ಚಿತ್ರದುರ್ಗ
ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ‍್ಯವಿರದ, ವೇದಾಧ್ಯಯನಕ್ಕೆ ಅವಕಾಶವಿರದ, ಆಧ್ಯಾತ್ಮ ಹೆಣ್ಣುಮಕ್ಕಳಿಗಲ್ಲ ಎಂದು ಮಡಿ ಮೈಲಿಗೆಗಳಿಂದ ಅನೇಕ ಕಟ್ಟುಪಾಡುಗಳಿಂದ ದೂರವಿಟ್ಟ ಸಂದರ್ಭದಲ್ಲಿ ಅವುಗಳಿಂದ ಮುಕ್ತಗೊಳಿಸಿದ ಕೀರ್ತಿ ೧೨ನೇ ಶತಮಾನದ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ.
ಅದರೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ‍್ಯ ಅನುಭವ ಮಂಟಪದಿಂದ ಸಮಾನ ಅವಕಾಶ ದೊರಕಿ ಎಲ್ಲ ವರ್ಗದ ನೂರಾರು ಮಹಿಳೆಯರು ಅಂದು ಅನುಭವ ಮಂಟಪದಲ್ಲಿ ಭಾಗವಹಿಸಿದ್ದು ಅದರ ಮುಂದುವರಿದ ಭಾಗ ಎನ್ನುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ತ್ರೀಯರಿಗೂ ಸಮಾನ ಅವಕಾಶ ಸಿಕ್ಕಿರುವುದು ೧೨ನೇ ಶತಮಾನದ ಕೊಡುಗೆ ಎಂದರೆ ತಪ್ಪಿಲ್ಲ ಎಂದು ಮುರುಘಾ ಮಠದ ಸಾಧಕ ಶ್ರೀಗಳಾದ ಬಸವಮುರುಘೇಂದ್ರ ಸ್ವಾಮೀಜಿ ಅವರು ತಮ್ಮ ಅನುಭವ ಹಂಚಿಕೊಂಡರು.
ಅವರು ಶನಿವಾರ ಶುರುವಾದ ೧೨ನೇ ಶತಮಾನದ ಶಿವಶರಣೆಯರ ಜೀವನದರ್ಶನ ಕುರಿತಾದ ೨೨ನೇ ದಿನಗಳ ಕಾರ್ಯಕ್ರಮದಲ್ಲಿ ಶರಣೆಯರಾದ ಮುಕ್ತಾಯಕ್ತ ಹಾಗೂ ಅಮುಗೆ ರಾಯಮ್ಮ ಅವರ ಬಗೆಗೆ ಮಾತನಾಡುತ್ತ, ಮುಕ್ತಾಯಕ್ಕನ ದೃಷ್ಟಿಯಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮತ್ತು ಮಂತ್ರಗಳಿಗೆ ಧರಣಿಯ ಮೇಲಿರುವ ಎಲ್ಲ ಸಂಪತ್ತಿಗೆ ಸಮ ಬಾರದು ಎಂಬುದು ಆಕೆಯ ವಾದ. ಅರಿವು ಅನುಭಾವವನ್ನು ಗುರುಹಿರಿಯರಿಂದ ಪಡೆದುಕೊಳ್ಳಬೇಕೆಂದು ತಿಳಿಸುತ್ತಾಳೆ.
ಜಂಗಮ ದಾಸೋಹದ ಜತೆಗೆ ತಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಭಾವಿಪ್ರಜೆಗಳನ್ನಾಗಿಸುವುದು ಪೋಷಕರ ಕರ್ತವ್ಯ ಎಂದು ಆಕೆಯ ವಚನಗಳಲ್ಲಿ ವ್ಯಕ್ತವಾಗುತ್ತದೆ.
ಅಮುಗೆ ರಾಯಮ್ಮ ಮತ್ತು ಆಕೆಯ ಪತಿ ದೇವಯ್ಯ ಸತಿ ಪತಿಗಳು ಮಹಾರಾಷ್ಟ್ರ ಮೂಲದವರು. ಕಲ್ಯಾಣದ ಕಡೆಗೆ ಹೋಗುತ್ತಿರುವಾಗ ಸಿದ್ಧರಾಮರ ನಡುವೆ ಸಂವಾದ ಏರ್ಪಟ್ಟು ಭೌತಿಕ ಕಟ್ಟಡಗಳ ನಿರ್ವಹಣೆಯಲ್ಲಿದ್ದ ಸಿದ್ಧರಾಮರಿಗೆ ಭವಿ-ಭಕ್ತರ ನಡುವಿನ ವ್ಯತ್ಯಾಸ ತಿಳಿಸುತ್ತಾರೆ. ರಾಯಮ್ಮಳು ಅನೇಕ ವಚನಗಳನ್ನು ರಚಿಸಿದ್ದು ಅವುಗಳಲ್ಲಿ ಸಾಮಾಜಿಕ ನ್ಯಾಯದ ಕುರಿತಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಶ್ರೀಮತಿ ಮಂಜುಳಾ ಆರ್. ಅವರು ಮುಕ್ತಾಯಕ್ಕ ಅವರ ಬಗೆಗೆ ಮಾತನಾಡುತ್ತ ಅಜಗಣ್ಣನ ಸಹೋದರಿಯಾದ ಈಕೆ ಇಬ್ಬರದು ಅನನ್ಯ ಭ್ರಾತೃತ್ವಪ್ರೇಮ. ಮುಕ್ತಾಯಕ್ಕನವರ ಆಧ್ಯಾತ್ಮಗುರು ಎಂದೇ ಎಲ್ಲವೂ ಅಣ್ಣನೇ ಆಗಿದ್ದು, ಈಗಾಗಿ ಧಾರ್ಮಿಕ ಆಸಕ್ತಿ ಮೂಡಿ ಮುಕ್ತಾಯಕ್ಕ ಕಲ್ಯಾಣದ ಕಡೆಗೆ ಹೋಗಿ ಅಲ್ಲಿನ ಅನುಭವ ಮಂಟಪದಲ್ಲಿ ಸೇರಿಕೊಂಡು ವಿಶಾಲಭಾವ, ದಿವ್ಯವ್ಯಕ್ತಿತ್ವ, ಸ್ವಾತಂತ್ರ‍್ಯ ಪ್ರವೃತ್ತಿ, ವೈಚಾರಿಕ ನಿಲುವು, ತಾತ್ವಿಕ ಜ್ಞಾನ ಹೀಗೆ ಮಾನವೀಯತೆಯ ವಿಕಾಸಗೊಳ್ಳುತ್ತ ಪಕ್ವವಾಗಿ ರೂಪುಗೊಂಡು ಶರಣತಿಂಥಿಣಿಯಲ್ಲಿ ಮಿನುಗುತ್ತಾರೆಂದು ವಿವರಿಸಿದರು.
ಹಾಗೆಯೇ ಎಸ್.ಜೆ.ಎಂ. ಪಾಲಿಟೆಕ್ನಿಕ್ ಸಿವಿಲ್ ವಿಭಾಗದ ಉಪನ್ಯಾಸಕಿ ಲತಾ ಅವರು ಅಮುಗೆ ರಾಯಮ್ಮ ಅವರನ್ನು ಕುರಿತು ವಿಷಯಾವಲೋಕನ ಮಾಡುತ್ತ, ರಾಯಮ್ಮನವರು ಅಮುಗೇಶ್ವರ ಎನ್ನುವ ಅಂಕಿತದಲ್ಲಿ ೧೧೬ ವಚನಗಳನ್ನು ರಚಿಸಿದ್ದಾರೆ. ಸತಿ ಪತಿ ಒಂದಾಗಿ ತಮ್ಮ ಕಾರ್ಯ ಮಾಡುತ್ತ ಬಸವಾದಿ ಶಿವಶರಣರ ಸಂಗದಿಂದ ಶಿವಾನುಭವ ಸಂಪನ್ನೆಯಾಗಿ ರೂಪುಗೊಂಡು ಜ್ಞಾನವಂತೆಯಾಗಿ ಕಂಗೊಳಿಸುತ್ತಾರೆ. ಸಾಧಕರ ಹಾದಿ ಅಷ್ಟೇನು ಸುಲಭವಲ್ಲ ಎಂದು ಮನಗಂಡ ಆಕೆ ದೇಹದ ದೌರ್ಬಲ್ಯ ಮನಸ್ಸನ್ನು ವಿಕಾರಗೊಳಿಸುತ್ತವೆ. ಹಾಗಾಗಿ ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಸಾಧಕನಾದವನು ನಿರಂತರ ಆಧ್ಯಾತ್ಮದ ಮೊರೆ ಹೋಗಬೇಕೆಂಬುದು ಆಕೆಯ ಆಶಯ. ಇಂತಹ ನಿಲುವುಗಳ ಬಗೆಗೆ ಅನೇಕ ವಚನಗಳು ಒಡಮೂಡಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಗುರುಮಠಕಲ್‌ನ ಶ್ರೀ ಶಾಂತವೀರಗುರುಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಇಂದಿನ ಸೇವಾಕರ್ತರಾದ ಚಂದ್ರವಳ್ಳಿ ಎಸ್.ಜೆ.ಎಂ. ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹಾಗೂ ಸಿಬ್ಬಂದಿವರ್ಗ, ಎಸ್.ಜೆ.ಎಂ. ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಎಸ್.ವಿ. ರವಿಶಂಕರ್ ಹಾಗೂ ಸಿಬ್ಬಂದಿ ವರ್ಗ, ಬಸವೇಶ್ವರ ವೈದ್ಯಕೀಯ ವಿದ್ಯಾರ್ಥಿ ನಿಲಯದವರು, ಹಾಗೂ ಎಂ.ಕೆ.ಹಟ್ಟಿಯ ಪ್ರಕಾಶ್ ಕುಟುಂಬದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸಮಾಜದವರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲನೌಕರರು ಭಾಗವಹಿಸಿದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ರಾಯಮ್ಮ, ಮುಕ್ತಾಯಕ್ಕ ಅವರು ರಚಿಸಿರುವ ವಚನಗಳನ್ನು ಹಾಡಿದರು. ಸಾಧಕರಾದ ದರ್ಶನ್ ದೇವರು ಸ್ವಾಗತಿಸಿದರು. ಗಂಗಾಧರ ದೇವರು ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.