ಮೂರುವರೆ ದಶಕಗಳ ಮಾತಿಗೆ ಬ್ರೇಕ್ ಇರಲಿಲ್ಲ, ಸಾಧ್ಯವಾಗಲೂ ಇಲ್ಲ. ಎರಡು ದಶಕಗಳ ಹಿಂದೆ ಕೈ ಸೇರಿದ ಮೊಬೈಲ್ ಗೀಳಾದದ್ದು ಅರಿವಿಗೆ ಇರಲಿಲ್ಲ. ಹಾಗಾದರೆ ಮುಂದೇನು?
ಮನೆ ಬಿಟ್ಟು ತಿರುಗುವುದು ಸಹಜ. ಆದರೆ ಮತ್ತದೇ ಮೊಬೈಲ್ ಕಮ್ಯುನಿಕೇಶನ್ಸ್ ಇದ್ದೇ ಇರುತ್ತದೆ. ನಿರಾತಂಕವಾಗಿರಲು. ಮಕ್ಕಳು, ಗೆಳೆಯರು, ಕೆಲಸ ನಿಮಿತ್ತ ಅನೇಕರು ಫೋನಾಯಿಸಿ ಹಲೋ ಹೇಳಿಯೇ ಹೇಳುತ್ತಾರೆ. ಹತ್ತು ದಿನಗಳ ಕಾಲ ಎಲ್ಲಾ ಬಿಟ್ಟು ಇರುವ ಮಾರ್ಗವೆಂದರೆ ವಿಪಶ್ಯನ ಮೌನ-ಧ್ಯಾನ.
ಎಸ್.ಎನ್. ಗೊಯಂಕ್ ಅವರು ಆರಂಭಿಸಿದ ವಿಪಶ್ಯನ ಕೇಂದ್ರಗಳು ದೇಶದಾದ್ಯಂತ ಇವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಕಳೆದ ತಿಂಗಳ 31 ರಿಂದ ಈ ತಿಂಗಳ 10 ರ ವರೆಗೆ ಅವಕಾಶ ಲಭಿಸಿತು.
ಮನೆಯವರಿಗೆ ಬೈ ಹೇಳಿ, ಮನೆಯಲ್ಲಿ ಮೊಬೈಲ್ ಬಿಸಾಕಿ ಹೊರಟಾಗ, ದಿವ್ಯ ಮೌನ, ಅದೇನೋ ಕಳಕೊಂಡ ಹಳವಂಡ.
ಅಲ್ಲಿನ ಪಾಲನೆಗಳ ಕಂಡು ಕೆಲ ಕ್ಷಣ ಬೆಚ್ಚಿ ಹೋದೆ. ಸಂಪೂರ್ಣ ಮೌನ, ಬೆಳಿಗ್ಗೆ ನಾಲ್ಕರಿಂದ ರಾತ್ರಿ ಒಂಬತ್ತರ ವರೆಗೆ ನಿರಂತರ ಧ್ಯಾನ, ಅದೂ ಕೆಳಗೆ ಕುಳಿತು! ಯಾರೊಂದಿಗೆ ಮಾತಿಲ್ಲ, ಗುರುಗಳ ಹೊರತು ಪಡಿಸಿ, ಅದೂ ಅಗತ್ಯವಿದ್ದಾಗ ಮಾತ್ರ.
ಹೊರಗಿನ ಯಾರ ಸಂಪರ್ಕ ಇಲ್ಲ. ಪೆನ್ನು, ಹಾಳೆ ಮುಟ್ಟುವ ಹಾಗಿಲ್ಲ. ಪಂಚೇಂದ್ರಿಯಗಳಿಗೆ ಭಾವನಾತ್ಮಕ ಇನ್ ಪುಟ್ ನೀಡದ, ಧ್ಯಾನದ ಒಳ ಪಯಣ. ಸತತವಾಗಿ ಹತ್ತು ದಿನ ಧ್ಯಾನ, ಧ್ಯಾನ, ಮೌನ, ಮೌನ!
ಕೆಳಗೆ ಕೂಡುವುದು, ಬಟ್ಟೆ ಒಗೆಯುವುದು, ಅಕ್ಕಪಕ್ಕದವರ ಜೊತೆಗೆ ಮಾತನಾಡದೇ ಇರುವುದು ಎಲ್ಲಾ ಹೊಚ್ಚ ಹೊಸದು. ಕೈಗೆ ಮೊಬೈಲ್ ಬದಲು ಧ್ಯಾನದ ಮುದ್ರೆಗಳು. ಅಂತರಂಗದ ಪಯಣಕೆ ನೆಲದ ಮೇಲೆ ಕುಳಿತು ಇರಲೇಬೇಕು. ಕಾಲ ಎಷ್ಟೊಂದು ಸುದೀರ್ಘ ಮತ್ತು ಉಪಯುಕ್ತ ಎನಿಸಿತು. ಒಂದು ನಿಮಿಷ ಎಂದರೆ ಒಮ್ಮೊಮ್ಮೆ ಒಂದು ದಿನ ಅನಿಸಿದ್ದೂ ಇದೆ.
ಆಂತರಿಕ ಅನುಭವ ಕುರಿತು ಮುಂದೆ ಬರೆಯುವೆ. ಇಂದು ಮೊಬೈಲ್ ಕೊಟ್ಟು ಬೀಳ್ಕೊಟ್ಟರು. ಅಪಾರ ಅಂತರಂಗದ ಅರಿವಿನಿಂದ. ಹೋಗುವಾಗ ಹೇಳದೆ ಹೋಗಿದ್ದು ಅನೇಕರಿಗೆ ಗಾಬರಿ ಹುಟ್ಟಿಸಿದೆ. ಆದರೆ
ಇಂದು ಮೌನ ಅನುಷ್ಠಾನ ಯಶಸ್ವಿಯಾಗಿ ಮುಗಿಸಿದೆ ಎಂಬ ವಿನೂತನ ಸಂತೃಪ್ತಿ!