‘ಗುಡಿ–ಗುಂಡಾರಗಳ ಹೆಸರಿನಲ್ಲಿ ಜನರನ್ನು ಭಯಪಡಿಸುವ ಪ್ರವೃತ್ತಿ ಮುಂದುವರಿದಿದೆ’

೫ನೇ ವೈಜ್ಞಾನಿಕ ಸಮ್ಮೇಳನದ ಸಮಗ್ರ ವರದಿ

ಯಾದಗಿರಿ:

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುನ್ನಡೆ ಸಾಧಿಸಿದ್ದರೂ ಸಮಾಜದಲ್ಲಿ ಇನ್ನೂ ಮೂಢನಂಬಿಕೆಗಳು ಆಳವಾಗಿ ಬೇರೂರಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.

ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ ೫ನೇ ವೈಜ್ಞಾನಿಕ ಸಮ್ಮೇಳನದ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಸಚಿವರು ಮಾತನಾಡಿದರು.

ಇಂದು ಗುಡಿ–ಗುಂಡಾರಗಳ ಹೆಸರಿನಲ್ಲಿ ಜನರನ್ನು ಭಯಪಡಿಸಿ, ಬಡವರಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುವ ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ಯಾವುದೇ ದೇವರು ಮನುಷ್ಯನಿಗೆ ಕೆಡುಕನ್ನು ಮಾಡುವುದಿಲ್ಲ; ಮನುಷ್ಯನೇ ಮನುಷ್ಯನಿಗೆ ಕೆಡುಕನ್ನು ಮಾಡುತ್ತಾನೆ, ವೇಗವಾಗಿ ಎಲ್ಲವನ್ನೂ ಮೆಟ್ಟಿನಿಲ್ಲುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿದೆ, ಜನರ ಮನಸನ್ನು ಬೇರೆಕಡೆಗೆ ಸೆಳೆಯುವ ಶಕ್ತಿಗಳನ್ನು ವೈಜ್ಞಾನಿಕ ವಾಗಿ ಮಟ್ಟಹಾಕಬೇಕಾಗಿದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ವೈಜ್ಞಾನಿಕ ಸಮ್ಮೇಳನಗಳನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಸರ್ಕಾರದ ನೆರವಿಲ್ಲದೆ ಇಂತಹ ಅದ್ದೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಅಂಧ ನಂಬಿಕೆಗಳ ಹೋಗಲಾಡಿಸಲು ಪಣ: ಶಾಂತವೀರ ಶ್ರೀ

ಸಮಾರಂಭದ ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಮಠದ ಶ್ರೀ ಶಾಂತವೀರ ಗುರುಮುರುಘಾ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆಗಳೇನು ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ, ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ದುರುಪಾಯಗಳಾಗಿವೆ ಎಂದು ಹೇಳಿದರು.

ಅಂಧ ನಂಬಿಕೆಗಳನ್ನು ಒಂದೇ ಬಾರಿ ಸಂಪೂರ್ಣವಾಗಿ ಅಳಿಸಿ ಹಾಕುವುದು ಕಷ್ಟವಾದರೂ, ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ವೈಜ್ಞಾನಿಕ ಸಮ್ಮೇಳನಗಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ

ಯಾದಗಿರಿಯಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವು ಅರ್ಥಪೂರ್ಣವಾಗಿದೆ. ಮೂಢನಂಬಿಕೆ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ಅವರ ನಾನು ಹಣತೆ ಹಚ್ಚುತ್ತೇನೆ ಎಂದು ಸಂಪೂರ್ಣ ಅಂಧಕಾರವನ್ನು ಅಳಿಸುವ ಭ್ರಮೆಯಿಂದಲ್ಲ, ಇರುವ ತನಕ ನನ್ನ ಮುಖವನ್ನು ನಾನು ನೋಡುತ್ತೇನೆ ಎಂಬ ನಂಬಿಕೆಯಿಂದ ಎಂಬ ವಾಕ್ಯವನ್ನು ಸ್ಮರಿಸಿದ ಶ್ರೀಗಳು, ವೈಜ್ಞಾನಿಕ ಚಿಂತನೆ ಎಂಬುದು ಬೆಳಕು ಹಚ್ಚುವ ಪ್ರಯತ್ನವೇ ಹೊರತು ಅಂಧಕಾರದ ವಿರುದ್ಧದ ಹೋರಾಟ ಮಾತ್ರವಲ್ಲ ಎಂದು ತಿಳಿಸಿದರು.

ಡಾ. ಹುಲಿಕಲ್ ನಟರಾಜ್ ಅವರ ೬ ಸಂಪುಟಗಳ ಬಿಡುಗಡೆ

:

ರಾಜ್ಯದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆಸುತ್ತಿರುವ ವೈಜ್ಞಾನಿಕ ಸಮ್ಮೇಳನಗಳಿಗೆ ಬಜೆಟ್ ನಲ್ಲಿ ಅಗತ್ಯ ಅನುದಾನ ದೊರಕಿಸಲು ಮುಖ್ಯಮಂತ್ರಿಯವರಲ್ಲಿ ಪ್ರಯತ್ನಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.

ಯಾದಗಿರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ೫ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಖ್ಯಾತ ವಿಚಾರವಾದಿ ಡಾ. ಹುಲಿಕಲ್ ನಟರಾಜ್ ಅವರ ಆರು ಸಂಪುಟಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಚಿವರು, ರಾಜ್ಯದ ವಿವಿಧೆಡೆ ಈಗಾಗಲೇ ೪ ವೈಜ್ಞಾನಿಕ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು, ಈಗ ಯಾದಗಿರಿಯ ಸಮ್ಮೇಳನವೂ ನಮ್ಮ ನಡೆ-ವಿಜ್ಞಾನ ಕಡೆ ಧ್ಯೇಯವಾಕ್ಯದಡಿ ನಡೆಯುತ್ತಿದೆ ಎಂದರು.

ಕಂದಚಾರಗಳನ್ನು ಜನರೇ ಪ್ರಶ್ನಿಸಬೇಕು ೧೨ನೇ ಶತಮಾತನದ ಬಸವಣ್ಣವರ ಹೋರಾಟ, ಬುದ್ಧನ ತತ್ತ್ವಗಳು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಹೋರಾಟ ಒಂದೇ ದಾರಿಯ ಹೋರಾಟಗಳಾಗಿವೆ. ಇಂದು ವಿಚಾರವಾದಿ ಹುಲಿಕಲ್ ನಟರಾಜ್ ಅವರ ಮೌಡ್ಯದ ವಿರುದ್ಧದ ಹೋರಾಟ ಅದೇ ದಾರಿಯಲ್ಲಿ ಸಾಗುತ್ತಿದೆ. ಹಾಲು ಸುರಿಸುವುದು, ದೀಪ ಹಚ್ಚುವುದು, ರಕ್ತ ಹರಿಸುವಂತೆ ತೋರಿಸುವ ಮೋಸಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪ್ರಶ್ನಿಸಬೇಕು ಎಂದು ಹೇಳಿದರು.

ವೈಜ್ಞಾನಿಕ ಸಮ್ಮೇಳನ, ವೈಚಾರಿಕ ಗೋಷ್ಠಿಗಳು ವಿಶೇಷವಾಗಿ ಶಾಲಾ ಮಕ್ಕಳಿಗೆ ಗಮನಹರಿಸಬೇಕಾಗಿದೆ. ಈ ಮಕ್ಕಳು ದೇಶದ ನಾಳಿನ ದೊಡ್ಡ ಆಸ್ತಿಗಳು. ಇವರಿಗೆ ಮೊದಲು ಜಾಗೃತಿ ಮೂಡಿಸಿದರೆ, ಕುಟುಂಬ, ನಂತರ ಸಮಾಜ ಬದಲಾವಣೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ, ವೈಜ್ಞಾನಿಕತೆಗೆ  ಸಂಬಂಧಿಸಿದ ಕಾರ್ಯಕ್ರಮಗಳು, ಸಮ್ಮೇಳನಗಳು ಎಲ್ಲಾ ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ನಡೆಯಬೇಕೆನ್ನುವುದು ಆಶಯವಾಗಿದೆ ಎಂದು ಹೇಳಿದರು. 

ಬೆಳಗಾವಿಯಲ್ಲಿ ಮುಂದಿನ ವೈಜ್ಞಾನಿಕ ಸಮ್ಮೇಳನಕ್ಕೆ ಮನವಿ

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಂತಹ ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿವೆ. ಲಿಂಗಸಗೂರಿನಲ್ಲಿ ನಡೆದಂತಹ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದು, ಮುಂದಿನ ವೈಜ್ಞಾನಿಕ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಬೇಕೆನ್ನುವುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ಪರಿಷತ್ತಿನ ಸಂಸ್ಥಾಪಕರಾದ ಡಾ. ಹುಲಿಕಲ್ ನಟರಾಜ್‌ರವರು ಒಪ್ಪಬೇಕು. ಸಮ್ಮೇಳನಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವರು ಇದೇ ವೇಳೆ ಹೇಳಿದರು.

ಕಲ್ಯಾಣ ಕರ್ನಾಟಕ ಮೌಢ್ಯತೆಯಿಂದ ಮುಕ್ತವಾಗಲಿ;

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೌಢ್ಯತೆ, ಅಂಧನಂಬಿಕೆ, ಜಾತಿ, ತಾರತಮ್ಯಗಳ ಅಂಧಕಾರ ಇನ್ನೂ ಆವರಿಸಿಕೊಂಡಿದ್ದು; ಇವೆಲ್ಲವೂ ದೂರವಾಗುವವರೆಗೂ ಬೆಳವಣಿಗೆ ಅಸಾಧ್ಯ ಎಂದು ಯಾದಗಿರಿಯ ೫ನೇ ವೈಜ್ಞಾನಿಕ ಸಮ್ಮೇಳನಾಧ್ಯಕ್ಷ, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆಯುತ್ತಿರುವ ೫ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿಗಳನ್ನಾಡಿದ ಅವರು, ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೂ, ಜನರು ಮಾತ್ರ ಇನ್ನೂ ಕಂದಚಾರಗಳಿಂದ ಮುಕ್ತಗೊಂಡಿಲ್ಲ ಎಂದರು. 

೨೧ನೇ ಶತಮಾನದಲ್ಲಿ ಇಸ್ರೋ, ಡಿಆರ್‌ಡಿಒ ಮುಂತಾದ ವೈಜ್ಞಾನಿಕ ಸಾಧನೆಗಳು ಮನೆ ಬಾಗಿಲುಗಳಿಗೆ ಬಂದಿದ್ದರೂ ನಮ್ಮ ಮನಸ್ಸು ಮಾತ್ರ ಮೌಢ್ಯತೆಯಲ್ಲಿ ಕೊಳೆಯುತ್ತಿದೆ. ಯಾರಾದರೂ ಆಶೀರ್ವಾದದಿಂದ ಅಥವಾ ಪವಾಡದಿಂದ ಸಮಸ್ಯೆಗಳು ಪರಿಹಾರ ಆಗುತ್ತವೇ ಎಂದರೆ ಅದು ಬರೀ ಭ್ರಮೆ. ಇದರಿಂದ ಜನರು ಹೊರಬರಬೇಕು ಎಂದು ಹೇಳಿದರು.

ಯಾವುದೇ ನಂಬಿಕೆಗಳು, ಪವಾಡಗಳು ನಮ್ಮನ್ನೆಂದು ಉದ್ದಾರ ಮಾಡುವುದಿಲ್ಲ. ನಮ್ಮ ಕಣ್ಣಿನೊಳಗಿನ ಕಟ್ಟಿಗೆಯನ್ನು ನಾವೇ ಮುರಿಯಬೇಕು, ಕಾಲಿನೊಳಗಿನ ಮುಳ್ಳನ್ನು ನಾವೇ ತೆಗೆಯಬೇಕು. ಬಾಯಾರಿದರೆ ನೀರನ್ನು ನಾವೇ ಕುಡಿಯಬೇಕು. ನಮ್ಮ ಬದುಕಿನ ಹೊಣೆಗಾರಿಕೆಯನ್ನು ಬೇರೆ ಯಾರ ಮೇಲೂ ಹಾಕಬಾರದು. ವೈಚಾರಿಕತೆ ಬೆಳೆಯುತ್ತಿದೆ, ವಿಜ್ಞಾನ ಮುಂದುವರೆಯುತ್ತಿದೆ  ಜನರು ಆ ದಿಕ್ಕಿನಲ್ಲಿ ಸಾಗಬೇಕು ಎಂದರು.

ಬಸವಣ್ಣವರ ವಚನಗಳನ್ನು ಉಲ್ಲೇಖಿಸಿದ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು, ೧೨ನೇ ಶತಮಾನದಲ್ಲೇ ಜಾತಿ ರೋಗವನ್ನು ಪ್ರಶ್ನಿಸಿದರೂ ಇಂದಿಗೂ ಅದು ನಮ್ಮನ್ನು ಬಿಟ್ಟಿಲ್ಲ. ವಾರ, ತಿಥಿ, ಕುಲ, ಜಾತಿಗಳ ಭ್ರಮೆಯಲ್ಲಿ ನಾವು ಬದುಕುತ್ತಿರುವುದು ಕಲ್ಯಾಣ ಕರ್ನಾಟಕದ ಅತಿ ದೊಡ್ಡ ದುರಂತ ಎಂದು ಹೇಳಿದರು.

ಪವಾಡಗಳಿಂದ ಮಳೆ, ಬೆಳೆ ಬರಲು ಸಾಧ್ಯವೇ?

ಪವಾಡ ಪುರುಷರು, ತಪಸ್ಸಿನಿಂದ ಮಳೆ ಬರುತ್ತದೆ ಎನ್ನುವ ನಂಬಿಕೆಗಳ ವಿರುದ್ಧ ಕಿಡಿಕಾರಿದ ಅವರು, ಮಳೆ ಮತ್ತು ಬೆಳೆ ಬರಲು ಮಂತ್ರ–ತಪಸ್ಸು ಕಾರಣವಲ್ಲ. ಪರಿಸರ ಸಂರಕ್ಷಣೆ, ಗಿಡಮರ ಬೆಳೆಸುವುದು, ನೀರನ್ನು ಉಳಿಸುವುದೇ ವೈಜ್ಞಾನಿಕ ಪರಿಹಾರ ಎಂದರು.

ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಶ್ರೇಷ್ಠ ಎಂದು ಅಭಿಪ್ರಾಯಪಟ್ಟ ಅವರು, ದಯವೇ ಧರ್ಮದ ಮೂಲವಾಗಬೇಕಾದರೆ ಇಂದು ಭಯವೇ ಧರ್ಮದ ಮೂಲವಾಗುತ್ತಿದೆ. ಇದರಿಂದ ಸಮಾಜದಲ್ಲಿ ದ್ವೇಷ, ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿದರು.

ಸಂವಿಧಾನದ ಮಹತ್ವವನ್ನು ಒತ್ತಿ ಹೇಳಿದ ಅವರು, ಎಲ್ಲ ಧರ್ಮಗಳಿಗಿಂತ ಶ್ರೇಷ್ಠ ಗ್ರಂಥವೆಂದರೆ ಸಂವಿಧಾನ. ಆದರೆ ಅದರ ಮೌಲ್ಯಗಳನ್ನು ಕ್ರಮೇಣ ದುರ್ಬಲಗೊಳಿಸಲಾಗುತ್ತಿದೆ. ಇದನ್ನು ಪ್ರಶ್ನಿಸದೇ ಹೋದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಜ್ಯೋತಿಬಾ ಪುಲೆ, ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಓದಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ ಅವರು, ನಮ್ಮ ಬಡತನಕ್ಕೂ, ನಮ್ಮ ಭವಿಷ್ಯಕ್ಕೂ ನಾವು ತಾನೆ ಕಾರಣ. ಹಣೆಬರಹವನ್ನು ದೇವರು ಅಥವಾ ಸ್ವಾಮೀಜಿಗಳು ಬರೆಯುವುದಿಲ್ಲ, ನಾವು ನಾವೇ ಬರೆಯಬೇಕು ಎಂದು ಹೇಳಿದರು.

ವಿಚಾರ, ವಿಜ್ಞಾನ ಹಾಗೂ ಮಾನವೀಯತೆಯೇ ಸಮಾಜವನ್ನು ಅಂಧಕಾರದಿಂದ ಬೆಳಕಿನ ಕಡೆಗೆ ಕರೆದೊಯ್ಯಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮದು ರೈತಪರ ಜೀವನ. ದಿನೇ ದಿನೇ ಕೃಷಿ ಮಾಡುವವನು ಕಳಾಹೀನಾನಾಗುತ್ತಿದ್ದಾನೆ. ಆತನ ಮೇಲಿನ ಶೋಷಣೆಗೆ ಎಣೆಯೆಂಬುದೇ ಇಲ್ಲ. ರೈತ ಬೆಳೆದ ಬೆಳೆಗೆ ಯೋಗ್ಯ ಧಾರಣೆ ಇಂದಿಗೂ ಇಲ್ಲ. ತಾನು ಬೆಳೆದ ಉತ್ಪನ್ನ ತಾನು ಬೆಳೆ ನಿಗದಿ ಮಾಡಲು ಆಗುತ್ತಿಲ್ಲ. ಎಲ್ಲರೂ ರೈತರನ್ನು ಶೋಷಿಸುವವರೆ. ರೈತರ ಬದುಕು ಹಸನಾಗಿಸಲು ಎಲ್ಲ ಪ್ರಯತ್ನಗಳು ಆಗಬೇಕು. ರೈತರು ಕೂಡ ವೈಜ್ಞಾನಿಕತೆಯತ್ತ ಮುಖ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಗಿರಿ ಸ್ಮರಣ ಸಂಚಿಕೆಯನ್ನು ಖ್ಯಾತ ವಿಜ್ಞಾನಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮಹಾಪೋಷಕರಾದ ಡಾ.ಎಸ್. ಕಿರಣಕುಮಾರ್ ಬಿಡುಗಡೆ ಮಾಡಿದರು. ೨೦೨೬ರ ಕ್ಯಾಲೆಂಡರ್‌ನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ೨೦೨೬ರ ದಿನಚರಿಯನ್ನು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ  ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ವಿಜ್ಞಾನ ವಸ್ತುಪ್ರದರ್ಶನದ ಉದ್ಘಾಟನೆಯನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೆರವೇರಿಸಿದರು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮತ್ತಿತರರು ಉಪಸ್ಥಿತರಿದ್ದರು.

ಜೀವಮಾನ ಸಾಧನಾ ಪ್ರಶಸ್ತಿ

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪಾಂಡವಪುರದ ಪುಸ್ತಕ ಮನೆಯ ಅಂಕೇಗೌಡ, ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಕೆ.ಎಸ್. ರಾಜಣ್ಣ, ರಾಷ್ಟ್ರಪ್ರಶಸ್ತಿ ವಿಜೇತ ಡಾ. ನಂದೀಶ್ ಮತ್ತು ಕೆಎಸ್ ಎಸ್ ಐಡಿಸಿ ಮಾಜಿ ನಿರ್ದೇಶಕ ಎಸ್.ಸಿ. ಪಾಟೀಲ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇದೇ ವೇಳೆ, ವಿವಿಧ ಸಾಧಕರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಸಂಘಟನೆ ಕ್ಷೇತ್ರದಲ್ಲಿ ದಾನಿ ಬಾಬುರಾವ, ಸಿ. ಶಿವಲಿಂಗಯ್ಯ, ಪುಷ್ಪಲತಾ ಪುಟ್ಟಸ್ವಾಮಿ, ಮಹಾದೇವ ಎನ್. ಮೋಕ್ಷಗುಂಡಂ, ಶಾಂತಗೌಡ, ಸಾಹಿತ್ಯ ವಿ.ಟಿ.ಸ್ವಾಮಿ, ವೈಜ್ಞಾನಿಕತೆ ಎ.ಎಸ್. ಗೋಪಾಲಕೃಷ್ಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಆರ್.ಎಚ್. ಎಂ. ಚನ್ನಬಸವಸ್ವಾಮಿ ಅವರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ, ಖ್ಯಾತ ವಿಚಾರವಾದಿ ಡಾ. ಹುಲಿಕಲ್ ನಟರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಡಾ. ಆಂಜನಪ್ಪ ಮಾತನಾಡಿ, ಆರೋಗ್ಯ ಬಗ್ಗೆ ಮಾಹಿತಿ ನೀಡಿದರು.

ಪ್ರತಿಷ್ಠಿತ ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಗುರುಮಠಕಲ್ ನ ಶ್ರೀ ಶಾಂತವೀರಗುರು ಮುರುಘಾರಾಜೇಂದ್ರ ಸ್ವಾಮೀಜಿ ಮತ್ತು ಚಿಗರಹಳ್ಳಿಯ ಮಠದ ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಪುರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಹಿರಿಯ ಕಾಂಗ್ರೆಸ್ ಮುಖಂಡ ಎ.ಸಿ. ಕಾಡ್ಲೂರು, ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ್, ಮುಖಂಡ ಹನುಮೇಗೌಡ ಬೀರನಕಲ್ಲು, ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಮಾಜಿ ಅಧ್ಯಕ್ಷ ಬಸವರಾಜಪ್ಪ ಜೈನ್, ಮುಖಂಡರಾದ ಸುದರ್ಶನ ನಾಯಕ, ಡಾ. ಶಫಿ ತುನ್ನೂರು, ಹನುಮೇಗೌಡ ಮರಕಲ್ ಮಾನವ ಬಂಧುತ್ವ ವೇದಿಕೆಯ ಸಂತೋಷ್, ಸುನೀಲ್ ಮನ್ಪಾಡೆ, ನಿಂಗಪ್ಪ, ಯಾದಗಿರಿಯ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಡಿಡಿಪಿಐ ಚನ್ನಬಸಪ್ಪ ಮುಧೋಳ್, ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *