ಕೊಪ್ಪಳ ಮಾಲಿನ್ಯಕ್ಕೆ ಸ್ಪಂದಿಸದ ಪ್ರತಿನಿಧಿಗಳಿಗೆ ಮತ ಬಹಿಷ್ಕಾರ: ಸಾಣೇಹಳ್ಳಿ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಶಾಸಕರು, ಸಂಸದರು ಪರಿಸರ ಮಾಲಿನ್ಯದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ನಿಮಗೆ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು. ಅಥವಾ ನಿಮ್ಮ ವಿರುದ್ಧ ನಮ್ಮದೇ ಒಬ್ಬ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಎಚ್ಚರಿಸಿದರು.

ಮಂಗಳವಾರ ಕೊಪ್ಪಳದ ನಗರಸಭೆ ಮುಂದೆ “ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ” ಹಾಗೂ “ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ”ನೇತೃತ್ವದಲ್ಲಿ ಜರುಗಿದ ಕೊಪ್ಪಳ, ಭಾಗ್ಯನಗರ ಬಂದ್ ಮಾಡಿ, ನಡೆದ ಬೃಹತ್ ಹೋರಾಟದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಲ್ಡೋಟಾ ಕಾರ್ಖಾನೆಯ ಸ್ಥಾಪನೆಯ ದುಷ್ಪರಿಣಾಮದಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಜನರನ್ನು ಕಂಡೂ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿರುವುದು ಸರಿಯಲ್ಲ.

ಸಾರ್ವಜನಿಕರ ಕೂಗನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಕೈಗಾರಿಕಾ ಬಾಧಿತ ಹಳ್ಳಿಗೆ ಭೇಟಿ ನೀಡಿಲ್ಲವೆಂಬ ಕೂಗು ಇದೆ. ನಮಗೆ ಬದುಕು ಮುಖ್ಯ. ನೆಲ, ಜಲ, ವಾಯು ಕಲುಷಿತವಾಗಿದೆ. ಗಾಂಧೀಜಿ ಈಗ ಇದ್ದಿದ್ದರೆ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದರು ಎಂದು ಹೇಳಿದರು.

ಗದಗನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಮಾತನಾಡಿ, ಹೋರಾಟದ ಮೂಲಕವೇ ಎಲ್ಲವನ್ನು ಪಡೆಯಬೇಕಾಗಿದೆ. ಇಂತಹ ವಿಚಿತ್ರದ ಕಾಲ ನಮ್ಮ ಮುಂದೆ ಬಂದಿದೆ. ಗಣಿಗಾರಿಕೆ ನಡೆಯಬಾರದು ಎಂದು ನಿರಂತರವಾಗಿ ಹೋರಾಟ ಮಾಡಿದ ಕಾರಣ ಗಣಿಗಾರಿಕೆ ನಿಂತು ಹೋಗಿದೆ. ಹೋರಾಟದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿದೆ ಎಂದರು. ಸರ್ಕಾರದ ಮುಖ್ಯ ಗುರಿ ಜನ ಕಲ್ಯಾಣ ಮಾಡುವುದೇ, ಹೊರತು ಬಂಡವಾಳಶಾಹಿಗಳ ಪರ ನಿಲ್ಲುವುದಲ್ಲ.

ಗದಗ ಭಾಗದಲ್ಲಿ ಪೋಸ್ಕೋ ಕಂಪನಿಯನ್ನು ಒದ್ದು ಓಡಿಸುವ ಕೆಲಸ ಮಾಡಿದ್ದು ಇದೇ ನಮ್ಮ ಜನರು. ಕಾರ್ಖಾನೆ ಬಾಧಿತ ಪ್ರದೇಶಗಳನ್ನು ನಾವು ನೋಡಿದ್ದೇವೆ. ಇಲ್ಲಿನ ಪರಿಸರದ ಸ್ಥಿತಿ ನಾವು ನೋಡಿದ್ದೇವೆ. ಈ ಹೋರಾಟ ಮುಂದಿನ ದಿನಗಳಲ್ಲಿ ಜನಾಂದೋಲನವಾಗಿ ರೂಪಗೊಳ್ಳಲಿದೆ ಎಂದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕೊಪ್ಪಳ ತಾಲೂಕಿನ ಸುತ್ತಮುತ್ತಲ ಹಳ್ಳಿಗಳು ಕಾರ್ಖಾನೆ ಬಿಡುವ ವಿಷಪೂರಿತ ಗಾಳಿಯಿಂದಾಗಿ ನರಕಯಾತನೆ ಅನುಭವಿಸುತ್ತಿವೆ. ಸರ್ಕಾರ ಹೀಗೆ ಜನರನ್ನು ಸ್ವಲ್ಪ ಸ್ವಲ್ಪ ಸಾಯಿಸುವ ಬದಲಿಗೆ, ದಯಾಮರಣವನ್ನಾದರೂ ಕೊಟ್ಟರೆ ಒಳ್ಳೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೀವರ್ಗಿಯ ಕಬೀರ ಬಸವಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಕಣ್ಣೀರು ಒರೆಸುವವರ ಪರ ನಿಂತವರೇ ದೊಡ್ಡವರು. ಭಿಕ್ಷೆ ಕೊಟ್ಟರೆ ಸ್ವಾಮಿಗಳು ಬದುಕುತ್ತಾರೆ. ಸಾರ್ವಜನಿಕರು ಕೊಟ್ಟ ಮತದ ಭಿಕ್ಷೆ ಪಡೆದು ಇಂದು ಶಾಸಕರು ಆಯ್ಕೆಯಾಗುತ್ತಾರೆ.

ಕೊಪ್ಪಳದ ಜನರು ಕಾರ್ಖಾನೆಯಿಂದಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹೋರಾಟ ಜನಪ್ರತಿನಿಧಿಗಳಿಗೆ ತಿಳಿದಿಲ್ಲವೇ? ಕೊಪ್ಪಳ ಜಿಲ್ಲೆಯ ರಾಜಕಾರಣಿಗಳಿಗೆ ಈ ವ್ಯವಸ್ಥೆ ಕಂಡು ಮನಸ್ಸು ಕಲಕಲಿಲ್ಲವೇ?

ಜನ ರೊಚ್ಚಿಗೇಳುವ ಮೊದಲು ನ್ಯಾಯ ಒದಗಿಸಬೇಕು. ಜನಶಕ್ತಿ ಮುಂದೆ ಇದ್ಯಾವುದೂ ನಿಲ್ಲಲ್ಲ. ಕಾರ್ಖಾನೆಗಳನ್ನು ಒದ್ದು ಹೋಡಿಸುವ ಕೆಲಸ ಮಾಡಬೇಡಬೇಕಿದೆ. ಓಟು ಬೇಕಾದಾಗ ಬರುವ ಶಾಸಕರು ಜನರಿಗೆ ಘಾಸಿ ಮಾಡುವುದು ಸರಿಯಲ್ಲ ಎಂದರು.

ಹೋರಾಟ ಸಮಿತಿ ನಿರ್ಣಯಗಳು

1.        ಬಲ್ಡೋಟಾ ತೊಲಗುವವರೆಗೆ ಹೋರಾಟ ಮುಂದುವರಿಸುವುದು, ಮುಂದುವರಿದ ಭಾಗವಾಗಿ ರಸ್ತೆ ತಡೆ, ರೈಲು ತಡೆ ಮುಂತಾದ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು.

2.        ಶಾಸಕರು, ಸಚಿವರ ನೇತೃತ್ವದಲ್ಲಿ ಶೀಘ್ರದಲ್ಲಿ ಸರ್ವಪಕ್ಷಗಳ ಮತ್ತು ಆಂದೋಲನದ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಯ ಬಳಿ ಕೊಂಡೊಯ್ದು ಕಾರ್ಖಾನೆಯಿಂದ ಆರೋಗ್ಯದ ಮೇಲಾಗುವ ಹಾನಿ ಕುರಿತು ಮನವರಿಕೆ ಮಾಡಿಕೊಡುವುದು.

3.        ಬಲ್ಡೋಟಾ ಕಂಪನಿ ಉಚ್ಚನ್ಯಾಯಾಲಯದ ಆದೇಶ ಉಲ್ಲಂಘಿಸಿ ಬಸಾಪುರ ಕೆರೆಯನ್ನು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವು ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು. ಐಐಎಸ್‌ಸಿ ಮತ್ತು ಎಐಐಎಂಎಸ್ ಪರಿಸರ, ಆರೋಗ್ಯ ಸಮೀಕ್ಷೆ ನಡೆಸಬೇಕು.

4.        ಪರಿಸರ ತಜ್ಞರ ವರದಿಯಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಬಾಧಿತ ಹಳ್ಳಿಗೆ ಭೇಟಿ ನೀಡಬೇಕು.

5.        ತುಂಗಭದ್ರಾ ನದಿಯನ್ನು ವಿಷಗೊಳಿಸಿದ ಕಾರ್ಖಾನೆಗಳನ್ನು ಮುಚ್ಚಬೇಕು. ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡುವುದು. ಬಾಧಿತ ಹಳ್ಳಿಗಳಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸುವುದು.

6.        ಸರಕಾರ ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ನಿರ್ಣಯಗಳನ್ನು ಸರ್ಕಾರದ ಮುಂದಿಡಲಾಯಿತು.

ಈ ವೇಳೆ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಪರಿಸರಕ್ಕಾಗಿ ನಾವು ಬೆಂಗಳೂರು ಸಂಘಟನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ,

ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಪ್ರಸನ್ನ ಗಡಾದ, ರಮೇಶ್ ಹ್ಯಾಟಿ, ಅಮ್ಮದ್ ಪಟೇಲ್, ಸಿ.ವಿ. ಚಂದ್ರಶೇಖರ, ಡಿ.ಎಚ್. ಪೂಜಾರ, ವೀರಣ್ಣ ಬುಳ್ಳಾ, ವಿ.ವಿ. ಕಣವಿ, ವಿ.ಎಂ. ಭೂಸನೂರಮಠ, ರಾಜೇಶ ಸಸಿಮಠ, ಬಾವರಾಜ ಬಳ್ಳೊಳ್ಳಿ, ಪೀಠಾ ಹುಸೇನ್ ಹೊಸಳ್ಳಿ, ದಾನಪ್ಪ ಕವಲೂರು, ಚಂದ್ರಶೇಖರ್ ಕವಲೂರು, ಗೊಂಡಬಾಳ, ಕಾವ್ಯಾ ಗಡಾದ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ್, ವಿದ್ಯಾ ನಾಲ್ವಾಡ, ಎಂ.ಕೆ. ಸಾಹೇಬ, ಮಂಜುನಾಥ ಜಿ. ಗೊಂಡಬಾಳ ಮತ್ತು ರಮೇಶ ತುಪ್ಪದ, ಸದಾಶಿವ ಪಾಟೀಲ ಸೇರಿದಂತೆ ಭಾಗ್ಯನಗರ, ಕೊಪ್ಪಳ ನಗರ, ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *