ಮತ್ತೆ ಕಲ್ಯಾಣ: ಪ್ರಬುದ್ಧ ಸಮಾಜ ನಿರ್ಮಿಸಲು ಮನಸ್ಸುಗಳ ಅಂತರಂಗದ ಚಳವಳಿ

ಬಸವೇಶ್ವರರ ಜನ್ಮದಿನದ ಸಮಯದಲ್ಲಿ ಅವರ ಕನಸಿನ ಸಮಾನತೆಯ ಸಮಾಜದ ನೆನಪುಗಳನ್ನು ಅಕ್ಷರಗಳಲ್ಲಿ ನೆನಪಿಸಿಕೊಳ್ಳುತ್ತಾ………

ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ……
12 ನೆಯ ಶತಮಾನದಲ್ಲಿಯೇ ಒಬ್ಬ ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನನ್ನು ಏನೆಂದು ಕರೆಯುವುದು. ಈ ಕಾಲದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು.

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ ಚಮ್ಮಾರ ಹೊಲೆಯ ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ 8 ಶತಮಾನಗಳ ಹಿಂದೆಯೇ ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದ ಎಂಬುದನ್ನು ಊಹಿಸಿಕೊಳ್ಖಲು ಸಾಧ್ಯವೇ…..

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು….

ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ.

ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಜನಪ್ರಿಯವಾಗಿರುವಾಗ ಮತ್ತೆ ಕಲ್ಯಾಣ ಸಾಧ್ಯವೇ….

ಒಕ್ಕಲಿಗರು ವೀರಶೈವರು ಒಂದೊಂದು ಪಕ್ಷದ ಬಾಲಗಳಿಗೆ ಜೋತು ಬಿದ್ದಿರುವಾಗ, ಲಿಂಗಾಯಿತರು ವೀರಶೈವರು ಪರಸ್ಪರ ಕಚ್ಚಾಡುತ್ತಿರುವಾಗ, ದಲಿತರು ಬ್ರಾಹ್ಮಣರು ದ್ವೇಷಿಸುತ್ತಿರುವಾಗ, ಮುಸ್ಲಿಮರು ಕ್ರಿಶ್ಚಿಯನ್ನರು ದೂರವಾಗಿರುವಾಗ, ಹಿಂದೂಗಳು ಮುಸ್ಲಿಮರು ವಿರೋಧಿಗಳಾಗಿರುವಾಗ ಮತ್ತೆ ಕಲ್ಯಾಣ ಹೇಗೆ ಸಾಧ್ಯ..‌…‌‌.

ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ ಮತ್ತೆ ಕಲ್ಯಾಣ ಯಾವಾಗ,.‌……

ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ ಮತ್ತೆ ಕಲ್ಯಾಣ ಎಂದು…..

ಆದರೆ, ಮತ್ತೆ ಕಲ್ಯಾಣ ಒಂದು ಅದ್ಭುತ ಚಿಂತನೆ.

ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ.

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ.

ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ.

ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ.

ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ.

ಆದರೂ, ಮತ್ತೆ ಕಲ್ಯಾಣಕ್ಕಾಗಿ ಆ ಕನಸನ್ನು ನನಸು ಮಾಡಲು ಮನಸ್ಸುಗಳ ಅಂತರಂಗದ ಚಳವಳಿ ಸದಾ ಜಾರಿಯಲ್ಲಿರುತ್ತದೆ ಅದು ವಾಸ್ತವವಾಗುವವರೆಗೂ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

Share This Article
Leave a comment

Leave a Reply

Your email address will not be published. Required fields are marked *