ಮಠಾಧೀಶರ ಒಕ್ಕೂಟದ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವ ಲಿಂಗಾಯತರು

ಡಾ. ಜೆ ಎಸ್ ಪಾಟೀಲ
ಡಾ. ಜೆ ಎಸ್ ಪಾಟೀಲ

ಮಠಾಧೀಶರ ಒಕ್ಕೂಟದ ಅಗತ್ಯವಿದೆಯೆ ಅಥವಾ ಅದನ್ನು ವಿಸರ್ಜಿಸಬೇಕೆ ಅಥವಾ ಅದನ್ನು ಸಂಪೂರ್ಣವಾಗಿ ಪುನಃರಚಿಸಬೇಕೆ?

ವಿಜಯಪುರ

ಜನೆವರಿ ತಿಂಗಳು ೧೭ ರಂದು ಧಾರವಾಡದಲ್ಲಿ ನಡೆದ ಲಿಂಗಾಯತ ಮಠಾಧೀಶರ ಒಕ್ಕೂಟದ ಮಹತ್ವಪೂರ್ಣ ಸಭೆಯ ಕುರಿತು ಬಸವ ಮೀಡಿಯಾ ಸೇರಿದಂತೆ ಬಹಳಷ್ಟು ಬಸವ ಅನುಯಾಯಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಲಿಂಗಾಯತರ ಅಪರಿಮಿತ ನಿರೀಕ್ಷೆಗಳಿಗೆ ಕಾರಣ ಮಠಾಧೀಶರ ಒಕ್ಕೂಟದ ಸಭೆಯ ಉದ್ದೇಶ ಕುರಿತು ಬರೆಯಲಾಗಿದ್ದ “ಹಿಂದುತ್ವಕ್ಕೆ ಬಲಿಯಾಗುತ್ತಿರುವ ಲಿಂಗಾಯತ ಯುವಕರ ರಕ್ಷಣೆ ಹಾಗೂ ಲಿಂಗಾಯತ ಧರ್ಮದ ಮೇಲಿನ ಆಕ್ರಮಣಗಳ ವಿರುದ್ಧ ಒಂದು ಅಭಿಯಾನ ನಡೆಸುವ ಕುರಿತು ಚರ್ಚೆ” ಎನ್ನುವ ಆಕರ್ಷಕ ಸಾಲುಗಳು.

ಇದರಿಂದ ರೋಮಾಂಚನಗೊಂಡ ಅನೇಕ ಬಸವವಾದಿ ಲಿಂಗಾಯತರು ಮಠಾಧೀಶರ ಸಭೆಯ ನಿರ್ಣಯಗಳ ಕುರಿತು ಬಹಳಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದರು. ಆದರೆ ನಾನು ಬಹಳ ಜಾಗರೂಕತೆಯಿಂದ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದೆ.

ಮೊದಲಿಂದಲೂ ಇದ್ದ ಅನುಮಾನ

ಏಕೆಂದರೆ ನಾಲ್ಕಾರು ವರ್ಷಗಳ ಹಿಂದೆ ಮಠಾಧೀಶರ ಒಕ್ಕೂಟ ರಚನೆಯ ಸಂದರ್ಭದಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ನಡೆದ ಎರಡು ದಿನಗಳ ಮಠಾಧೀಶರ ಶಿಬಿರವನ್ನುದ್ದೇಶಿಸಿ ಮಾತನಾಡಿದ್ದ ನಾಲ್ಕು ವಿದ್ವಾಂಸರಲ್ಲಿ ನಾನೂ ಒಬ್ಬನಾಗಿದ್ದೆ. ಮೊದಲ ದಿನ ಡಾ. ಶಿವಾನಂದ ಜಾಮದಾರ್ ಮತ್ತು ಡಾ. ವೀರಣ್ಣ ರಾಜೂರ ಅವರು ಮಾತನಾಡಿದರೆˌ ಕೊನೆಯ ದಿನ ನಾನು ಮತ್ತು ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿದ್ದೆವು.

ಅಂದು ನಾವು ಮಠಾಧೀಶರು ಹಾಗೂ ಅವರ ಯೋಜಿತ ಒಕ್ಕೂಟದ ಸ್ವರೂಪ ಹೇಗಿರಬೇಕು,ˌ ಯಾವ ರೀತಿ ಕೆಲಸ ಮಾಡಬೇಕು ಮುಂತಾದ ಸಲಹೆ ಸೂಚನೆಗಳನ್ನು ನೀಡಿದ್ದೆವು. ಒಕ್ಕೂಟ ರಚನೆಯಾಗಿ ಅನೇಕ ವರ್ಷಗಳೇ ಆದರೂ ನಾವು ಕೊಟ್ಟ ಸಲಹೆಗಳು ಜಾರಿಗೆ ಬರುವುದು ಒತ್ತಟ್ಟಿಗಿರಲಿ, ಒಕ್ಕೂಟ ಯಾವ ಉದ್ಧೇಶದಿಂದ ಹುಟ್ಟಿತು ಎನ್ನುವುದನ್ನೆ ಮಠಾಧೀಶರು ಮರೆತುಬಿಟ್ಟಿದ್ದರು. ಒಕ್ಕೂಟದ ಅಧ್ಯಕ್ಷರಾಗಿ ಸಂಘ-ಬಿಜೆಪಿ ಹಾಗೂ ಹಿಂದುತ್ವದ ಕುರಿತು ಮೃದು ಧೋರಣೆಯುಳ್ಳ ಭಾಲ್ಕಿಯ ಬಸವಲಿಂಗ ಪಟ್ಟದೇವರು ಆಯ್ಕೆಯಾದಾಗಲೆ ನನಗೆ ಒಕ್ಕೂಟದ ಕುರಿತು ಭ್ರಮನಿರಸನವಾಗಿತ್ತು.

ಒಕ್ಕೂಟದ ಅಧ್ಯಕ್ಷರಾಗಿ ಸಂಘ-ಬಿಜೆಪಿ ಹಾಗೂ ಹಿಂದುತ್ವದ ಕುರಿತು ಮೃದು ಧೋರಣೆಯುಳ್ಳ ಭಾಲ್ಕಿಯ ಬಸವಲಿಂಗ ಪಟ್ಟದೇವರು ಆಯ್ಕೆಯಾದಾಗಲೆ ನನಗೆ ಒಕ್ಕೂಟದ ಕುರಿತು ಭ್ರಮನಿರಸನವಾಗಿತ್ತು.

ಹಿಂದುತ್ವಕ್ಕೆ ಹಿನ್ನಡೆ

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು, ಕಾಂಗ್ರೆಸ್ ಪಕ್ಷದಿಂದ ಅತ್ಯಧಿಕ ಸಂಖ್ಯೆಯ ಲಿಂಗಾಯತ ಶಾಸಕರು ಆಯ್ಕೆಯಾದ ಮೇಲೆ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಯಾಗಿರುವ ಸಂಘ ಲಿಂಗಾಯತ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಗೊಳಗಾಯಿತು.

ಕಳೆದ ವರ್ಷ ಸಂಸತ್ ಚುನಾವಣೆಗೆ ಮೊದಲು ರಾಜ್ಯ ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ ಮೇಲೆ ಈ ಹಿಂದುತ್ವವಾದಿ ಗುಂಪುಗಳ ನಿದ್ರೆ ಕಳೆದು ಹೋಯಿತು. ಒಂದು ಕಡೆ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಕುರಿತು ಹೆಚ್ಚುತ್ತಿರುವ ಜಾಗೃತಿ, ಇನ್ನೊಂದು ಕಡೆ ಅವೈದಿಕ ಬಸವತತ್ವದ ಜನಪ್ರಿಯತೆ ಹಿಂದುತ್ವವಾದಿಗಳ ಜಂಘಾಬಲವನ್ನೇ ಉಡುಗಿಸಿತು.

ತಕ್ಷಣ ಕಾರ್ಯಪ್ರವರ್ತವಾದ ಹಿಂದುತ್ವವಾದಿ ಗುಂಪು ವಚನ ಚಳುವಳಿಯ ಪ್ರಾಮುಖ್ಯತೆಯನ್ನು ಗೌಣಗೊಳಿಸುವ ಹೀನ ಕಾರ್ಯಕ್ಕೆ ಕೈಹಾಕಿತು. ವಚನ ದರ್ಶನ ಪುಸ್ತಕ ಬಿಡುಗಡೆಯ ಸಭೆಗಳು ಹಾಗೂ ಅದರ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆ ಹಿಂದುತ್ವವಾದಿಗಳ ಗುಂಪು ಹೂಡಿದ ಹುನ್ನಾರದ ಪ್ರದರ್ಶನವಾಗಿತ್ತು.

ವಚನ ದರ್ಶನ: ಒಕ್ಕೂಟದ ಮೌನ

ಇಷ್ಟೆಲ್ಲ ನಡೆದರೂ ಪ್ರಮುಖ ಮಠಾಧೀಶರಾಗಲಿˌ ಅಥವಾ ಮಠಾಧೀಶರ ಒಕ್ಕೂಟವಾಗಲಿ ವಚನ ದರ್ಶನದ ವಿರುದ್ಧ ಕನಿಷ್ಠ ಧ್ವನಿ ಎತ್ತುವ ಕೆಲಸ ಮಾಡಲಿಲ್ಲ. ಆ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವು ಮಠಾಧೀಶರು ಬಸವವಾದಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಆಮೇಲೆ ಜಾಗೃತರಾದ ಮಠಾಧೀಶರು ಹಿಂದುತ್ವವಾದಿಗಳಿಂದ ಒಲ್ಲದ ಮನಸ್ಸಿನಿಂದ ಅಂತರ ಕಾಯ್ದುಕೊಳ್ಳುವ ನಾಟಕ ಆರಂಭಿಸಿದರು. ಆದರೆ ಆ ನಾಟಕ ಬಹಳ ದಿನ ನಡೆಯಲಿಲ್ಲ.

ಇಷ್ಟೆಲ್ಲ ನಡೆದರೂ ಪ್ರಮುಖ ಮಠಾಧೀಶರಾಗಲಿˌ ಅಥವಾ ಮಠಾಧೀಶರ ಒಕ್ಕೂಟವಾಗಲಿ ವಚನ ದರ್ಶನದ ವಿರುದ್ಧ ಕನಿಷ್ಠ ಧ್ವನಿ ಎತ್ತುವ ಕೆಲಸ ಮಾಡಲಿಲ್ಲ.

ಸೇಡಂನಲ್ಲಿ ಹಿಂದುತ್ವವಾದಿಗಳು ಆಯೋಜಿಸುವ ಭಾರತೀಯ ಸಂಸ್ಕೃತಿ ಉತ್ಸವದ ಹೆಸರಿನ ಹಿಂದುತ್ವದ ಸಮಾವೇಷದ ಮುಖ್ಯ ಗುರಿಯಾಗಿದ್ದ ಲಿಂಗಾಯತ ಮಠಾಧೀಶರನ್ನು ಎಚ್ಚರಗೊಳಿಸಲು ಬಸವವಾದಿಗಳು ಕಲಬುರಗಿಯಲ್ಲಿ ಜನೆವರಿ ೧೯ರಂದು ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡು ಲಿಂಗಾಯತ ಮಠಾಧೀಶರು ಹಿಂದುತ್ವದ ಸಮಾವೇಷಕ್ಕೆ ಹೋಗದಂತೆ ಎಚ್ಚರಿಸಿದ್ದರು.

ಕಾಳಜಿ, ಬದ್ಧತೆ, ನಾಚಿಕೆ?

ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಬಹುತ್ವ ಸಮಾವೇಶಕ್ಕೆ ಬಂದಿದ್ದ ಭಾಲ್ಕಿಯ ಬಸವಲಿಂಗ ಪಟ್ಟದೇವರೂ ಒಳಗೊಂಡಂತೆ ಅನೇಕ ಮಠಾಧೀಶರು ಸೇಡಂನ ಹಿಂದುತ್ವವಾದಿಗಳ ಸಮಾವೇಶದಲ್ಲಿ ಯಾವ ನಾಚಿಕೆಯಿಲ್ಲದೆ ಭಾಗವಹಿಸಿದರು.

ಇದರರ್ಥ ಮಠಗಳಿಗೆ ಹಾಗೂ ಮಠಾಧೀಶರಿಗೆ ಯಾವ ರೀತಿಯಲ್ಲೂ ಭಕ್ತರ ಭಯವಾಗಲಿ, ಬಸವತತ್ವದ ಕಾಳಜಿಯಾಗಲಿ, ಹಿಂದುತ್ವವಾದಿಗಳಿಂದ ಲಿಂಗಾಯತ ಸಂಸ್ಕೃತಿಯ ರಕ್ಷಣೆಯ ಉದ್ದೇಶವಾಗಲಿ ಅಥವಾ ಬಸವತತ್ವದ ಬದ್ಧತೆಯಾಗಲಿ ಇಲ್ಲ ಎನ್ನುವುದು ಬಹಿರಂಗವಾಗಿಯೆ ಸಾಬೀತಾಯಿತು.

ಭಕ್ತರ ಭಯವಾಗಲಿ, ಬಸವತತ್ವದ ಕಾಳಜಿಯಾಗಲಿ, ಹಿಂದುತ್ವವಾದಿಗಳಿಂದ ಲಿಂಗಾಯತ ಸಂಸ್ಕೃತಿಯ ರಕ್ಷಣೆಯ ಉದ್ದೇಶವಾಗಲಿ ಅಥವಾ ಬಸವತತ್ವದ ಬದ್ಧತೆಯಾಗಲಿ ಇಲ್ಲ

ಈ ಘಟನೆಗಳು ಹಾಗೂ ಪ್ರಸ್ತುತ ಬೆಳವಣಿಗೆಗಳು ಲಿಂಗಾಯತರು ಮಠಾಧೀಶರ ಮೇಲೆ ಭರವಸೆ ಇಟ್ಟುಕೊಳ್ಳುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿವೆ. ಬಸವತತ್ವವನ್ನು ಬಹಿರಂಗವಾಗಿ ಪ್ರತಿಪಾದಿಸುವ ಅನೇಕ ಪ್ರಮುಖ ಮಠಾಧೀಶರು ಒಳಗೊಳಗೆ ಹಿಂದುತ್ವವಾದಿಗಳೊಂದಿಗೆ ಕೈಜೋಡಿಸಿರುವ ಸಂಗತಿ ಗುಟ್ಟಾಗೇನೂ ಉಳಿದಿಲ್ಲ. ಇವರಲ್ಲಿ ಒಂದೆರಡು ಮಠಾಧೀಶರು ಗುಟ್ಟಾಗಿ ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಭಾಗವಹಿಸಿ ಬಂದಿರುವ ಗುಮಾನಿಗಳಿವೆ.

ಇವರು ಉದ್ಯಮಿಗಳು

ಲಿಂಗಾಯತ ಧರ್ಮ ಹೋರಾಟ ಸಾಮಾನ್ಯ ಲಿಂಗಾಯತರ ಅಸ್ಮಿತೆಯಾದರೆ ಶ್ರೀಮಂತ ಮಠಾಧೀಶರು ಹಾಗೂ ರಾಜಕಾರಣಿಗಳು ಅದರ ಕುರಿತು ಯಾವುದೆ ಕಾಳಜಿ ಇಲ್ಲದೆ ತಮ್ಮ ತಮ್ಮ ಮಠ, ವ್ಯಾಪಾರ, ವ್ಯವಹಾರ, ಶಿಕ್ಷಣ ಸಂಸ್ಥೆಗಳು, ಉದ್ಯಮಗಳ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ಮಾಡುತ್ತಿರುವ ಸಂಗತಿ ಸುಳ್ಳಲ್ಲ.

ತಮ್ಮ ಮಠ, ವ್ಯಾಪಾರ, ವ್ಯವಹಾರ, ಶಿಕ್ಷಣ ಸಂಸ್ಥೆಗಳು, ಉದ್ಯಮಗಳ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯ ಮಾಡುತ್ತಿರುವ ಸಂಗತಿ ಸುಳ್ಳಲ್ಲ.

ಲಿಂಗಾಯತ ತತ್ವ ಸಿದ್ಧಾಂತ ಕುರಿತು ತಾತ್ವಿತ ಬದ್ದತೆ ಹೊಂದಿರುವ ಬೆರಳೆಣಿಕೆಯ ಲಿಂಗಾಯತ ಮಠಾಧೀಶರು ಹಿಂದುತ್ವವಾದಿಗಳ ಮತ್ಸರಕ್ಕೆ ಹಾಗೂ ದ್ವೇಷಕ್ಕೆ ತುತ್ತಾಗುತ್ತಿದ್ದಾರೆ. ಅವರ ಬೆಂಬಲಕ್ಕೆ ಲಿಂಗಾಯತ ಮಠಾಧೀಶರ ಒಕ್ಕೂಟ ಬಲವಾಗಿ ನಿಲ್ಲದೆ ಕಾಟಾಚಾರಕ್ಕೆ ಎಂಬಂತೆ ವರ್ತಿಸುತ್ತಿದೆ.

ಬಸವವಾದಿ ಲಿಂಗಾಯತರಂತೂ ಲಿಂಗಾಯತ ಮಠಾಧೀಶರು ಹಾಗೂ ಮಠಾಧೀಶರ ಒಕ್ಕೂಟದ ಮೇಲಿನ ಭರವಸೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಾರೆ. ಲಿಂಗಾಯತ ಧರ್ಮ ರಕ್ಷಣೆ, ಪ್ರಚಾರ ಹಾಗೂ ಹೋರಾಟದ ಕುರಿತು ಮಠಾಧೀಶರ ಒಕ್ಕೂಟದೊಂದಿಗೆ ಭರವಸೆಯ ಒಡನಾಟವಿಟ್ಟುಕೊಂಡಿರುವ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದ ಕಟಿಬದ್ಧ ಮುಖಂಡರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ.

ನಿಜವಾಗಿಯೂ ಮಠಾಧೀಶರ ಒಕ್ಕೂಟದ ಅಗತ್ಯವಿದೆಯೆ ಅಥವಾ ಅದನ್ನು ವಿಸರ್ಜಿಸಬೇಕೆ ಅಥವಾ ಒಕ್ಕೂಟವನ್ನು ಸಂಪೂರ್ಣವಾಗಿ ಪುನಃರಚಿಸಬೇಕೆ ಎನ್ನುವ ಕುರಿತು ಪ್ರಮುಖ ಮಠಾಧೀಶರೊಂದಿಗೆ ಸಮಾಲೋಚಿಸುವ ತುರ್ತು ಅಗತ್ಯವಿದೆ. ಹಾಗಾಗದೆ ಹೋದರೆ ಸಂಘಟನೆಗಳುˌ ಒಕ್ಕೂಟ, ಹೋರಾಟˌ ಅಭಿಯಾನ, ಸಮಾವೇಷ, ಸಮ್ಮೇಳನ ಇತ್ಯಾದಿ ಇವೆಲ್ಲವೂ ತಮ್ಮತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನಡೆಯುವ ಪ್ರಹಸನಗಳಾಗುತ್ತವೆಯೆ ಹೊರತು ಇದಕ್ಕಿಂತ ಹೆಚ್ಚಿನದೇನೂ ಬಸವ ತತ್ವಕ್ಕೆ ಹಾಗೂ ನೈಜ ಲಿಂಗಾಯತರಿಗೆ ದಕ್ಕುವುದಿಲ್ಲ.

Share This Article
4 Comments
  • ತಮ್ಮ ಅಭಿಪ್ರಾಯ ಸರಿಯಾಗಿದೆ. ಲಿಂಗಾಯತ ಮಠಾಧೀಶರ ಒಕ್ಕೂಟ ಕೆಲವು ಸ್ವಾಮೀಜಿಗಳು ಇಬ್ಬಂದಿತನ ಬಿಟ್ಟು ಸೈದ್ಧಾಂತಿಕ ಬದ್ಧತೆ ಬೆಳೆಸಿಕೊಳ್ಳಬೇಕು. ಆಗ ಲಿಂಗಾಯತ ಧರ್ಮಕ್ಕೇ ಉತ್ತಮ ಭವಿಷ್ಯ ತಾನೇ ತಾನಾಗಿ ಒದಗಿ ಬರುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳಿಗೂ ಅನ್ವಯಿಸುತ್ತದೆ. ಅವರು ಲಿಂಗಾಯತ ಧರ್ಮದ ವಿರೋಧಿಗಳು ಯಾರೆಂದು ಸ್ಪಷ್ಟವಾಗಿ ಗುರ್ತಿಸಿ ಅಂತಹ ಸಂಸ್ಥೆ ಅಥವಾ ಪಕ್ಷಗಳಿಂದ ಅಂತರಂಗ ಹಾಗೂ ಬಹಿರಂಗವಾಗಿ ದೂರ ಇದ್ದರೆ ಮಾತ್ರ ಲಿಂಗಾಯತ ಧರ್ಮದ ಮಾನ್ಯತೆ ಪಡೆಯಲು ಸಾಧ್ಯ.ಇಲ್ಲದೇ ಹೋದರೆ ಕುರಿಗಳ ಹಿಂಡಿನಲ್ಲಿ ತೋಳಗಳು ಇದ್ದಂತೆ ಆಗುತ್ತದೆ.

  • ವಾಸ್ತವ ಹೇಳಿದ್ದೀರಿ,

    ಶರಣು ಶರಣಾರ್ಥಿ

  • ಈ ಅಭಿಪ್ರಾಯ ಅಲ್ಲಗೆಳೆಯುವ ಅಧವಾ ಒಪ್ಪುವಲ್ಲಿ ಬಹಳ ಗೊಧಲದ ಬಿಕ್ಕಟ್ಟಿದೆ. ಈ ಬಿಕ್ಕಟ್ಟನ್ನು ಒಕ್ಕೂಟದ ಅಧ್ಯಕ್ಷರು ಮತ್ತು ಪದಾದಿಕಾರಿಗಳು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿ ಬಿಕ್ಕಟ್ಟುನ್ನು ಶಮನಗೊಳಿಸ ಬೇಕಿದೆ

  • ವೀರಶೈವ ಪಂಚಪೀಠದ ಯವ ಒಬ್ಬ ಆಚಾರ್ಯರೂ ಕುಂಭ ಮೇಳಕ್ಕೆ ಹೋಗಲಿಲ್ಲ ಆದರೆ ಲಿಂಗಾಯತ ಮಠಾಧೀಶರು ಮೇಳಕ್ಕೆ ಹೋಗಿ ಮೂಗು ಹಿಡಿದು ನೀರಲ್ಲಿ ಮುಳಿಗಿಬಂದ ಫೋಟೊಗಳನ್ನು ತಾವಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅಂದರೆ ಲಿಂಗಾಯತ ಸಿದ್ಧಾಂತವೆ ಇವರಿಗೆ ಅರ್ಥವಾಗಿಲ್ಲ. ಕಟ್ಟಿದ ಲಿಂಗವ ಬಿಟ್ಟು……. ಈ ವಚನ ಅರ್ಥವಾಗಿಲ್ಲ. ಇಂಥ ಮಠಾಧೀಶರಿಂದ ತುಂಬಿರುವ ಒಕ್ಕೂಟ ಯಾವ ಪುರುಷಾರ್ಥಕ್ಕಾಗಿ ? ಅದನ್ನು ವಿಸರ್ಜಿಸುವುದು ಉತ್ತಮ. ಲಿಂಗಾಯತ ಸಂಘಟನೆಗಳೂ ಇದೇ ಹಾದಿಯಲ್ಲಿವೆ. ಇವರನ್ನು ನಂಬದೆ ಲಿಂಗಾಯತ ಹೋರಾಟ ಜನಸಾಮಾನ್ಯರಿಂದಲೆ ಆರಂಭವಾಗಲಿ

Leave a Reply

Your email address will not be published. Required fields are marked *