ಮಠಾಧಿಪತಿಗಳು ಸಿಗಬಹುದು, ತತ್ವನಿಷ್ಠ ಸ್ವಾಮಿಗಳು ಸಿಗುವುದಿಲ್ಲ: ನಿಜಗುಣಾನಂದ ಶ್ರೀ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಪಟ್ಟಸಾಲಿ ನೇಕಾರ ಗುರುಪೀಠದ ಶ್ರೀ ಗುರುಬಸವ ದೇವರ ಪಟ್ಟಾಧಿಕಾರ ಸಮಾರಂಭವನ್ನು ವೇದಿಕೆ ಮೇಲಿದ್ದ ಪೂಜ್ಯರು, ಗಣ್ಯರು ವಚನಗಳನ್ನು ನೆರೆದವರಿಗೆ ಹೇಳಿಸುವ ಮುಖಾಂತರ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಗುಳೇದಗುಡ್ಡ

ಸನ್ಯಾಸಿಗಳಾಗುವುದು ಬಹಳ ಕಷ್ಟದ ಕಾರ್ಯ, ಸನ್ಯಾಸಿಗಳದ್ದು ಮುಳ್ಳಿನ ಹಾಸಿಗೆಯಿದ್ದಂತೆ, ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಸ್ವಾಮೀಜಿಗಳಿಗಿರುತ್ತದೆ, ದೇಶದಲ್ಲಿ ಸ್ವಾಮೀಜಿಗಳ ಸಂಖ್ಯೆ ದುರ್ಲಭವಾಗುತ್ತಿದೆ, ಮಠಾಧಿಪತಿಗಳು ಸಿಗಬಹುದು ಆದರೆ ತತ್ವನಿಷ್ಠ ಸ್ವಾಮಿಗಳು ಸಿಗುವುದಿಲ್ಲ ಎಂದು ಬೈಲೂರು, ಮುಂಡರಗಿ ಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಸಮಾಜದಲ್ಲಿ ಮಕ್ಕಳನ್ನು ಐಎಎಸ್, ಇಂಜಿನಿಯರ್, ಡಾಕ್ಟರ್ ಮಾಡುವ ತಂದೆ-ತಾಯಿಗಳಿದ್ದಾರೆ, ಆದರೆ ಮಠಕ್ಕೆ ಸ್ವಾಮೀಜಿ ಮಾಡುತ್ತೇವೆ ಎನ್ನುವ ತಂದೆ ತಾಯಿಗಳ ಕೊರತೆ ಎದ್ದು ಕಾಣುತ್ತಿದೆ, ಎಂದು ಹೇಳಿದರು.

ಅವರು ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳ 39ನೇ ವಾರ್ಷಿಕ ಪುಣ್ಯರಾಧನೆಯ ಶರಣ ಸಂಗಮ ಸಮಾರಂಭ, ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸುವರ್ಣ ಮಹೋತ್ಸವ ಮತ್ತು ಪಟ್ಟಸಾಲಿ ನೇಕಾರ ಗುರುಪೀಠದ ಶ್ರೀ ಗುರುಬಸವ ದೇವರ ಪಟ್ಟಾಧಿಕಾರ ಮಹೋತ್ಸವ, ಸಮಾಜಸೇವಾ ಗುರುದೀಕ್ಷಾ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ “ನಡೆದ ಶರಣರ ಅನುಭವ ದರ್ಶನ ಪ್ರವಚನ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈ ಪಟ್ಟಾಧಿಕಾರ ಮಹೋತ್ಸವ ಧರ್ಮ ಮತ್ತು ಸಿದ್ಧಾಂತದ ಉಪದೇಶ ಮಾಡುವ ಕಾರ್ಯಕ್ರಮವಾಗಿದೆ. ಗುರು ಬಸವ ದೇವರು ಬುದ್ದಿವಂತರು, ತತ್ವನಿಷ್ಠರು ಆಗಿದ್ದು, ಪೀಠಾಧಿಪತಿಗಳಾಗುತ್ತಿರುವುದು ಖುಷಿಯ ವಿಚಾರವೆಂದು ನಿಜಗುಣಾನಂದ ಸ್ವಾಮಿಗಳು ಅಭಿಪ್ರಾಯಪಟ್ಟರು.

ಸಮಾರಂಭವನ್ನು ವೇದಿಕೆ ಮೇಲಿದ್ದ ಪೂಜ್ಯರು, ಗಣ್ಯಮಾನ್ಯರು ವಚನಗಳನ್ನು ನೆರೆದವರಿಗೆ ಹೇಳಿಸುವ ಮುಖಾಂತರ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಮಾಜಿ ಸಚಿವ ಎಸ್. ಆರ್. ಪಾಟೀಲ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ, 12ನೇ ಶತಮಾನದ ಶರಣರು ಸಮಸಮಾಜ ನಿರ್ಮಾಣ ಮಾಡಲು ಮಾಡಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ಶರಣರ ಪ್ರವಚನ ಕೇಳುವುದಷ್ಟೇ ಅಲ್ಲ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದರು.

ಶ್ರೀ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು ಮಾತನಾಡಿ, ನಮ್ಮ ದೇಶ ಯಾವುದೇ ಜಾತಿ, ವರ್ಗ, ಪಂಥ ಎನ್ನದೆ ಎಲ್ಲರೂ ಒಂದು ಎನ್ನುವ ಭಾವೈಕ್ಯತೆಯ ನೆಲೆಯಾಗಿದೆ. 12ನೇ ಶತಮಾನದ ಶರಣರು ಸರ್ವರಿಗೂ ಸಮಪಾಲು, ಸಮ ಬಾಳು ಎಂದು ಸಾರಿ ನಾಡಿಗೆ ಅಮೋಘ ಚಿಂತನೆಗಳನ್ನು ನೀಡಿದ್ದಾರೆ, ಅವುಗಳನ್ನು ಜೀವನದಲ್ಲಿ ನಾವೆಲ್ಲ ಅಳುವಡಿಸಿಕೊಳ್ಳಬೇಕೆಂದರು.

ಹೊಳೆ ಹುಚ್ಚೇಶ್ವರ ಮಠದ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿದರು. ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಗುರುಬಸವ ದೇವರು ಸಮಾರಂಭದ ಸಾನಿಧ್ಯ ವಹಿಸಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ, ಚಿಂತಕ ಅಶೋಕ ಬರಗುಂಡಿ, ಶರಣರಾದ ಹನುಮಂತ ಮಾವಿನಮರದ, ರಾಜು ಜವಳಿ, ಸಂಜಯ ಬರಗುಂಡಿ, ಸಂಗನಬಸಪ್ಪ ಚಿಂದಿ, ನಾಗೇಶ ಪಾಗಿ, ಶಿವಾನಂದ ನಾರಾ, ಸಿ.ಎಂ. ಚಿಂದಿ, ಮಲ್ಲಿಕಾರ್ಜುನ ರಾಜನಾಳ, ಈರಣ್ಣ ಶೇಖಾ, ಸೋಮು ಕಲಬುರ್ಗಿ ಮತೀತರರು ಉಪಸ್ಥಿತರಿದ್ದರು.

ಪೂಜ್ಯ ನಿಜಗುಣಾನಂದ ಸ್ವಾಮೀಜಿಯವರಿಂದ ಇದೇ 15ರಿಂದ ಆರಂಭಗೊಂಡ “ಶರಣರ ಅನುಭಾವ ದರ್ಶನ ಪ್ರವಚನ” ಪ್ರತಿದಿನ ಸಂಜೆ 06 ರಿಂದ 08 ಗಂಟೆಯವರೆಗೆ, ಡಿಸೆಂಬರ್ 15 ರವರೆಗೆ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠ ಪಟ್ಟಸಾಲಿ ನೇಕಾರ ಗುರುಪೀಠದಲ್ಲಿ ನಡೆಯಲಿದೆ.

Share This Article
Leave a comment

Leave a Reply

Your email address will not be published. Required fields are marked *