ಬೆಂಗಳೂರು
ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧವಿಧಿಸಿದೆ.
ತಮ್ಮ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಸಾರ, ಪ್ರಕಟಣೆ ಮತ್ತು ಹಂಚಿಕೆ ಮಾಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಸ್ವಾಮೀಜಿ ಅಸಲು ದಾವೆ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು 30ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎನ್ ಆರ್ ಮಧು ಅವರು ಪುರಸ್ಕರಿಸಿದ್ದಾರೆ.
“ಸ್ವಾಮೀಜಿಯ ಹೆಸರು ಉಲ್ಲೇಖಿಸದೇ ಸಂಯುಕ್ತ ಕರ್ನಾಟಕ ಪತ್ರಿಕೆಯು ವರದಿ ಪ್ರಕಟಿಸಿದೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ಆಕ್ಷೇಪಾರ್ಹ ಸುದ್ದಿಯಲ್ಲಿ ಸ್ವಾಮೀಜಿಯವರತ್ತ ಬೆರಳು ಮಾಡಲಾಗಿದೆ. ಈ ದೃಷ್ಟಿಯಿಂದ ಸ್ವಾಮೀಜಿಯವರು ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆಯುವ ಆಧಾರವನ್ನು ಸಾಬೀತುಪಡಿಸಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ದಾವೆಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಗ್ಯಾರಂಟಿ ಸುದ್ದಿ ವಾಹಿನಿ, ಸೌಖ್ಯಾ ಗೋಯಂಕರ್, ವಿಜಯವಾಹಿನಿ ನ್ಯೂಸ್, ಮೆಟಾ ಮತ್ತು ಯೂಟ್ಯೂಬ್‌ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಎಲ್ಲಾ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ನ್ಯಾಯಾಲಯ ಮುಂದೂಡಿದೆ.
ಸ್ವಾಮೀಜಿ ಮತ್ತು ಬೆಂಗಳೂರಿನ ಮಹಿಳೆಯೊಬ್ಬರು ಲೈಂಗೈಕ ಶೋಷಣೆ ಮತ್ತು ಬ್ಲಾಕ್ ಮೇಲ್ ಆರೋಪಗಳ ಕುರಿತಾಗಿ ದೂರು ಮತ್ತು ಪ್ರತಿ ದೂರು ದಾಖಲಿಸಿದ್ದಾರೆ.
