ಗಂಗಾವತಿ
ಹಿರೇಜಂತಕಲ್ಲನ ಬಸವ ನೀಲಾಂಬಿಕ ಮಹಿಳಾ ಸಂಘದ ವತಿಯಿಂದ ಶನಿವಾರ ಬಸವ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಾಧಿಕಾರಿ ಡಾ. ರಾಜಶೇಖರ ನಾರನಾಳ ಮೋಳಿಗ ಮಾರಯ್ಯರ ಜೀವನ ಮತ್ತು ಅವರ ಒಂದು ವಚನವನ್ನು ನಿರ್ವಚನ ಮಾಡಿ ಮಾತನಾಡುತ್ತಾ,
“ಆನೆ ಕುದುರೆ ಬಂಡಿ ಭಂಡಾರವಿದ್ದಡೇನೂ ?
ತಾನುಂಬುದ ಪಡಿಯಕ್ಕಿ ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಓ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೊ?
ಕೈ ಹಿಡಿದ ಮಡದಿ ಪರರಸಂಗ ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡ ಯಾರಿಲ್ಲ ಕಾಣಾ ನಿಃಕಳಂಕ ಮಲ್ಲಿಕಾರ್ಜುನ “
ಹನ್ನರಡೆನೆಯ ಶತಮಾನದ ಅಂತರರಾಷ್ಟ್ರೀಯ ಮಹಾನಗರವಾಗಿತ್ತು ಕಲ್ಯಾಣ. ಕಲ್ಯಾಣದಲ್ಲಿ ಬಸವಣ್ಣ ಕೈಗೊಂಡ ಹೊಸ ಮನ್ವಂತರದ ವೈಚಾರಿಕ ಕ್ರಾಂತಿ, ಆ ಕಾಲದ ಧಾರ್ಮಿಕ, ಸಾಮಾಜಿಕ, ಸಾಹಿತ್ಯ ರಂಗಗಳಲ್ಲಿನ ಹೊಸ ಮೌಲ್ಯಗಳ ಆ ವಿಚಾರ ವೇದಿಕೆಗೆ ವಿಚಾರವಾದಿಗಳು ವೈಚಾರಿಕ ಪಕ್ಷಿಗಳು ಗರಿ ಬಿಚ್ಚಿ ಹಾರಿ ಬಂದವು. ಕಲ್ಯಾಣದಲ್ಲಿನ ಪರಸ್ಪರ ವಿಚಾರ ಮಂಥನ, ಅನುಭವ ಗೋಷ್ಠಿ, ಕಾಯಕ ದಾಸೋಹಗಳ ಮಹತ್ವ ಲೋಕಕ್ಕೆ ಅಪೂರ್ವವಾದ ಬೆಳಕನ್ನು ಚೆಲ್ಲಿತು. ಇಂತಹ ಕಲ್ಯಾಣಕ್ಕೆ ಕಾಶ್ಮೀರದಿಂದ ಹಾರಿ ಬಂದ ವೈಚಾರಿಕ ಜೋಡು ಹಕ್ಕಿ ಮೋಳಿಗೆ ಮಾರಯ್ಯಾ ಮತ್ತು ಮಹಾದೇವಿ ತಾಯಿ.

ಕಲ್ಯಾಣ 12ನೇಯ ಶತಮಾನದ ಅಂತರರಾಷ್ಟ್ರೀಯ ಮಹಾನಗರ ಎನ್ನುವುದಕ್ಕೆ ಅಂದು ಕಲ್ಯಾಣಕ್ಕೆ ಭಾರತದ ಇತರ ಪ್ರದೇಶಗಳು ಮತ್ತು ಭಾರತ ಬಿಟ್ಟು ಉಳಿದ ದೇಶಗಳ ಸಾಂಸ್ಕೃತಿಕ , ತಾತ್ವಿಕ ಮತ್ತು ವಾಣಿಜ್ಯ ಸಂಭಂದವಿದ್ದದ್ದು ಇತಿಹಾಸದಿಂದ ಚರಿತ್ರೆಯಿಂದ ತಿಳಿದು ಬರುತ್ತದೆ. ಬಳ್ಳಿಗಾವಿ, ಐಹೊಳೆ, ಪಟ್ಟದಕಲ್ಲು ಮತ್ತು ಕಲ್ಯಾಣದ ವೀರಬಣಂಜುಗಳು ದೂರದ ಕಾಶ್ಮೀರ, ನೇಪಾಳ, ಕುರುಂಬ, ಕಾಭೋಜ, ಬರ್ಬರ (ಅಫ್ಘಾನಿಸ್ತಾನ) ಮೊದಲಾದ ದೇಶಗಳಿಗೆ ಜಲಮಾರ್ಗದಿಂದ ವ್ಯಾಪಾರಕ್ಕಾಗಿ ಹೋಗಿ ಬರುತ್ತಿದ್ದರೆಂದು ಶಿಕಾರಿಪುರ ಶಾಸನ, ಅರಸೀಕೇರಿ 210ನೇ ಶಾಸನ, ಹಿರಿಯೂರಿನ 108ನೇ ಶಾಸನ ಮತ್ತು ಬಾಗೇವಾಡಿಯ ಮುತ್ತಿಗೆ ಶಾಸನದಿಂದ ತಿಳಿದು ಬರುತ್ತದೆ.
ಈ ಕಾಲದ ಉತ್ತರ ಶೈವ ಮತ್ತು ನಾಥ ಪಂಥದ ಜೊತೆಗೆ ಕಲ್ಯಾಣದ ಸಾಂಸ್ಕೃತಿಕ ಮತ್ತು ತಾತ್ವಿಕ ಸಂಭಂದವು ಇತ್ತು. ಬಸವಪೂರ್ವಕ್ಕಿಂತ ಮೊದಲು ಅಂದರೆ 10 ನೇ ಶತಮಾನಕ್ಕಿಂತಲೂ ಹಿಂದೆ ರಾಷ್ಟ್ರಕೂಟರ ಕಾಲದಲ್ಲಿ ಮತ್ತು ರಾಷ್ಟ್ರಕೂಟದ ದೊರೆ ಒಂದನೆ ಕೃಷ್ಣನ ಕಾಲದಲ್ಲಿ ಕಾಶ್ಮೀರಿಗಳು ಕರ್ನಾಟಕಕ್ಕೆ ವಲಸೆ ಬರುತ್ತಿದ್ದರೆಂಬ ಪುರಾವೆಗಳು ಲಭ್ಯವಿವೆ. ಕಾಶ್ಮೀರದ ಶೈವ ಬ್ರಾಹ್ಮಣರಾದ “ಸಾವಾಸಿ”ಗಳು ಕರ್ನಾಟಕಕ್ಕೆ ಬಂದು ನೆಲೆಸಿದ್ದರು ಎಂದು ಹಾಸನ ತಾಲೂಕು 19ನೇ ಶಾಸನ ಮತ್ತು ಬೇಲೂರಿನ 117ನೇ ಶಾಸಸದಲ್ಲಿ ಲಭ್ಯವಿದೆ ಎಂದು ಕಪಟರಾಳ ಕೃಷ್ಣರಾಯರು ಅಭಿಪ್ರಾಯಪಡುತ್ತಾರೆ. ಹಾಗೆಯೇ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು ಮೇಲಿನ ಎಲ್ಲಾ ದೇಶಗಳು ಮತ್ತು ಪ್ರದೇಶಗಳೊಂದಿಗೆ ವಾಣಿಜ್ಯ ಸಂಬಂಧ ಇದ್ದದ್ದು ಕಂಡುಬರುತ್ತದೆ.
ಹೀಗೆ ಕಾಶ್ಮೀರದೊಂದಿಗೆ ಶರಣರ ಕಲ್ಯಾಣಕ್ಕೂ ಒಂದು ಮಧುರ ಭಾಂಧವ್ಯ ಇದೆ. ಅಲ್ಲಮ ಪ್ರಭುದೇವರು ದೇಶ ಸಂಚಾರಿಯಾಗಿ ಹಿಮಾಲಯ, ಗುಜರಾತ, ಕಾಶ್ಮೀರ ಸಂಚರಿಸಿ ಕಾಶ್ಮೀರದ ” ಸಾವಾಲಾಕ್ಷ”ದ ಗವಿಯಲ್ಲಿ 12 ವರ್ಷಗಳ ಕಾಲ ಶಿವಯೋಗದಲ್ಲಿ ನಿರತರಾದರೆಂದು ಶೂನ್ಯ ಸಂಪಾದನೆಯಿಂದ ತಿಳಿದು ಬರುತ್ತದೆ. ಬಸವಣ್ಣನವರು ಕಪ್ಪಡಿಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಲೋಕ ಸಂಚಾರಿಯಾಗಿ ಕಾಶ್ಮೀರದವರೆಗೂ ಹೋಗಿ ಅಲ್ಲಿ ಮಾಂಡವ್ಯಪುರದ ಮಹಾದೇವ ಭೂಪಾಲನಲ್ಲಿದ್ದ 6000 ಜಂಗಮರನ್ನು ಬಸವಣ್ಣ ಕಲ್ಯಾಣಕ್ಕೆ ಕರೆತಂದನೆಂದು ಶಂಕರ ಕವಿ ತನ್ನ “ಚೋರಬಸವ ಪುರಾಣದಲ್ಲಿ” ಬರೆದಿದ್ದಾನೆ. ಹೀಗೆ ಕರ್ನಾಟಕದ ಕಲ್ಯಾಣಕ್ಕೂ ಮತ್ತು ಕಾಶ್ಮೀರಕ್ಕೂ ಸಾಂಸ್ಕೃತಿಕ ಮತ್ತು ತಾತ್ವಿಕ ಒಂದು ಮಧುರ ಭಾಂಧವ್ಯವಿದೆ.
ಹೀಗೆ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಸವಾಲಾಕ್ಷದ ಮಾಂಡವ್ಯಪುರ ದೊರೆ ಮಹಾದೇವ ಭೂಪಾಲನೆ ಮೋಳಿಗೆ ಮಾರಯ್ಯ ಮತ್ತು ಅವರ ಪತ್ನಿ ಗಂಗಾದೇವಿಯೆ ಕಲ್ಯಾಣದಲ್ಲಿ ಮಹಾದೇವಿ ತಾಯಿ.
ಇಂದಿಗೂ ಸವಾಲಕ್ಷ ಎಂಬ ಪ್ರದೇಶ ಮತ್ತು ಹೆಸರಿನ ಬಗ್ಗೆ ಸಂಶೋಧನೆಗಳ ಅಗತ್ಯವು ಇದೆ. ಸವಾಲಕ್ಷ ಅಂದರೆ ಒಂದು ಕಾಲೂ ಲಕ್ಷ ಎಂದು ಅರ್ಥ. ಸವಾಲಕ್ಷ ಹಿಮಾಲಯ ಪ್ರರ್ವತಶ್ರೇಣಿಯ ಕೆಳಭಾಗದಲ್ಲಿ ಹಬ್ಬಿರುವ ಕಾಶ್ಮೀರದ ಭಾಗ. ಇಲ್ಲಿ ವಿಶೇಷವಾಗಿ ಮುನಿಗಳು ಯೋಗ ನಿರತರಾಗುವ ಪ್ರದೇಶ ಇಲ್ಲಿ ಅನೇಕ ಗುಹೆಗಳು ಇದ್ದವು. ಈ ಪ್ರರ್ವತ ಶ್ರೇಣಿಯ ಭೂಭಾಗದ ಸಾಮ್ರಾಜ್ಯವೆ ಮಾಂಡವ್ಯಪುರ. ಸಂ.ಶಿ. ಭೂಸುನೂರಮಠ ಅವರು ಬರೆದ ” ಮೋಳಿಗೆ ಮಾರಯ್ಯನ ವಚನಗಳು ” ಎನ್ನುವ ಕೃತಿಯಲ್ಲಿ ಒಂದು ಐತಿಹಾಸಿಕ ಸಂಗತಿಯನ್ನು ಬರೆದಿದ್ದಾರೆ. ಮೊಘಲ ದೊರೆ “ಬಾಬರ” ವಿಷಯಕವಾಗಿ ಬರೆಯಲ್ಪಟ್ಟ ಇತಿಹಾಸವೊಂದರಲ್ಲಿ ಹಿಮಾಲಯದ ದಕ್ಷಿಣದಲ್ಲಿರುವ ಗುಡ್ಡಗಳ ಸಾಲಿಗೆ ‘ ಸವಾಲಾಖ್’ ಎಂಬ ಹೆಸರೊಂದು, ಈ ಭಾಗದಲ್ಲಿ 1ಲಕ್ಷ 25 ಸಾವಿರ ಗುಡ್ಡಗಳಿದ್ದು ಇದನ್ನು ಬಾಬರನೂ ‘ಸವಾಲಕ್ಷ’ ಎಂದು ಹೆಸರಿಟ್ಟ ಎನ್ನುವ ಐತಿಹ್ಯವು ಇದೆ. ಈ ಸವಾಲಕ್ಷದ ಮಾಂಡವ್ಯಪುರ ದೊರೆಯೆ ಈ ಮೋಳಿಗೆ ಮಾರಯ್ಯಾ.
12ನೇ ಶತಮಾನದ ವೈಚಾರಿಕ ಕ್ರಾಂತಿಯ ವಿಚಾರಗಳಿಗೆ ಮನ ಸೋತು ಕಾಶ್ಮೀರದ ಮಹಾದೇವ ಭೂಪಾಲ ಕಲ್ಯಾಣಕ್ಕೆ ಬಂದು ಒಂದು ಗುಡಿಸಲಿನಲ್ಲಿ ವಾಸವಾಗಿದ್ದು, ಕಟ್ಟಿಗೆ ಮಾರುವ ಕಾಯಕ ಅಪ್ಪಿಕೊಂಡ ಮಹಾದೇವ ಭೂಪಾಲ ಮೋಳಿಗೆ ಮಾರಯ್ಯನಾದ. ಮಾರಯ್ಯ ದಿನಾಲು ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರಿ ಅದರಿಂದ ಬಂದ ಆದಾಯದಲ್ಲಿ ” ಹೊಕ್ಕುದು ಹಾರೈಸಿ ಮಿಕ್ಕದ್ದು ಕೈಗೊಂಡು ಸಂತ್ರಪ್ತ ಶರಣ ಬದುಕನ್ನು ಕೈಗೊಂಡಿದ್ದರು. ಕಲ್ಯಾಣದಲ್ಲಿ ನಡೆದ ಕ್ರಾಂತಿಯಿಂದಾಗಿ ಇಡಿ ಶರಣ ಗಣವೆಲ್ಲಾ ಚದುರಿ ಹೋಗಬೇಕಾದ ಅನಿವಾರ್ಯತೆ ಉಂಟಾದಾಗ ಮಾರಯ್ಯ ಎಲ್ಲಿಯೂ ಹೋಗದೆ ಕಲ್ಯಾಣದಿಂದ ಹುಮನಾಬಾದ್ ಕಡೆ ಬಂದು ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ಮೋಳಕೇರಿ ಗ್ರಾಮದಲ್ಲಿ ಐಕ್ಯರಾದರು.

ಮೋಳಿಗೆ ಮಾರಯ್ಯರು ಸುಮಾರು 819 ವಚನಗಳನ್ನು ರಚಿಸಿದರು. ಮಾರಯ್ಯನ ವಚನಗಳು ಪ್ರಮುಖವಾಗಿ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳ ಬಗ್ಗೆ ಸ್ಪಷ್ಟವಾದ ಸಂದೇಶ ನೀಡುವಂತಿವೆ. ಅವರ ವಚನಗಳಲ್ಲಿ ಮುಖ್ಯವಾಗಿ ಕಾಯಕದ ಬಗ್ಗೆ ನಿಷ್ಠೆ ಮತ್ತು ದಾಸೋಹದ ಬಗೆಗಿನ ಮಹತ್ವವನ್ನು ಸಾರುತ್ತವೆ. ಸಂಪತ್ತು ಕೂಡಿಡುವುದರ ಬಗ್ಗೆ ಅತ್ಯಂತ ಕಠೋರ ಮನೋಭಾವ ಹೊಂದಿದ್ದ ಮಾರಯ್ಯ.
ಸಂಗ್ರಹಿಸಿಡುವವರ ಬಗ್ಗೆ ಮಾರ್ಮಿಕವಾಗಿ ಹೇಳಿರುವ ವಚನವೆ
” ಆನೆ ಕುದುರೆ ಬಂಡಿ ಭಂಡಾರವಿದ್ದಡೇನೂ?” ಎಂದು ಪ್ರಶ್ನಿಸುವ ಮಾರಯ್ಯ ಬದುಕಿನ ವಾಸ್ತವವನ್ನು ಬಿಚ್ಚಿ ಇಡುತ್ತಾನೆ. ಮೂಲತ: ದೊರೆಯಾಗಿದ್ದ ಮಾರಯ್ಯ ಈ ಆನೆ ಕುದರಿ ಭಂಡಾರದ ಸುಖ ಸಂಪತ್ತನ್ನು ಅನುಭವಿಸಿದ ಮೇಲೆ ಅವರಿಗೆ ಅನಿಸಿದ್ದು ಸಂಪತ್ತು ಎಷ್ಟಿದ್ದರೇನೂ ಪ್ರಯೋಜನ ಎಂದು ಪ್ರಶ್ನಿಸುತ್ತಾ ” ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ” ಎಂದು ಮನುಷ್ಯ ಊಣ್ಣುವುದು ಒಂದಿಡಿ ಅಕ್ಕಿಯ ಅನ್ನ ಒಂದು ಹಸುವಿನ ಹಾಲು. ಮನೆಯಲ್ಲಿ ಭಾಂಡೆ ತುಂಬಾ ಮೃಷ್ಟಾನ್ನವಿದ್ದರೂ ಊಣ್ಣುವುದು ಹೊಟ್ಟೆಯಿಡಿದಷ್ಟೆ, ಮನೆಯಲ್ಲಿ ಹಾಲಿನ ಹೊಳೆ ಹರಿದರು ಕುಡಿಯುವುದು ಒಂದು ಗ್ಲಾಸ್ ಹಾಲು ಎನ್ನುವ ವೈಜ್ಞಾನಿಕ ಸತ್ಯವನ್ನು ಮಾರ್ಮಿಕವಾಗಿ ಹೇಳಿದ್ದಾರೆ.” ಮಲಗುವುದು ಅರ್ಧ ಮಂಚ ” ಎನ್ನುವುದನ್ನು ತಿಳಿಸುತ್ತಾ , ” ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ” ಎಂದು ಸಂಪತ್ತಿನಿಂದ ಸಂತೃಪ್ತಿ ಸಿಗುವುದಿಲ್ಲ, ನೆಮ್ಮದಿ ಸಿಗುವುದಿಲ್ಲ ಈ ಹುರುಳಿಲ್ಲದ ಸಂಪತ್ತು ನೆಚ್ಚಿ ಕೆಡಬೇಡ ಮಾನವ ಎಂಬ ಏಚ್ಚರಿಕೆಯ ನುಡಿಗಳನ್ನು ಹೇಳುತ್ತಾನೆ ಮಾರಯ್ಯ. “ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪದೊ?” ಎಂದು ಈ ದೇಹ ಸತ್ತ ಮೇಲೆ ಮಣ್ಣಿನಲ್ಲಿ ಸೇರಿ ಹೋಗುತ್ತದೆ. ಜೀವಂತ ಇದ್ದಾಗ ಒಡವೆ, ಬಂಗಾರ ಇದು ಯಾರ ಪಾಲಾಗುತ್ತದೆ ಎಂದು ಪ್ರಶ್ನಿಸುತ್ತಾನೆ.
ಇಷ್ಟಕ್ಕೆ ಸುಮ್ಮನಿರದ ಮಾರಯ್ಯಾ ಬದುಕಿನ ವಾಸ್ತವವನ್ನು ಬಿಚ್ಚಿಡುತ್ತಾ “ಕೈ ಹಿಡಿದ ಮಡದಿ ಪರರ ಸಂಗ , ಪ್ರಾಣ ವಾಯುವಿನ ಸಂಗ ” ಎಂದು ಜೀವನೂದ್ದಕ್ಕೂ ಗಂಡ , ಹೆಂಡತಿ , ಮಕ್ಕಳಿಗೆ ಅಂತ ಗಳಿಸಿಟ್ಟರೂ ಸಾಯುವಾಗ ಮಡದಿ ನಮ್ಮ ಜೊತೆ ಬರಲ್ಲ, ಅವಳು ಇನ್ನೊಬ್ಬರಿಗಾಗಿ ಜೀವಿಸುತ್ತಾಳೆ ಎನ್ನುವ ಕಠೋರ ವಾಸ್ತವವನ್ನು ಬಿಚ್ಚಿಡುತ್ತಾ , ಈ ಪ್ರಾಣ ಸತ್ತ ಮೇಲೆ ವಾಯುವನ್ನು ಕೂಡಿಕೊಳ್ಳುತ್ತದೆ. ” ಸಾವಿಂಗೆ ಸಂಗಡ ಯಾರಿಲ್ಲ ಕಾಣಾ ನಿಃಕಳಂಕ ಮಲ್ಲಿಕಾರ್ಜುನ ” ಎನ್ನುವ ಬದುಕಿನ ಕಠೋರ ಸತ್ಯವನ್ನು ಸಮಾಜಕ್ಕೆ ತಿಳಿಸುತ್ತಾನೆ. ಸಾವಿನ ಜೊತೆ ಯಾರು ಬರಲ್ಲ , ಅದಕ್ಕಾಗಿ ಬದುಕಿನ ಉದ್ದಕ್ಕೂ ನನಗೆ ಬೇಕು, ಮಡದಿ ಮಕ್ಕಳಿಗೆ ಬೇಕು ಎನ್ನುವ ಈ ಸಂಗ್ರಹ ಬುದ್ದಿಯನ್ನು ಬಿಟ್ಟು ಜೀವನಕ್ಕೆ ಎಷ್ಟು ಬೇಕು ಅಷ್ಟು ಮಿಕ್ಕಿದ್ದೆಲ್ಲಾ ಸಮಾಜಕ್ಕೆ ನೀಡುವಂತ ಬದುಕು ಕಟ್ಟಿಕೊಳ್ಳಿರಿ ಎಂದು ಜಂಗಮ ಪ್ರೇಮಿಯಾಗಿ ನಿಲ್ಲುತ್ತಾನೆ ಮೋಳಿಗೆ ಮಾರಾಯ್ಯ. ಎಂದು ಅವರ ಜೀವನ ಕುರಿತು ವಿಸ್ತಾರವಾಗಿ ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಪ್ಪ ಆನೆಗೊಂದಿ, ಮುಖ್ಯ ಅತಿಥಿಗಳಾಗಿ ಮಲ್ಲಯ್ಯಾ ಸ್ವಾಮಿ ಹೀರೆಮಠ, ಗೌರವ ಉಪಸ್ಥಿತಿ ಗೌರಮ್ಮ ಕುಂಬಾರ ವಹಿಸಿಕೊಂಡಿದ್ದರು.
ಇದೇ ಸಂಧರ್ಭದಲ್ಲಿ ಸಿದ್ದನಗೌಡ ದಂಪತಿಗಳನ್ನು ಸನ್ಮಾನಿಸಲಾಯಿತು. ಶ್ರೀಶೈಲ ಪಟ್ಟಣಶೆಟ್ಟಿ ಮತ್ತು ಕೆ. ಬಸವರಾಜ ಉಪಸ್ಥಿತರಿದ್ದರು. ಗಂಗಾವತಿಯ ಎಲ್ಲಾ ಬಸವಪರ ಸಂಘಟನೆಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.