ಗದಗ
ಲಿಂಗಾಯತರು ಬಸವಣ್ಣಧರ್ಮ ಅನುಸರಿಸುವಂತೆ ಹಾಗೂ ತಮ್ಮ ಇಷ್ಟಲಿಂಗ ಪೂಜೆ ಬಿಟ್ಟು, ಬೇರೆ ಪೂಜೆ ಮಾಡುವ ಅವಶ್ಯಕತೆಯಿಲ್ಲ. ಇದನ್ನು ಮರೆತು ಮೂಢನಂಬಿಕೆಗಳಿಗೆ ಬಲಿಯಾಗುವುದು, ಜಾತೀಯತೆ ಮಾಡುವುದು, ಸಲ್ಲದು ಎಂದು ಹೇಳಿದರೂ ಇವು ಇನ್ನು ನಿಂತಿಲ್ಲ. ಇವೆಲ್ಲವೂ ಬಸವಣ್ಣನವರ ವಿಚಾರಗಳಿಗೆ ವಿರುದ್ದವಾದವುಗಳು, ಅದಕ್ಕಾಗಿ ಅಂತಃಕರಣದ ಅರಿವು ಅವಶ್ಯವೆಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ 2765ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಮರಣವೇ ಮಹಾನವಮಿ’ ಇದು ಲಿಂಗಾಯತರ ತತ್ವಜ್ಞಾನ. ಮರಣವನ್ನು ಹಬ್ಬದಂತೆ ಆಚರಿಸಬೇಕು ಎಂದು ಹೇಳಿದರು. ಲಿಂಗಾಯತ ಧರ್ಮದಲ್ಲಿ ಸಮಾಜದ ಸಮಾನತೆ ಸಾರುವ ತತ್ವ ಅಡಗಿದೆ. ಲಿಂಗಾಯತರನ್ನು ಗುರುಕರಜಾತರು ಎಂದು ಕರೆಯುತ್ತಾರೆ. ಪೂರ್ವಾಶ್ರಮದ ಗುರುತನ್ನು ಲಿಂಗಾಯತ ತತ್ವ ಪ್ರತಿಪಾದಕ ಸ್ವಾಮಿಗಳು ಹೇಳುವುದಿಲ್ಲ. ಬಸವಣ್ಣನವರು ವಚನಗಳ ಮೂಲಕ ಲಿಂಗಾಯತ ಸಾಹಿತ್ಯ ಬೆಳೆಸಿದರು ಎಂದು ಆಶೀರ್ವಚನದಲ್ಲಿ ಹೇಳಿದರು.
ಗದುಗಿನ ಶರಣ ಚಿಂತಕ ಅಶೋಕ ಬರಗುಂಡಿ ಅವರು, ಮರಣವೇ ಮಹಾನವಮಿ ಎಂಬ ವಿಷಯದ ಮೇಲೆ ಮಾತನಾಡುತ್ತಾ, ಭೇದವಿಲ್ಲದ ಬದುಕು ಕೊಟ್ಟವರು ಬಸವಣ್ಣನವರು. ದಿಕ್ಕುತಪ್ಪುತ್ತಿರುವ ಸಮಾಜಕ್ಕೆ ಶರಣರು ವಚನಗಳ ಮೂಲಕ ಸಮಾನತೆ ಸಾರಿದರು.
ಹುಟ್ಟಿನ ಮೂಲಕ ಶ್ರೇಷ್ಠ ಮತ್ತು ಕನಿಷ್ಠ ಎಂಬುದು ವೈದಿಕರ ಭಾಗವಾದರೆ, ಹುಟ್ಟು ಸಾವಿಗೆ ಮಹತ್ವ ನೀಡದವರು ಶರಣರು. ಮರಣ ಎನ್ನುವುದು ಶರಣರ ದೃಷ್ಟಿಯಲ್ಲಿ ಪರಿಪೂರ್ಣ ಸತ್ಯ. ವಿಶ್ವಕುಟುಂಬ ಕಲ್ಪನೆ ಶರಣರದು. ಪ್ರೀತಿಯ ಬದುಕು ಸಮಾಜದಲ್ಲಿ ನಿರ್ಮಾಣವಾಗಬೇಕೆಂದರು.
ನಾನು ಶ್ರೀಮಂತ, ನಾನು ಜ್ಞಾನಿ ನಾನು ಅಧಿಕಾರಿ ಎಂಬ ಅಹಂನ್ನು ಬಿಡಬೇಕು. ಆವಾಗ ವಿಶ್ವಮಾನವನಾಗುತ್ತಾನೆ. ಬಸವಣ್ಣ ಜಗತ್ತಿನ ಬೆಳಕು. ಚೈತನ್ಯ ಸ್ವರೂಪ. ಬುದ್ದಿಯ ಬೆಳವಣಿಗೆಯಲ್ಲಿ ಜ್ಞಾನದ ಫಸಲು ಬೆಳೆಯಲು ಹಚ್ಚಿದವರು ಬಸವಣ್ಣನವರು.
ವಿಲೋಮ ಪದ್ದತಿಯ ಮದುವೆ ಮಾಡಿಸಿದ್ದಕ್ಕೆ ಆಗ ಎಳೆಹೂಟೆ ಶಿಕ್ಷೆ ವಿಧಿಸಿದ್ದು ಯಾಕೆ? ವೈದಿಕರು ಲಿಂಗಾಯತರ ಒಂದು ಭಾಗವೆನ್ನುವವರು ಹಿಗೇಕೆ ಮಾಡಿದರು, ಲಿಂಗಾಯತರು ಇದನ್ನು ಆಲೋಚನೆ ಮಾಡಬೇಕೆಂದರು.
ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು 450 ಮಿಕ್ಕಿ ಲಿಂಗಾಯತರನ್ನು ಪುಣ್ಯ ಪುರುಷರ ಮಾಲಿಕೆಯಲ್ಲಿ ಪರಿಚಯಿಸಿದ್ದು ಬಹು ದೊಡ್ಡ ಕೆಲಸ. ಸಿದ್ದಲಿಂಗ ಶ್ರೀಗಳು ಶಿವಾನುಭವದಲ್ಲಿ ಮರಣವೇ ಮಹಾನವಮಿ ಎಂದು ಮಾತನಾಡಿ, ಅಂದೇ ಅವರ ಜೀವನ ಮಹಾನವಮಿಯಾದದ್ದು, ಅಂದರೆ ಸಿದ್ದಲಿಂಗ ಶ್ರೀಗಳು ಮರಣವೇ ಮಹಾನವಮಿ ಎಂದು ಮಾತನಾಡಲಿಲ್ಲ. ಅವರ ಬದುಕು ಹಾಗೆ ಇತ್ತು ಎಂಬುದಕ್ಕೆ ಅವರು ಇನ್ನಿಲ್ಲವಾದದ್ದೇ ಸಾಕ್ಷಿ.
ಸಿದ್ದಲಿಂಗ ಶ್ರೀಗಳು ಕಟ್ಟಿ ಬೆಳೆಸಿದ ಬಸವ ಸಂಸ್ಕೃತಿ ತೇರನ್ನು ಇಂದು ಡಾ. ಸಿದ್ದರಾಮ ಮಹಾಸ್ವಾಮಿಗಳು ನಾಡಿನಾದ್ಯಂತ ಎಳೆಯುತ್ತಿದ್ದಾರೆ. ಯಾಕೆಂದರೆ ಸಮಾಜದ ಒಳಿತಿಗಾಗಿ ಉಳಿವಿಗಾಗಿ, ಸಮಾನತೆಗಾಗಿ,
ಬಸವತತ್ವ ಬೇಕೆಂದು ಬರಗುಂಡಿ ಅವರು ಮಾತನಾಡಿದರು.
ಸಂಗೀತ ಶ್ರಾವ್ಯ ಕಾರ್ಯಕ್ರಮವನ್ನು ಸವಿತಾ ಬಸವರಾಜ ಗುಡ್ಡದ ಹಾಗೂ ಕುಮಾರ ಅಭಿಮನ್ಯು ಬಸವರಾಜ ಗುಡ್ಡದ ನಡೆಸಿಕೊಟ್ಟರು.
ದಾಸೋಹ ಸೇವೆಯನ್ನು ಶರಣ ವೀರಣ್ಣ ಬೇವಿನಮರದ ಗದಗ ಇವರ ಪರವಾಗಿ ಶರಣಪ್ಪ ಸಿದ್ರಾಮಪ್ಪ ಗದ್ದಿಕೇರಿ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಅವರು ಕಾರ್ಯಕ್ರಮ ನಿರೂಪಿಸಿದರು.