ಮುಂಡರಗಿ ತೋಂಟದಾರ್ಯ ಶಾಖಾ ಮಠ: ಅನುಭಾವಿಗಳ ಅನುಭಾವ ದರ್ಶನ ಪ್ರವಚನ ಮಾಲಿಕೆ – ದಿನ – ೦೨
ಶರಣ ಪಿ.ವೀರಭದ್ರಪ್ಪ ಕುರಕುಂದಿ
ಬಸವ ಕೇಂದ್ರ, ಸಿಂಧನೂರು
ಹುಟ್ಟುವುದು ಸಾಯುವುದು ಜಂಗಮವಲ್ಲ.ಜಂಗಮಕ್ಕೆ ತಾಯಿ-ತಂದೆಗಳಿಲ್ಲ.ಜಂಗಮಕ್ಕೆ ಯಾವುದೇ ಜಾತಿ ಸೂತಕಗಳಿಲ್ಲ. ನಮ್ಮೊಳಗಿರುವ ಚೇತನ ಸತ್ತೂ ಇಲ್ಲ,ಹುಟ್ಟಿಯೂ ಇಲ್ಲ.ನಮ್ಮೊಳಗಿನ ಚೇತನವೇ ಜಂಗಮ.ಆ ಚೇತನವನ್ನು ವಿಕಾಸ ಮಾಡಿಕೊಳ್ಳುತ್ತಾ ಸಾಗಬೇಕು.ಸಾಯುವುದು ನಾಮ,ರೂಪ ಹಾಗೂ ದೇಹ ಮಾತ್ರ.ಜಂಗಮತ್ವಕ್ಕೆ ಸಾವಿಲ್ಲ.
ಜಂಗಮವೆಂದರೆ ಜಾತಿ ಎಂದು ತಿಳಿದಿದ್ದೇವೆ.ಜಂಗಮಕ್ಕೆ ಯಾವ ಹೋಲಿಕೆಯನ್ನು ಕೊಡಲಾಗದು. ಬಸವಣ್ಣ ದೀನದಲಿತರೊಳಗೆ ಜಂಗಮತ್ವ ಕಂಡ ಮಹಾನುಭಾವ. ಶರಣೆ ಸತ್ಯಕ್ಕ, ಸೂಳೆ ಸಂಕವ್ವೆ, ಕಾಳವ್ವೆ, ಮಾದಾರ ಧೂಳಯ್ಯ, ಚನ್ನಯ್ಯ, ಕೇತಯ್ಯ, ಚಲವಾದಿ ನಾಗಿಮಯ್ಯ ಮುಂತಾದವರಲ್ಲಿ ಜಂಗಮತ್ವ ಕಂಡರು, ಅವರನ್ನು ಜಂಗಮರನ್ನಾಗಿ ರೂಪಿಸಿದರು.
ದೇಹದೊಳಗಿನ ಚೇತನಕ್ಕೆ ಜಂಗಮವೆಂದರು ಬಸವಣ್ಣ. ನಮ್ಮ ನಿಮ್ಮೆಲ್ಲರ ಒಳಗಿರುವ ಜಂಗಮಶಕ್ತಿ ಚೈತನ್ಯವನ್ನು ವಿಕಾಸ ಮಾಡಿಕೊಳ್ಳುತ್ತಾ ಸಾಗಬೇಕು.
ಜಂಗಮದ ಕಾಯಕ ಮಾಡಲು ದೂರದ ಕಾಶ್ಮೀರದಿಂದ ಬಂದ ಮಹಾದೇವ ಭೂಪಾಲ ದೊರೆಯಾಗಿದ್ದವನು,ಮುಂದೆ ಮೋಳಿಗೆ ಮಾರಯ್ಯನಾಗಿ ಅನುಭವ ಮಂಟಪದ ಸದಸ್ಯನಾದ,ಜಂಗಮನಾದ.
ನಾವು ಮಾಡುವ ಕಾಯಕದಿಂದ ಪ್ರತಿಫಲವನ್ನು ನಾವೇ ಇಟ್ಟುಕೊಂಡರೆ ಗುರುವಿಗೆ ದೂರ,ಲಿಂಗಕ್ಕೆ ದೂರ,ಜಂಗಮಕ್ಕೆ ದೂರ ಎಂಬುದು ಅರಿಯಬೇಕು.
ಅರಿವು,ಅನುಭವ,ಆಚಾರಕ್ಕೆ ಬದುಕಿದವರು ಜಂಗಮರು. ಜಾತಿ ಕುಲ ಗೋತ್ರ ಜಂಗಮವಲ್ಲ. ಜಡವಾಗಿರುವ ದೇಹವನ್ನು ಚೇತನ ಗೊಳಿಸುವುದು ಜಂಗಮ.ದೇಹದೊಳಗಿನ ಚೇತನ ಶಕ್ತಿಯೇ ಜಂಗಮ.
ಜಂಗಮ ಯಾವುದೇ ಜಾತಿಗೆ ಸಂಬಂಧಿಸಿದಲ್ಲ,ಯಾವುದೇ ಕುಲಕ್ಕೆ ಸೀಮಿತವಲ್ಲ.ಗುರು,ಲಿಂಗ ಕೋಪಗೊಂಡರೂ ಪರವಾಗಿಲ್ಲ,ಜಂಗಮ ಕೋಪಗೊಳ್ಳಬಾರದು.
ತನ್ನರಿವು ತಾನಾಗಿ,ಅರಿವಿನಂತೆ ಆಚರಣೆಗೆ ತಂದರೆ ಅದು ಜಂಗಮ. ಇಂಥ ಜಂಗಮತ್ವವನ್ನು ಕಂಡವರು ಬಸವಣ್ಣ,ಜಂಗಮ ಸ್ವರೂಪಿಯೇ ಆದವರು ಬಸವಣ್ಣ.
ಬಸವಣ್ಣನವರಿಂದ ಪ್ರಭಾವಿತರಾದ ಶರಣರು ಪ್ರತಿ ಬಸವಣ್ಣರಾದರು. ಜಾತಿ ಮತ ಪಂಥವನ್ನು ಮೀರಿ ಜಂಗಮರಾಗಿ ರೂಪಗೊಂಡವರು ಶರಣರು.
ಇಂಥ ಉತ್ತಮವಾದ ಜಂಗಮತ್ವದ ಬದುಕು ಕಟ್ಟಿಕೊಂಡವರು ವಾಸ್ತವವಾಗಿ ಕೊನೆಯವರೆಗೂ ಉಳಿಯುತ್ತಾರೆ.ಹಾಗಾಗಿ ಬಸವಾದಿ ಶರಣರು ಅಜರಾಮರವಾಗಿದ್ದಾರೆ.