ಬೇಗೂರು
ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಮರಳಾಪುರದಲ್ಲಿ ಶತಾಯುಷಿ ಲಿಂಗೈಕ್ಯ ಕರ್ನಾಟಕದ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆರನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ದಾಸೋಹ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣ ತತ್ವ ಚಿಂತಕರಾದ ಬಸವಯೋಗಿಪ್ರಭುಗಳು ಶಿವಕುಮಾರ ಸ್ವಾಮೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶಿವಕುಮಾರ ಮಾಹಾಸ್ವಾಮೀಜಿಯವರು ಬಸವಣ್ಣನವರು ನೀಡಿದ ಕಾಯಕ ದಾಸೋಹ ಶಿವಯೋಗವನ್ನು ಅಳವಡಿಸಿಕೊಂಡು ತ್ರಿಕಾಲ ಲಿಂಗಪೂಜಾ ನಿಷ್ಠರಾಗಿ ಮಹಾ ಶಿವಯೋಗಿಯಾಗಿ ಬೆಳಗಿದರು. ವಿಶ್ವಗುರು ಬಸವಣ್ಣನವರು ನೀಡಿದ ದಾಸೋಹ ತತ್ವವನ್ನು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನ ದಾಸೋಹವನ್ನು ಮಾಡುವುದರ ಮೂಲಕ ದಾಸೋಹ ತತ್ವವನ್ನು ಮುಂದುವರೆಸಿದ ಮಹಾ ದಾಸೋಹಿಯಾಗಿದ್ದಾರೆ.
ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಪರಂಪರೆಯಲ್ಲಿ ಬರುವ ಹರದನಹಳ್ಳಿ ಗೋಸಲ ಸಿದ್ದೇಶ್ವರರು ಬರಡು ಭೂಮಿಯಲ್ಲಿ ನೀರು ತಂದ ಸ್ಥಳವೇ ಸಿದ್ದ ಗಂಗೆ.

ಸಿದ್ದಗಂಗಾ ಪರಂಪರೆಯಲ್ಲಿ ಬಂದ ಉದ್ದಾನ ಸ್ವಾಮಿಗಳ ಕರಸಂಜಾತರಾಗಿ ಬಂದವರು ಶಿವಕುಮಾರ ಸ್ವಾಮಿಗಳು. ಜ್ಞಾನದಂತೆ ಬಂದು ಪುಣ್ಯದಂತೆ ಇದ್ದು ಮುಕ್ತಿಯಂತೆ ಹೋದವರು ಉಪಮಿಸಬಾರದ ಉಪಮಾತೀತರಾದ ಮಹಾ ಜಂಗಮರಾಗಿ ದೇಶವನ್ನು ಬೆಳಗಿದವರು, ಜಗಜ್ಯೋತಿ ಬಸವೇಶ್ವರರ ಕಾಯಕ ಸಿದ್ದಾಂತವನ್ನು ಅಳವಡಿಸಿಕೊಂಡು ಎಲ್ಲರ ಮಾರ್ಗದರ್ಶಕರಾಗಿ ಬೆಳಗಿದವರು ಎಂದು ಶಿವಕುಮಾರ ಮಹಾಸ್ವಾಮೀಜಿಯವರನ್ನು ಬಸವಯೋಗಿಪ್ರಭುಗಳು ಸ್ಮರಿಸಿಕೊಂಡರು.
ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮದ ಯುವಕರು ಮುಖಂಡರು ಮುದ್ದುಮಕ್ಕಳು ಭಕ್ತಿಯಿಂದ ಭಾಗವಹಿಸಿದ್ದರು.
