ಹಳಿ ತಪ್ಪಿದ ಬದುಕು, ಮೌನಕ್ಕೆ ಜಾರಿದ ಮರಕುಂಬಿ ಗ್ರಾಮ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರಿಗೆ ಐದು ವರ್ಷ ಸಜೆಯಾಗಿರುವುದರಿಂದ ಮರಕುಂಬಿ ಗ್ರಾಮ ಬೆಚ್ಚಿ ಬಿದ್ದಿದೆ.

ಗ್ರಾಮದಲ್ಲಿ ಯಾರೂ ಸಹ ಯಾರೊಂದಿಗೆ ಮಾತನಾಡಲು ಭಯಪಡುತ್ತಿದ್ದಾರೆ. ಇದೇನು ಬಂತು ನಮ್ಮೂರಿಗೆ ಎಂದು ಹಳಹಳಿಸುತ್ತಾರೆ. ರಸ್ತೆಗಳಲ್ಲಿ ಮೌನದ್ದೇ ಸಾಮ್ರಾಜ್ಯ.

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಗ್ರಾಮಸ್ಥರು, ಘಟನೆಯಲ್ಲಿ ಎಲ್ಲರೂ ಪಾಲ್ಗೊಂಡಿರಲಿಲ್ಲ, ಆದರೂ ಎಲ್ಲರಿಗೂ ಜೀವಾವಧಿ ಶಿಕ್ಷೆಯಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮದಲ್ಲಿ ಸುತ್ತಾಡಿದರೆ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿರುವವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಯಾರ ಮುಖದಲ್ಲಿಯೂ ಕಳೆ ಇಲ್ಲ ಮತ್ತು ಗ್ರಾಮದಲ್ಲಿ ಪಶ್ಚಾತ್ತಾಪ ಎದ್ದು ಕಾಣುತ್ತಿದೆ.

ಮನೆಗೆ ಆಸರೆಯಾದವರೇ ಜೈಲುಪಾಲಾಗಿರುವುದರಿಂದ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡು ಬಂದಿತು.

ಚಲಪತಿ ಮಡಿವಾಳರ ಎನ್ನುವಾತನ ಬಂಧನವಾಗಿದ್ದು, ಆತನಿಗೆ ಇರುವ ಎರಡು ವರ್ಷದ ಮಗು ಸಹ ಪದೇ ಪದೇ ಅಪ್ಪ ಎಲ್ಲಿ ಎಂದು ಕೇಳುತ್ತಿದೆ ಎಂದು ಆತನ ಪತ್ನಿ ನೇತ್ರಾವತಿ ಕಣ್ಣೀರು ಹಾಕುತ್ತಿದ್ದಾರೆ.

ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಂಬಣ್ಣ ಬಿಪಿ ಕಡಿಮೆಯಾಗಿ 2017ರಲ್ಲಿ ಅಸು ನೀಗಿದ್ದನು. ಈಗ ಆತನ ಸಹೋದರ ಶಾಮಣ್ಣನೇ ಮನೆಗೆ ಆಸರೆಯಾಗಿದ್ದಾನೆ. ಮಗಳ ಮದುವೆಯೂ ನಿಶ್ಚಯವಾಗಿದೆ. ಆದರೆ, ಈಗ ಜೈಲು ಸೇರಿದ್ದರಿಂದ ಆತನ ತಾಯಿ ಮಲ್ಲಮ್ಮ ಮಡ್ಡೇರ ಹಾಸಿಗೆ ಹಿಡಿದಿದ್ದಾಳೆ. ನನ್ನ ಮಗ ತಪ್ಪೇ ಮಾಡಿಲ್ಲ ಎಂದು ಬಿಕ್ಕಳಿಸುತ್ತಾಳೆ.

ನನ್ನ ಮಗನನ್ನು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ. ನಮ್ಮ ಮನೆಯನ್ನು ಯಾರು ಮುನ್ನಡೆಸಬೇಕು? ಆತ ಗ್ರಾಮೀಣ ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ. ಅದರಿಂದಲೇ ನಮ್ಮ ಬದುಕು ಸಾಗಿಸುತ್ತಿತ್ತು. ಆಗ ಆತನೇ ಜೈಲಿಗೆ ಹೋಗಿದ್ದರಿಂದ ಹೇಗೆ ಜೀವನ ಮಾಡುವುದು ಎನ್ನುತ್ತಾರೆ ವಿರೂಪಣ್ಣ ಮಡಿವಾಳರ.

ಖೈದಿ ನಿಧನ

ಮರಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿದ್ದ ರಾಮಣ್ಣ ಭೋವಿ (40) ಗುರುವಾರ ತಡರಾತ್ರಿ ಮರಣ ಹೊಂದಿದ್ದಾನೆ.

ಪೊಲೀಸ್ ಕಸ್ಟಡಿಯಲ್ಲಿಯೇ ಇರುವಾಗಲೇ ರಾಮಣ್ಣ ಅಸ್ವಸ್ಥಗೊಂಡಿದ್ದಾನೆ. ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುವಾಗ ಅಸು ನೀಗಿದ್ದಾನೆ.

ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದರಿಂದ ನೊಂದುಕೊಂಡಿದ್ದ ರಾಮಣ್ಣ ಭೋವಿ ತೀವ್ರ ಅಸ್ವಸ್ಥನಾಗಿದ್ದಾನೆ. ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಂಧನದಲ್ಲಿರುವಾಗಲೇ ರಾಮಣ್ಣ ಭೋವಿ ಜೀವಾವಧಿ ಶಿಕ್ಷೆಯ ಮಾಹಿತಿ ಪಡೆದ ಮೇಲೆ ತೀವ್ರ ಅಸ್ವಸ್ಥಗೊಂಡಿದ್ದನು.

ರಾಮಣ್ಣ ಭೋವಿ ಅವರ ಪತ್ನಿ ಆಸ್ಪತ್ರೆಯ ಬಳಿ ಬೋರಾಡಿ ಅತ್ತಿದ್ದಾರೆ. ಪತಿಯ ಸಾವಿನ ಸುದ್ದಿಯಿಂದ ಗರಬಡಿದಂತೆ ಆಗಿ, ಜಿಲ್ಲಾಸ್ಪತ್ರೆಯ ಎದುರು ಬೋರಾಡಿ ಅತ್ತರು. ಅವರನ್ನು ಸಾಂತ್ವನ ಮಾಡಲು ಸಂಬಂಧಿಕರು ಹೆಣಗಾಡಬೇಕಾಯಿತು.

ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ನಡೆದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ರಾಮಣ್ಣ ಭೋವಿ ಅಂತ್ಯಸಂಸ್ಕಾರ ನಡೆಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ರಾಮಣ್ಣ ಭೋವಿ ಶವ ಮರಣೋತ್ತರ ಪರೀಕ್ಷೆಯ ಆನಂತರ ಆ್ಯಂಬುಲೆನ್ಸ್‌ನಲ್ಲಿ ಮರಕುಂಬಿ ಗ್ರಾಮಕ್ಕೆ ತಂದು, ಆನಂತರ ಪೊಲೀಸ್ ಬಿಗಿ ಭದ್ರತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇಡೀ ಪ್ರಕರಣದಲ್ಲಿ ಆರೋಪಿಗಳ ಪೈಕಿ 11 ಜನರು ಮತ್ತು ಸಂತ್ರಸ್ತರ ಪೈಕಿ ಇಬ್ಬರು ಈಗಾಗಲೇ ಮರಣ ಹೊಂದಿದ್ದಾರೆ.

ದಲಿತ ಕೇರಿಯಲ್ಲಿ

ದಲಿತ ಕೇರಿಯಲ್ಲಿ ದೌರ್ಜನ್ಯಕ್ಕೆ ಒಳಗಾದವರ ಕುಟುಂಬದವರು ನಿಟ್ಟುಸಿರು ಬಿಡುತ್ತಿದ್ದಾರೆ.

ತಮ್ಮ ಮೇಲೆ ಆಗಿದ್ದ ದೌರ್ಜನ್ಯಕ್ಕೆ ಶಿಕ್ಷೆಯಾಗಿದ್ದು, ನಮಗೆ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ಗ್ರಾಮದ ದುರಗಪ್ಪ ಹರಿಜನ.

ಅಂದು ನಮ್ಮ ಮೇಲೆ ದೌರ್ಜನ್ಯವಾದಾಗ ನಾವು ಅಷ್ಟಿಷ್ಟು ಕಷ್ಟ ಅನುಭವಿಸಿಲ್ಲ, ಬದುಕು ಕಟ್ಟಿಕೊಳ್ಳಲು ಊರನ್ನೇ ತೊರೆದಿದ್ದೆವು. ಈಗ ಅವರಿಗೆ ನೋವು ಆಗಿರಬಹುದು. ಆದರೆ, ಆಗ ನಮಗೆ ಆಗಿರುವ ನೋವು ಅಷ್ಟಿಷ್ಟಲ್ಲ ಎನ್ನುತ್ತಾರೆ.

ಸಹ ಭೋಜನ

ಗ್ರಾಮದಲ್ಲಿ ಆರು ತಿಂಗಳ ಹಿಂದೆ ನಡೆದ ಜಾತ್ರೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಸಹಭೋಜನ ಮಾಡಿದ್ದಾರೆ. ತಮ್ಮಲ್ಲಿನ ದ್ವೇಷ ಮರೆತು ಪರಸ್ಪರ ಒಂದಾಗಿ ಬಾಳುತ್ತಿದ್ದಾರೆ. ಗ್ರಾಮದ ದುರ್ಗಾದೇವಿ ಜಾತ್ರೆಯನ್ನು ಒಗ್ಗಟ್ಟಾಗಿಯೇ ಮಾಡಿದ್ದಾರೆ. ಪರಸ್ಪರ ಒಗ್ಗೂಡಿ ಸಹಭೋಜನ ಮಾಡಿದ್ದಾರೆ. ಈಗ ಗ್ರಾಮದಲ್ಲಿ ಅಸ್ಪೃಶ್ಯತೆಗೆ ಜಾಗ ಇಲ್ಲದಂತೆ ಪರಸ್ಪರರು ಸಹೋದರರಂತೆ ಬದುಕುತ್ತಿದ್ದಾರೆ. ಈಗಾಗಲೇ ನಡೆದಿರುವ ಘಟನೆಯ ಬಗ್ಗೆ ವಿಷಾದವೂ ಇದೆ.

ಈಗ ನಮ್ಮಲ್ಲಿ ದ್ವೇಷ ಇಲ್ಲ. ನಾವು ಒಂದಾಗಿದ್ದೇವೆ, ಅನ್ಯೋನ್ಯವಾಗಿದ್ದೇವೆ. ಸಹೋದರರಂತೆ ಇದ್ದೇವೆ, ಈಗ ಯಾವ ಸಮಸ್ಯೆ ಇಲ್ಲ. ಆದರೆ, ಆಗ ಆಗಿರುವ ಘಟನೆಗೆ ಈಗ ಜಯ ದೊರೆತಿದೆ ಎನ್ನುತ್ತಾರೆ ದುರಗಪ್ಪ ಹರಿಜನ.

ಗ್ರಾಮದಲ್ಲಿ ಪೊಲೀಸರು

ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮರಕುಂಬಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆಯನ್ನು ಹಾಕಲಾಗಿದೆ. ಗ್ರಾಮದಲ್ಲಿಯೇ ಬೀಡುಬಿಟ್ಟಿರುವ ಪೊಲೀಸರು ಗ್ರಾಮದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ. ಗ್ರಾಮದ ದೇವಸ್ಥಾನಗಳು, ಬೀದಿಗಳಲ್ಲಿ ಪೊಲೀಸ್ ವ್ಯಾನ್ ಸಹ ನಿಲ್ಲಿಸಲಾಗಿದ್ದು, ಹತ್ತಾರು ಪೊಲೀಸರು ಹಗಲು, ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ.

Share This Article
Leave a comment

Leave a Reply

Your email address will not be published. Required fields are marked *