗುಂಡಪ್ಪರವರು ವಚನ ಪ್ರಾರ್ಥನೆಯನ್ನು ಮಾಡಿದರು. ಎಚ್ ಡಿ ಕೋಟೆ ತಾಲೂಕು ಲಂಕೆ ಗ್ರಾಮದಿಂದ ಬಂದಿದ್ದ ಕುಮಾರಣ್ಣ ಮತ್ತು ತಂಡದವರಿಂದ ಅದ್ಭುತವಾಗಿ ವಚನ ಭಜನಾ ಕಾರ್ಯಕ್ರಮ ನೆರವೇರಿತು.

ಬಸವಣ್ಣ ಅಕ್ಕಮಹಾದೇವಿ ವಿವೇಕಾನಂದರು ಸಂಗೊಳ್ಳಿ ರಾಯಣ್ಣ ಒನಕೆ ಓಬವ್ವ  ಹೀಗೆ ಶರಣರ ಛದ್ಮವೇಶವನ್ನು ಧರಿಸಿದ್ದ ಪುಟ್ಟ ಪುಟ್ಟಮಕ್ಕಳು ಎಲ್ಲರ ಕಣ್ಮನ ಸೆಳೆದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮದ, ಅಕ್ಕಪಕ್ಕದ ಗ್ರಾಮದ ಬಸವ ಸದ್ಭಕ್ತರು ಕಾರ್ಯಕ್ರಮಕ್ಕೆ ಮೆರುಗನ್ನು ತುಂಬಿದರು. 

ಶ್ರೀ ನಟರಾಜ ಮಹಾಸ್ವಾಮಿಗಳು ಗುರುಲಿಂಗ ಜಂಗಮ ದೇವರ ಮಠ ಗಾವಡಗೆರೆ, ಶ್ರೀ ಸಾಂಬಸದಾಶಿವ ಮಹಾಸ್ವಾಮಿಗಳು ಉಕ್ಕಿನ ಕಂತೆ ಮಠ ಮಾದಳ್ಳಿ, ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಶ್ರೀ ಹೊಸಮಠ ಸರಗೂರು, ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಅರಕೆರೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

Share This Article
3 Comments
    • ಕಾರ್ಯಕ್ರಮದ ವರದಿಯನ್ನು ಚೆನ್ನಾಗಿ ಮಾಡಿದ್ದೀರಿ.ಹೀಗೆ ನಿಮ್ಮ ಸೇವೆ ಮುಂದುವರೆಯಲಿ ಎಂದು ಆಶಿಸುತ್ತೇನೆ.ಶರಣು ಶರಣಾರ್ಥಿಗಳು.

  • ಶರಣು ಶರಣಾರ್ಥಿಗಳು ಅಕ್ಕಾ
    ಕಾರ್ಯಕ್ರಮವನ್ನು ಎಳೆ ಎಳೆಯಾಗಿ ವಿವರಿಸಿದ್ದೀರಿ ಧನ್ಯವಾದಗಳು

Leave a Reply

Your email address will not be published. Required fields are marked *