ಚಾಮರಾಜನಗರ

ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ ಸ್ಥಾಪಿಸಿರುವ ಗುರುಬಸವ ವಚನ ಪಾಠಶಾಲೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ದಕ್ಷಿಣ ಕರ್ನಾಟಕದಲ್ಲೇ ಮೊದಲ ವಚನ ಪಾಠಶಾಲೆ ಸ್ಥಾಪನೆ ಮಾಡಿದ ಕೀರ್ತಿ ಮರಿಯಾಲ ಮಠಕ್ಕೆ ಸಲ್ಲುತ್ತದೆ ಎಂದರು.
ಮೈಸೂರು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸಂಸ್ಕೃತ ಪಾಠ ಶಾಲೆಗಳನ್ನು ಕೇಳಿದ್ದೇನೆ ವಚನ ಪಾಠಶಾಲೆ ಎಂಬುದನ್ನು ಕೇಳೇ ಇರಲಿಲ್ಲ,
ಚಿಕ್ಕವಯಸ್ಸಿನಲ್ಲಿ ಬಸವ ಶರಣರ ವಚನಗಳನ್ನು ತಲೆಗೆ ತುಂಬಿದರೆ ಮಕ್ಕಳಿಗೆ ವಚನಗಳ ಅಭ್ಯಾಸ ಮಾಡಿಸಿದರೆ ಅವರು ಉನ್ನತವಾದ ಬದುಕನ್ನು ಬದುಕಲು ಸಾಧ್ಯವಾಗುತ್ತದೆ. ವಚನ ಪಾಠಶಾಲೆಗಳು ಅತ್ಯಗತ್ಯವಿದೆ ಎಂದರು.
ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಕೆ.ಸಿ ಬಸವಣ್ಣ, ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಎಂ.ಆರ್. ಗಂಗಾಧರ, ಸಾಹಿತಿ ಸಿದ್ದಣ್ಣ ಲಂಗೋಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿವ್ಯಸಾನಿಧ್ಯ ವಹಿಸಿದ್ದ ಮಠದ ಗುರುಗಳಾದ ಪೂಜ್ಯ ಇಮ್ಮಡಿ ಮುರುಘರಾಜೇಂದ್ರಸ್ವಾಮಿ ಬಸವ ಮೀಡಿಯಾದೊಂದಿಗೆ ಮಾತನಾಡಿದರು.
1) ಸ್ವಾಮೀಜಿ, ವಚನ ಪಾಠಶಾಲೆ ಶುರು ಮಾಡುವ ಕಲ್ಪನೆ ಬಂದಿದ್ದು ಹೇಗೆ?
ಇವತ್ತು ಎಲ್ಲಾ ಕಡೆ ಸಂಸ್ಕೃತದ ಪಾಠಶಾಲೆಗಳು ಕೆಲಸ ಮಾಡುತ್ತಿವೆ. ಮಕ್ಕಳಿಗೆ ಸುಭಾಷಿತ, ಕಥೆಗಳನ್ನು ಕಲಿಸುತ್ತಿವೆ. ಅದೇ ರೀತಿ ನಮ್ಮ ನಮ್ಮ ಮಕ್ಕಳಿಗೂ ಲಿಂಗಾಯತ ತತ್ವ, ಆಚರಣೆಗಳನ್ನು ಪರಿಚಯ ಮಾಡಿಕೊಡಲು ವಚನ ಪಾಠಶಾಲೆ ಶುರು ಮಾಡಿದ್ದೇವೆ.
ಎಲ್ಲರಿಗೂ ಗೊತ್ತಿರುವ ಹಾಗೆ ಮೈಸೂರು ಭಾಗದಲ್ಲಿ ವೈದಿಕತೆ ಹೆಚ್ಚಿದ್ದರೂ ಈಗ ಬಸವ ತತ್ವದ ಪ್ರಸಾರ ಹೆಚ್ಚಾಗುತ್ತಿದೆ. ಜನರಲ್ಲಿ ಜಾಗೃತಿ ಬೆಳೆಯುತ್ತಿದೆ. ವಚನ ಪಾಠಶಾಲೆಯಿಂದ ಈ ಕೆಲಸ ಇನ್ನೂ ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ.

2) ವಚನ ಪಾಠಶಾಲೆಯ ಬಗ್ಗೆ ಹೇಳ್ತೀರಾ…
ಪ್ರತಿ ದಿನ ಬೆಳಗ್ಗೆ 7ರಿಂದ 8ರವರಗೆ ತರಗತಿ ನಡೆಯುತ್ತದೆ. ಶನಿವಾರ, ಭಾನುವಾರ ರಜ. ಮಕ್ಕಳಿಗೆ ವಚನ ಬಾಯಿಪಾಠ, ಅರ್ಥ, ರಾಗವಾಗಿ ಹಾಡುವುದನ್ನು ಕಲಿಸಲಾಗುವುದು. ಜೊತೆಗೆ ಲಿಂಗಪೂಜೆ, ನಮ್ಮ ಮೂಲತತ್ವಗಳಾದ ಅಷ್ಟಾವರಣ, ಪಂಚಾಚಾರ ಮುಂತಾದುವುಗಳನ್ನೂ ತಿಳಿಸಲಾಗುವುದು.
ಮೇಲಾಜಿಪುರದಲ್ಲಿ ಬಸವ ಅನುಭವ ಮಂಟಪ ನಿರ್ಮಿಸಿರುವ ಶ್ರೀ ಶಿವಬಸಪ್ಪ ಸ್ವಾಮಿಗಳು ಬಂದು ತರಗತಿ ನಡೆಸಿಕೊಡುತ್ತಾರೆ.
3) ವಚನ ಪಾಠಶಾಲೆಯಿಂದ ಎಷ್ಟು ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಅಂದಾಜಿದೆಯೇ?
ನಮ್ಮ ಸಂಸ್ಥೆಯಿಂದ ಪ್ರೈಮರಿಯಿಂದ ಪಿಯುಸಿಯವರಗೆ ಶಾಲೆ, ಕಾಲೇಜು ನಡೆಸುತ್ತೇವೆ. ನಮ್ಮ ಮಠದಲ್ಲೇ ಇರುವ 70 ವಿದ್ಯಾರ್ಥಿಗಳಿಂದ ವಚನ ಪಾಠಶಾಲೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಬೇರೆ ವಿದ್ಯಾರ್ಥಿಗಳಿಗೂ ವಚನಗಳನ್ನು ತಲುಪಿಸಲು ಪ್ರಯತ್ನಿಸುತ್ತೇವೆ.
ವಚನ ಕಲಿಕೆಯಲ್ಲಿ ಡಿಪ್ಲೋಮ ತರಬೇತಿ ನೀಡುವ ಬಗ್ಗೆ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಗಂಗಾಧರ ಅವರ ಜೊತೆ ಚರ್ಚಿಸಿದ್ದೇವೆ. ಅವರಿಂದ ಮಾಹಿತಿ ಬಂದ ಮೇಲೆ ಮುಂದಿನ ಹೆಜ್ಜೆ ಇಡುತ್ತೇವೆ.

4) ಮೈಸೂರು ಪ್ರಾಂತ್ಯದಲ್ಲಿ ಬಸವ ತತ್ವ ಬಿತ್ತಲು ನಿಮ್ಮ ಮುಂದಿನ ಯೋಜನೆಗಳೇನು?
ಡಿಸೆಂಬರ್ 15-16 ಬಸವ ಉತ್ಸವ ನಡೆಸಲಿದ್ದೇವೆ. ಶರಣ ತತ್ವದ ಪ್ರಸಾರ ಮಾಡಲೆಂದೇ ಈ ಕಾರ್ಯಕ್ರಮ ನಡೆಯಲಿದೆ. ಬಸವಣ್ಣನವರ ಹೊಸ ವಿಗ್ರಹ ಸಿದ್ಧವಾಗುತ್ತಿದೆ, ಅದರ ಅನಾವರಣ ಕೂಡ ನಡೆಯಲಿದೆ.
ನಮ್ಮ ಕಡೆ ಬಹಳ ಕೆಲಸವಾಗಬೇಕು. ಬೇರೆ ಜಿಲ್ಲೆಗಳಲ್ಲಿ ಕಾಣಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ. ಎಲ್ಲಾ ಬಸವ ಭಕ್ತರು, ಸಂಘಟನೆಗಳು ಕೈ ಜೋಡಿಸಿದರೆ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು.