ಮುಂಡರಗಿ
ಅನೇಕರು ಕೈಲಾಸದಲ್ಲಿ ದೇವರಿದ್ದಾನೆ, ಪರಂಧಾಮದಲ್ಲಿ ದೇವರಿದ್ದಾನೆ, ದೇವರು ಸರ್ವವ್ಯಾಪಿಯಾಗಿದ್ದಾನೆ ಎನ್ನುತ್ತಾರೆ. ಆದರೆ ಮನುಷ್ಯರ ಪ್ರೇಮದಲ್ಲಿ, ಮನುಷ್ಯತ್ವದಲ್ಲಿ ದೇವರಿದ್ದಾನೆ ಎಂದು ತಿಳಿಸಿಕೊಟ್ಟವರು ಬಸವಣ್ಣನವರು ಎಂದು ತೋಂಟದಾರ್ಯ ಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ, 15 ದಿನಗಳ ಪರ್ಯಂತ ಆಯೋಜಿಸಲಾಗಿರುವ ‘ಶರಣ ಚರಿತಾಮೃತ ಪ್ರವಚನ’ದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಇತ್ತೀಚೆಗೆ ಮಾತನಾಡಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಎಲ್ಲರೂ ಜಾತಿ ವ್ಯವಸ್ಥೆಯಿಂದ ಹೊರ ಬರಬೇಕೆಂದು 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದರು. ಎಷ್ಟೇ ಕಷ್ಟ, ನಿಂದನೆಗಳು ಬಂದರೂ ತಮ್ಮ ತತ್ವಾದರ್ಶ ಬಸವಣ್ಣ ಎಂದಿಗೂ ಬಿಡಲಿಲ್ಲ ಎಂದರು.
ಪ್ರವಚನಕಾರರಾಗಿರುವ ಅತ್ತಿವೇರಿ ಬಸವೇಶ್ವರ ಮಾತಾಜಿ ಪ್ರವಚನ ಆರಂಭಿಸಿ, 12ನೇ ಶತಮಾನದ ಶರಣರ ಯುಗವೆಂದರೆ ಅದು ಸುವರ್ಣ ಯುಗ. ಜಗತ್ತಿನಲ್ಲಿ ಜಾತಿ ವ್ಯವಸ್ಥೆ ಇಲ್ಲದಂತೆ ಮಾಡಲು ಪ್ರಯತ್ನಿಸಿದವರು ಬಸವಾದಿ ಶರಣರು. ಬಸವಣ್ಣ ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವ ಉಳ್ಳವರಾಗಿದ್ದರು. ಪ್ರಜಾಸತ್ತೆಯ ಮಾದರಿಯಲ್ಲಿ ಬಸವಧರ್ಮ ಹುಟ್ಟಿದೆ ಎಂದರು.

ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಡಾ. ವೀರೇಶ್ ಹಂಚಿನಾಳ್ ಹಾಗೂ ಕಪ್ಪತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಳಮನಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ಡಿ.ಡಿ. ಮೊರನಾಳ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು.

ಪ್ರವಚನ ಸಮಿತಿಯ ಅಧ್ಯಕ್ಷ ಬಸಯ್ಯ ಗಿಂಡಿಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್. ಎಸ್. ಪಾಟೀಲ, ಶಿವಯೋಗಿ ಗಡ್ಡದ, ಎಚ್. ವಿರೂಪಾಕ್ಷಗೌಡ, ಈಶಣ್ಣ ಬೆಟೆಗೇರಿ, ಶಿವಕುಮಾರ ಬೆಟಗೇರಿ, ಸದಾಶಿವಯ್ಯ ಕಬ್ಬೂರಮಠ, ಪಾಲಾಕ್ಷಿ ಗಣದಿನ್ನಿ, ಪವನ್ ಚೋಪ್ರಾ, ಹೇಮಗಿರೀಶ ಹಾವಿನಾಳ, ವೀರಪ್ಪ ಮಡಿವಾಳರ, ಎನ್.ಎ. ಗೌಡರ, ಬಿ.ವಿ. ಮುದ್ದಿ, ಅಶೋಕ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತ, ವಿಶ್ವನಾಥ ಉಳ್ಳಾಗಡ್ಡಿ ನಿರೂಪಣೆ ಮಾಡಿದರು.