ಮಾನ್ಯ ಹೆಸರಿನಲ್ಲಿ ಮರ್ಯಾದೆ ಹತ್ಯೆ ತಡೆ ಕಾಯ್ದೆಗೆ ಬಸವ, ದಲಿತ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗಿನಲ್ಲಿ ‘ಪ್ರಾಯಶ್ಚಿತ್ತ ದಿನ’ ಸತ್ಯಾಗ್ರಹ‌

ಗದಗ:

ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದವು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ, ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ ಮರ್ಯಾದಾ ಹತ್ಯೆ ಖಂಡಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು “ಪ್ರಾಯಶ್ಚಿತ್ತ ದಿನ” ಸತ್ಯಾಗ್ರಹ‌ ನಡೆಸಲಾಯಿತು.

ಮಾನ್ಯಳ ಹತ್ಯೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ ವಿವಿಧ ದಲಿತ-ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಧರಣಿ ಮಾಡಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಅನ್ಯ ಭಿನ್ನ ಸಂಸ್ಕೃತಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಆದರೆ, ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂದು‌ ಸಾರುವ ಈ ಕಾಲದಲ್ಲಿ ಜಾತಿಶ್ರೇಷ್ಠತೆಯ ವ್ಯಸನದಲ್ಲಿ ಮಗಳನ್ನೇ ಮರ್ಯಾದೆ ಹತ್ಯೆ ಮಾಡುವಂತಹ ರಾಕ್ಷಸ ಮನಸ್ಥಿತಿಯನ್ನು ಕಂಡಾಗ ಬೇಸರವಾಗುತ್ತದೆ”.

 

ಜಾತಿ ಧರ್ಮದ ಹೆಸರಲ್ಲಿ ಹತ್ಯೆ ನಡೆಯುತ್ತಿರುವುದು ಖಂಡನಾರ್ಹ. ಹತ್ಯೆ ನಡೆದಿರುವುದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಸಾಮಾಜಿಕ ಹೋರಾಟಗಾರ ಬಸವರಾಜ ಸೂಳೇಬಾವಿ ಅವರು ಪ್ರಾಸ್ತಾವಿಕ ಮಾತನಾಡಿ, “ಈ ಪ್ರಾಯಶ್ಚಿತ್ತವನ್ನು ಆಕ್ರೋಶಿತರಾಗಿ ಪ್ರತಿಭಟಿಸುತ್ತಿಲ್ಲ. ಇಲ್ಲಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳಲು ಮಾಡುತ್ತಿರುವ ದಿನ. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ಲಿಂಗಾಯತರು ನಡೆದುಕೊಳ್ಳುತ್ತಿಲ್ಲ. ಲಿಂಗಾಯತವನ್ನು ಲಿಂಗಾಯತರು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಸಿದ್ದೇವೆ. ದೇಶದ ಜಾತಿವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಧಾರವಾಡದ ಸಾಹಿತಿ ಪ್ರೊ. ಶಶೀಧರ ತೋಡ್ಕರ್ ಮಾತನಾಡಿ, “ಮಾನ್ಯ ಪಾಟೀಲ ನನ್ನ ವಿದ್ಯಾರ್ಥಿನಿ. ನಮ್ಮ ಹಿರಿಯ ಪ್ರೊಫೆಸರ್ ಸದಾನಂದಗೌಡ ಪಾಟೀಲ ಅವರ ಮೊಮ್ಮಗಳು. ಮಾನ್ಯ ನಮ್ಮ ಕಣ್ಣೆದುರೇ ಬೆಳೆದಿರುವ ಮಗಳು. ಈ ಘಟನೆ ನಡೆಯುವ ಪೂರ್ವದಲ್ಲಿ ಹಲವು ಬಾರಿ ನಾವು ಮಾನ್ಯಳ ತಂದೆಗೆ ತಿಳಿಸಿ ಹೇಳುವ ಕೆಲಸ ಮಾಡಿದೆವು. ಆ ವ್ಯಕ್ತಿಯಲ್ಲಿ ಇದ್ದಂತ ಜಾತಿ ಹಾಗೂ ಸ್ವಃಶ್ರೇಷ್ಠತೆಯ ವ್ಯಸನ ಅಂತಹ ಕ್ರೌರ್ಯ ಮಾಡಲು ಪ್ರೇರೇಪಿಸಿತು. ಇದು ರಾಕ್ಷಸ ಮನಸ್ಥಿತಿ” ಎಂದು ಮಾನ್ಯಳ ಜೊತೆಗಿನ ಬಾಂಧವ್ಯ ಹಾಗೂ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ಎಸ್. ಎಸ್. ಹರ್ಲಾಪುರ, ಶರಣ ಚಿಂತಕ ಅಶೋಕ ಬರಗುಂಡಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶೇಖಣ್ಣ ಕವಳಿಕಾಯಿ, ದಲಿತ ಸಂಘಟನೆಯ ಮುಖಂಡ ಎಸ್.ಎನ್. ಬಳ್ಳಾರಿ, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ, ಗೌರಕ್ಕ ಬಡಿಗಣ್ಣವರ ಮತ್ತಿತರರು ಮಾತನಾಡಿ ಹತ್ಯೆ ಖಂಡಿಸಿದರು.

ಆರಂಭದಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಧರಣಿಗೆ ಚಾಲನೆ ನೀಡಲಾಯಿತು. ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ ಕಟ್ಟಿದ್ದರು. ಕಾರ್ಯಕ್ರಮದಲ್ಲಿ ಹೋರಾಟದ ಹಾಡುಗಳು ಮೊಳಗಿದವು.

ಭೈರನಟ್ಟಿ ಶಾಂತಲಿಂಗ ಶ್ರೀಗಳು, ಕೆ.ಎಸ್. ಚಟ್ಟಿ, ಶಿವನಗೌಡ ಗೌಡ್ರ, ಎಸ್.ಎ. ಮುಗದ, ಎಚ್.ಡಿ. ಡಬರಿ, ಎಲ್‌.ಎಮ್. ಹೊಸಳ್ಳಿ, ಗುರುಲಿಂಗಯ್ಯ ಓದಸುಮಠ, ಬಸವರಾಜ ಕೊಟಗಿ, ಮಹಾಂತೇಶ ಮದ್ನೂರ, ಪ್ರಕಾಶ ಅಸುಂಡಿ, ಪಾಂಡಪ್ಪ ಲಮಾಣಿ, ಮಾರುತಿ ಅಂಗಡಿ, ಕರಿಯಪ್ಪ ಸಂಶಿ, ಚನ್ನಬಸಪ್ಪ ಅಂಗಡಿ, ಎಮ್.ಬಿ. ಲಿಂಗದಾಳ, ಆನಂದ ಸಿಂಗಾಡಿ, ಅನೀಲ ಕಾಳೆ, ಪರಶುರಾಮ ಕಾಳೆ, ಯಲ್ಲಪ್ಪ ರಾಮಗೇರಿ, ಶ್ರೀದೇವಿ ಶೆಟ್ಟರ, ಪದ್ಮಾ ಹಂಜಿಗಿ, ಗಿರಿಜಾ ಹಸಬಿ, ಸಹನಾ ಆತಲಗಿ, ಸುಜಾತ ವಾರದ, ಅಕ್ಕಮಹಾದೇವಿ ಚೆಟ್ಟಿ, ಶಿವಲೀಲಾ ಅಕ್ಕಿ, ಅನ್ನಪೂರ್ಣ ಬರಗುಂಡಿ, ಸರೋಜಾ ಮುಗದ, ರೇಣುಕಾ ಕರೇಗೌಡ್ರ, ಜಯಶ್ರೀ ಹುಬ್ಬಳ್ಳಿ, ಸುವರ್ಣ ಹೊಸಂಗಡಿ, ಸರೋಜ ಲಿಂಗದಾಳ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *