ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ – ದಿನ – ೦೧
ಶರಣ ಐ.ಆರ್.ಮಠಪತಿ
ಶರಣ ವಿಚಾರವಾಹಿನಿ, ಹಾರೋಗೇರಿ
12ನೇ ಶತಮಾನದ ಪೂರ್ವದಲ್ಲಿ ಜನರ ಸ್ಥಿತಿಗತಿ ಅವಲೋಕನ ಮಾಡಿದಾಗ ಅಂದು ಗುಲಾಮಗಿರಿ ,ಚಾತುರ್ವಣಗಳೆಂಬ ಕರಾಳ ಚರಣೆಗಳಿದ್ದವು. ಜನ ಜಾತಿ,ಬೇಧ-ಭಾವಗಳ ಸುಳಿಯಲ್ಲಿ ಸಿಕ್ಕು ನಲುಗುತ್ತಿದ್ದ ಕಾಲವದು,ಅಂತಹ ಕಾಲಘಟ್ಟದಲ್ಲಿ ಬಸವಣ್ಣನವರು ಸೂರ್ಯನಂತೆ ಉದಯಿಸಿ ಬಂದು, ಇವನ್ಯಾರವ ಇವನ್ಯಾರವ ಎಂದೆನಿಸದೇ ಇವ ನಮ್ಮವ,ಇವ ನಮ್ಮವ ಎಂದೆನಿಸಯ್ಯ ಎಂದು ಹೇಳಿ ಜಾತೀಯತೆ,ಅಸಮಾನತೆಗಳ ವಿರುದ್ದ ಪ್ರಬಲ ಧ್ವನಿ ಎತ್ತಿದರು.ಅಂದಿನ ದೀನ-ದಲಿತರನ್ನೊಳಗೊಂಡು ಎಲ್ಲರನ್ನೂ ಅಪ್ಪಿಕೊಂಡರು.
ದೇವರು ಕುರಿತು, ಏಕದೇವೋಪಾಸನೆಯ ಬಗ್ಗೆ ಮೊಟ್ಟ ಮೊದಲ ಬಾರಿಗೆ ತಿಳಿಸಿಕೊಟ್ಟರು.ಇದಲ್ಲದೇ ಸಾಂಸ್ಕ್ರತಿಕವಾಗಿ ಕನ್ನಡ ಸಾಹಿತ್ಯವನ್ನು ವಚನ ರಚನೆಯ ಮೂಲಕ ಸಮೃದ್ಧಗೊಳಿಸಿದರು. ವಿಶ್ವದಲ್ಲಿಯೇ ಮೊಟ್ಟಮೊದಲ ಅನುಭವ ಮಂಟಪ ಕಟ್ಟಿದರು. ಈಗ್ಗೆ ಸುಮಾರು ೯೦೦ ವರ್ಷಗಳ ಹಿಂದೆಯೇ ಬಂದ ಪರಕೀಯರು ಕನ್ನಡ ನೆಲದ ಅನುಭಾವ ಮಂಟಪಕ್ಕೆ ಬಂದು,ಕನ್ನಡ ಕಲಿತು ಕನ್ನಡದಲ್ಲಿಯೇ ವಚನಗಳನ್ನು ಬರೆದರು. ಬಸವಣ್ಣನವರು ಇದಕ್ಕೆಲ್ಲ ಕಾರಣೀಕರ್ತರಾದರು.ಹಾಗಾಗಿ ಕನ್ನಡ ಭಾಷೆ ಕಟ್ಟಿ ಬೆಳೆಸುವಲ್ಲಿ ಬಸವಣ್ಣನವರದು ಬಹುಮುಖ್ಯ ಪಾತ್ರವಿದೆ.
ಬೀಜವನ್ನು ಸಂಸ್ಕರಿಸಿದ ಹಾಗೆಯೇ ತಾಯಿಯ ಗರ್ಭದಲ್ಲಿ ಮಗು ಸಂಸ್ಕಾರಕ್ಕೊಳಪಡುತ್ತದೆ. ಚೆನ್ನಬಸವಣ್ಣ ತನ್ನ ತಾಯಿ ನಾಗಮ್ಮ(ನಾಗಲಾಂಬಿಕೆ)ನ ಗರ್ಭದಲ್ಲಿರುವಾಗಲೇ ಬಸವಣ್ಣನವರು ನಾಗಮ್ಮನ ಕಿವಿಯಲ್ಲಿ ಮಂತ್ರದ ಸಂಸ್ಕಾರ ಕೊಟ್ಟಿರುತ್ತಾರೆ. ಹಾಗಾಗಿಯೇ ಚೆನ್ನಬಸವಣ್ಣ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನವನ್ನು ಹೊಂದಿದವನಾಗುತ್ತಾನೆ. ಲಿಂಗಾಯತ ಧರ್ಮದಲ್ಲಿ ತಾಯಿಯ ಗರ್ಭದಲ್ಲಿರುವ ಮಗುವಿಗೆ ೦೮ನೇ ತಿಂಗಳಲ್ಲೆ ಸಂಸ್ಕಾರಕೊಡಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ಮಗುವಿಗೆ ಪ್ರಜ್ಞೆ ಬಂದಿರುವುದರಿಂದ,ಆಗ ಮಂತ್ರದ ಸಂಸ್ಕಾರ ಕೊಡಲಾಗುತ್ತದೆ.
ದೇವಾಲಯದೊಳಗೆ ಪ್ರವೇಶವಿಲ್ಲದ ದೇವರ ಹುಡುಕುವ ತವಕದಲ್ಲಿದ್ದ, ದೇವರ ವಿಷಯದಲ್ಲಿ ಗೊಂದಲಕ್ಕೊಳಪಟ್ಟ ಸಂದರ್ಭದ ಆ ಕಾಲದಲ್ಲಿ ಸತತ ೧೨ ವರ್ಷಗಳ ಕಾಲ ಈ ಕುರಿತಂತೆ ಪ್ರಯೋಗದಲ್ಲಿ ನಿರತರಾಗಿ, ಸಂಶೋಧಿಸಿ ಇಷ್ಟಲಿಂಗವನ್ನು ಕಂಡು ಹಿಡಿದು ದೇವರನ್ನು ಕಾಣುವ ಮಾರ್ಗ ಈ ಮೂಲಕ ಇದೆ ಎಂದು ಹೇಳಿ ಜನಸಾಮಾನ್ಯರ ಕೈಯಲ್ಲಿ ಇಷ್ಠಲಿಂಗವನ್ನು ಕೊಟ್ಟರು. ಹೀಗೆ ಪ್ರಯೋಗಶೀಲರಾದ ಬಸವಣ್ಣನವರು ಸಾಮಾನ್ಯರ ಬದುಕಿನಲ್ಲಿದ್ದ ಗೊಂದಲಗಳನ್ನು ಪರಿಹರಿಸಿದ ನಾಡಿನ ಸಾಂಸ್ಕ್ರತಿಕ ನಾಯಕರಾಗಿದ್ದಾರೆ.
ಅಂದು ಬಸವಾದಿ ಶರಣರು ಬರೆದ ವಚನಗಳನ್ನು ಶರಣ ಫ.ಗು. ಹಳಕಟ್ಟಿಯವರು ಹಾಗೂ ಹರ್ಡೇಕರ್ ಮಂಜಪ್ಪನವರು ರಕ್ಷಸಿ ಉಳಿಸಿಕೊಂಡು ಬಂದರು.
ನಂತರ ಅವು ಜನರಿಗೆ ತಲುಪಿಸುವ ಬಹುದೊಡ್ಡ ಕಾರ್ಯ ಮಾಡಿದರು.
ಈ ನಾಡಿನಲ್ಲಿ ಬಸವ ಜಯಂತಿಯನ್ನು ಮೊದಲಿಗೆ ಆಚರಣೆಗೆ ತಂದವರು ಹರ್ಡೇಕರ್ ಮಂಜಪ್ಪನವರಾಗಿದ್ದಾರೆ. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಬಸವ ಚರಿತ್ರೆ ಎಂಬ ಹಿಂದಿ ಭಾಷೆಯ ಬಸವಣ್ಣನವರ ಕುರಿತಾಗಿ ಬರೆಯಲಾದ ಪುಸ್ತಕವನ್ನು ಕೊಡುವುದರ ಮೂಲಕ ಬಸವಣ್ಣನವರನ್ನು ಗಾಂಧೀಜಿಯವರಿಗೆ ಪರಿಚಯಿಸಿಕೊಡುತ್ತಾರೆ. ಪುಸ್ತಕ ಓದಿದ ಮಹಾತ್ಮ ಗಾಂಧಿಜೀಯವರು ಈ ನೆಲದಲ್ಲಿ ಬಸವಣ್ಣನವರಂತಹ ಮಹಾನ್ ವ್ಯಕ್ತಿಗಳು ಹುಟ್ಟಿರುವದು, ಈ ನೆಲದ ಜನರ ಧನ್ಯತೆ ಎಂದು ಹೇಳುತ್ತಾರೆ.
ಶೋಷಿತ ಜನರನ್ನು ತಮ್ಮ ಅಪ್ಪಗಳೆಂದು ಅಪ್ಪಿ, ಒಪ್ಪಿಕೊಂಡು ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರು ಈ ನಾಡಿನ ಸಾಂಸ್ಕ್ರತಿಕ ನಾಯಕ.
ಶಿವ ದೇಶದ ಸಾಂಸ್ಕ್ರತಿಕ ನಾಯಕ, ಬಸವಣ್ಣ ಈ ನಾಡಿನ ಸಾಂಸ್ಕ್ರತಿಕ ನಾಯಕ
- ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿ
ಬಸವಣ್ಣನವರ ಪೂರ್ವದಲ್ಲಿನ ೫ ಸಾವಿರ ವರ್ಷದ ಇತಿಹಾಸವಿರುವ ಈ ದೇಶಕ್ಕೆ ತನ್ನದೇ ಆದ ಸಂಸ್ಕಾರವಿದೆ . ಅನೇಕ ರೀತಿಯ ಸಂಸ್ಕ್ರತಿ, ಸಿದ್ದಾಂತ, ಶಿವಾಗಮಗಳಿವೆ.ಈ ದೇಶದ ಮೂಲ ಪುರುಷ ಶಿವ. ಹದಿನೆಂಟು ಪುರಾಣಗಳಲ್ಲಿ ಶಿವನ ಕುರಿತಂತೆ ಹತ್ತು ಪುರಾಣಗಳಿವೆ. ಶಿವ ಸಂಸ್ಕ್ರತಿ ಕಠೋರ ಸಂಸ್ಕ್ರತಿಯಾಗಿದ್ದು, ವಿಭಿನ್ನವಾಗಿರುವುದರಿಂದ ಈ ದೇಶದ ಮೂಲ ಸಂಸ್ಕ್ರತಿಯ ಗುರು ಶಿವನಾಗಿದ್ದಾನೆ.ಕೆಲವು ಧರ್ಮಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವಿಲ್ಲ, ಹೆಣ್ಣು ಮಾಯೆ ಎಂದರು.ಈ ನೆಲದ ಹೆಣ್ಣು ಮಕ್ಕಳು ಶೋಷಣೆಗೆ ಒಳಪಟ್ಟಿರುವ ಕಾಲದಲ್ಲಿ ಬಸವಣ್ಣನವರು ಸ್ತ್ರೀಪರವಾಗಿ ಧ್ವನಿ ಎತ್ತಿದರು.ಹಾಗಾಗಿ ಬಸವಣ್ಣ ಈ ನಾಡಿನ ಸಾಂಸ್ಕ್ರತಿಕ ನಾಯಕ.
ಬದುಕಬೇಕಾದ ಅನಿವಾರ್ಯತೆಗೆ ಕಲ್ಲು ಮಣ್ಣಿನ ಮೇಲಿನ ಸಂಸ್ಕ್ರತಿಗೆ ಮಾರು ಹೋಗುವ ಕಾಲದಲ್ಲಿ ಬಸವಣ್ಣನವರು ಮನುಷ್ಯನ ಅಂಗಗಳನ್ನೇ ಲಿಂಗವ ಮಾಡಿ ಸ್ಥಾವರಕ್ಕೆ ಸಂಸ್ಕ್ರತಿ ಕೊಡುವುದಲ್ಲ,ದೇಹಕ್ಕೆ ಸಂಸ್ಕ್ರತಿ ಕೊಡಬೇಕು ಎಂದರು. ಅನುಭವ ಮಂಟಪದಲ್ಲಿ ಧರ್ಮದ ಪ್ರಶ್ನೆ ಉದ್ಭವಿಸಿದಾಗ ಪ್ರತಿಯೊಬ್ಬರೂ ಒಂದೊಂದು ರೀತಿ ವಾಖ್ಯಾನ ಕೊಟ್ಟರೆ ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ ಎಂದರು.ಹಾಗಾಗಿ ಅವರು ನಮ್ಮ ಸಂಸ್ಕ್ರತಿಯ ನಾಯಕರಾಗುತ್ತಾರೆ.ವೇದ-ಉಪನಿಷತ್ತಿನಲ್ಲಿ ವಚನಗಳಲ್ಲಿರುವುದು ಇಲ್ಲ, ವಚನಗಳಲ್ಲಿ ವೇದ-ಉಪನಿಷತ್ತಿನ ಎಲ್ಲವೂ ಇವೆ.ಬಸವಣ್ಣನವರ ವಚನಗಳು ಧರ್ಮಶಾಸ್ತ್ರ , ಸಿದ್ಧಾಂತ,ವಿಜ್ಞಾನ ಎಲ್ಲವನ್ನೂ ಒಳಗೊಂಡಿವೆ.ದೇವರು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ನೀಡುತ್ತವೆ.ದೇವರ ಹೆಸರಿನಲ್ಲಿ ಮೌಡ್ಯಾಚರಣೆ ಮಾಡುವುದನ್ನು ವಿರೋಧಿಸುತ್ತವೆ.ತಾತ್ವಿಕ ನಿಲುವಿನಲ್ಲಿ ,ಮಾನವ ಕುಲದ ಏಳಿಗೆಯ ಸಾಂಸ್ಕ್ರತಿಕ ನಾಯಕ ಬಸವಣ್ಣನವರು,ಮೊಟ್ಟ ಮೊದಲ ಕವಿಯಿತ್ರಿ ಅಕ್ಕಮಹಾದೇವಿಯನ್ನು ನಾಡಿಗೆ ಕೊಟ್ಟವರು.ಬೇರೆ ಬೇರೆ ಭಾಷೆ,ಪ್ರದೇಶಗಳಿಂದ ಬಂದವರಿಗೆ ಕನ್ನಡದಲ್ಲಿಯೇ ವಚನ ಬರೆಯಿಸಿದರು.ವಚನಗಳು ಮಾತೃ ಭಾಷೆ ಕನ್ನಡದಲ್ಲಿ ರಚಿಸಲ್ಪಟ್ಟವು. ಹಾಗಾಗಿ ಈ ನಾಡಿನ ಸಾಸ್ಕ್ರತಿಕ ನಾಯಕ ಬಸವಣ್ಣನವರಾಗಿದ್ದಾರೆ .