ಬೆಳಗಾವಿ:
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ. ಮಠಗಳಿಂದಲೇ ಭಾರತೀಯ ಸಂಸ್ಕೃತಿ ಉಳಿದು ಬೆಳೆದಿದೆ. ಅಧ್ಯಾತ್ಮ ಕ್ಷೇತ್ರದಲ್ಲಿ ಇಡೀ ಜಗತ್ತಿಗೆ ಮಾದರಿಯಾದ ದೇಶ ನಮ್ಮದು. ಈ ಆಧ್ಯಾತ್ಮಿಕ ಚಿಂತನೆಗಳನ್ನು ಮಠಗಳು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತ ಬಂದಿವೆ. ಸಂಸ್ಕೃತಿ, ಸಂಸ್ಕಾರ ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಠಗಳು ಶ್ರಮಿಸುತ್ತ ಬಂದಿವೆ ಎಂದು ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಕಾರಂಜಿಮಠದಲ್ಲಿ ಜರುಗಿದ ಶ್ರೀಮಠದ 26ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಪೂಜ್ಯರು ಮಾತನಾಡುತ್ತಿದ್ದರು. ಕನ್ನಡ ಭಾಷೆಯನ್ನು ಉಳಿಸಬೇಕಾದರೆ ಕೇವಲ ರಾಜ್ಯೋತ್ಸವ ದಿನ ಮಾತ್ರ ಅಭಿಮಾನ ಪಡದೆ, ನಿತ್ಯ ನಿರಂತರ ಕನ್ನಡ ಭಾಷಾಭಿಮಾನ ನಮ್ಮಲ್ಲಿರಬೇಕೆಂದು ತಿಳಿಸಿದರು.
ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ಭಾರತ ತನ್ನ ಧರ್ಮ ಮೌಲ್ಯಗಳಿಂದ ಇಂದಿಗೂ ಇಡೀ ಜಗತ್ತಿಗೆ ಮಾದರಿಯಾಗಿದೆ. ಭೌತಿಕ ಸಂಪತ್ತಿನ ಬೆನ್ನು ಹತ್ತಿ ಶಾಂತಿ ನೆಮ್ಮದಿ ಕಳೆದುಳ್ಳುತ್ತಿರುವ ವಿದೇಶಿಯರು ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಸದ್ಗುಣಗಳನ್ನು ಬೆಳೆಸಿದರೆ ಸರ್ವಾಂಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
‘ಭವ್ಯ ಭಾರತ ದಿವ್ಯ ಪರಂಪರೆ’ ಎಂಬ ವಿಷಯ ಕುರಿತು ವೀರೇಶ ಪಾಟೀಲ ಪ್ರವಚನ ನೀಡಿದರು. ಭಾರತವು ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕವಾಗಿ ಹೇಗೆ ಸಮೃದ್ಧವಾಗಿತ್ತು ಎಂದು ತಿಳಿಸಿದರು. ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು, ಡಾ. ಶಿವಯೋಗಿ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಡಾ. ಬಸವರಾಜ ಜಗಜಂಪಿ ಸ್ವಾಗತಿಸಿದರು, ಶ್ರೀಕಾಂತ ಶಾನವಾಡ ಕಾರ್ಯಕ್ರಮ ನಿರೂಪಿಸಿದರು. ವಿ. ಕೆ. ಪಾಟೀಲ ವಂದಿಸಿದರು. ಕುಮಾರೇಶ್ವರ ಸಂಗೀತ ಪಾಠ ಶಾಲೆಯ ಮಕ್ಕಳಿಂದ ವಚನ ಸಂಗೀತ ಜರುಗಿತು.
