ಚಿತ್ರದುರ್ಗ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಮಂಗಳವಾರ ಸಂಜೆ ಬಸವಣ್ಣನವರ ಆರ್ಥಿಕ ಚಿಂತನೆಗಳು ವಿಷಯಧಾರಿತ ಚಿಂತನ ಗೋಷ್ಠಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ.ಸಿ.ಕಳಸದ ಬಸವಣ್ಣನವರು ಯಾಕೆ ಇನ್ನೂ ಪ್ರಸ್ತುತ, ಅವರ ಆರ್ಥಿಕ ಚಿಂತನೆಗಳು ಹೇಗೆ ಪ್ರಾಮುಖ್ಯವೆಂಬುದನ್ನು ಮನಗಾಣಬೇಕಿದೆ ಎಂದು ಹೇಳಿದರು.
ಆರ್ಥಿಕ ಚಿಂತಕ ಹಾಗೂ ಬಸವ ಮೀಡಿಯಾ ಛೇರ್ಮನ್ ಪ್ರೊ.ಟಿ.ಆರ್. ಚಂದ್ರಶೇಖರ್ ೧೨ನೇ ಶತಮಾನದ ಶಿವಶರಣರ ಜೀವನ ವಿಧಾನಗಳನ್ನು ಕಂಡಾಗ, ಇದು ಸಾಮಾಜಿಕ ಧಾರ್ಮಿಕ ಆರ್ಥಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಶರಣರ ವಚನಗಳಲ್ಲಿ ದಿನ ನಿತ್ಯದ ಬದುಕಿನ ಬಗ್ಗೆಯೇ ಮಾತನಾಡಿದ್ದಾರೆ, ಇಡೀ ಬಸವ ಸಂವಿಧಾನದಲ್ಲಿ ಮತ್ತೆ ಮತ್ತೆ ಕಾಯಕದ ಬಗ್ಗೆ ದುಡಿಮೆಯ ಬಗ್ಗೆ ಪ್ರಸ್ತಾಪಿಸಲಾಗಿದೆ.

ವರ್ಣಕರ್ಮಗಳ ಸಿದ್ದಾಂತದಲ್ಲಿ ಕಾಯಕಕ್ಕೆ ಬೆಲೆಯಿಲ್ಲ, ಅದರೆ, ಶರಣರು ಕಾಯಕವೇ ಕೈಲಾಸ, ದುಡಿಮೆಯೆ ದೇವರು ಎಂಬ ಮೌಲ್ಯದೊಂದಿಗೆ ಬದುಕಿದರು. ವಚನಕಾರರ ಚಿಂತನೆ ಅಂಬಲಿಯು ಸಂಸ್ಕೃತಿಯನ್ನು ಪ್ರತಿಪಾದಿಸಿದ್ದು ಭೋಜನದ ಸಿದ್ದಾಂತವಲ್ಲ. ನಿರ್ಲಕ್ಷಕ್ಕೆ ಒಳಗಾಗಿದ್ದ ಸಮಾಜವನ್ನು ಅಪ್ಪಿಕೊಳ್ಳ್ಳುವಂತ ಸಂಸ್ಕೃತಿಯನ್ನು ಬಸವ ಸಂವಿಧಾನ ಕಲ್ಪಿಸಿಕೊಟ್ಟಿತು. ಬಸವ ಸಿದ್ದಾಂತದಲ್ಲಿ ಕಾಯಕದ ಮೂಲಕ ಸಾಧ್ಯವಾದುದನ್ನು ಸಾಧಿಸಿ ತೋರಿಸಿದರು.
ಅಂಬಲಿ ಎಂಬುದು ದುಡಿಮೆಯು ಕಾಯಕದ ಪ್ರತೀಕವಾದುದು ಬಸವ ಜಯಂತಿಯು ಈ ಸಂಧರ್ಭದಲ್ಲಿ ನಾವೆಲ್ಲ ಮೌಢ್ಯವನ್ನು ಬಿಟ್ಟು ಕಾಯಕದ ಮೂಲಕ ಬದುಕನ್ನು ಕಟ್ಟಿಕೊಳ್ಳೋಣ ಎಂದು ತಿಳಿಸಿದರು.

ಸತ್ಯ ಶುದ್ದ ಕಾಯಕ ತ್ರೈಮಾಸಿಕ ಪತ್ರಿಕೆ ಸಂಪಾದಕರಾದ ಬಿ.ರಾಜಶೇಖರಪ್ಪ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತ, ಈ ಪತ್ರಿಕೆಯು ಮಲ್ಲಿಕಾರ್ಜುನ ಸ್ವಾಮಿಗಳು ಇದ್ದಂತಹ ಸಂದರ್ಭದಲ್ಲಿ ಪ್ರಾರಂಭವಾಗಿದ್ದ ವಿದ್ವತ್ ಪತ್ರಿಕೆ. ಆದರೆ ಅನಂತರ ಈ ಪತ್ರಿಕೆ ನಿಂತುಹೊಗಿತ್ತು. ಡಾ.ಬಸವಕುಮಾರ ಶ್ರೀಗಳಿಂದ ಮತ್ತೇ ಈ ಪತ್ರಿಕೆ ಮರುಜೀವ ಪಡೆದುಕೊಂಡಿದೆ. ಕಾಯಕ ಸತ್ಯವಾದದು ಶುದ್ದವಾದದು ಆಗಿರಬೇಕು ಎನ್ನುವ ಕಾರಣಕ್ಕೆ ಈ ಪತ್ರಿಕೆ ಸತ್ಯ ಶುದ್ದ ಕಾಯಕ ಎಂಬ ಹೆಸರನ್ನು ಪಡೆದುಕೊಂಡಿತು. ಈಗ ಈ ಪತ್ರಿಕೆ ಹೊಸರೂಪ ಪಡೆದುಕೊಂಡು ಇಂದು ಪ್ರಕಟಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ.ಎಚ್.ಎನ್.ತಿಪ್ಪೇಸ್ವಾಮಿ (ಎಸ್.ಎಂ.ಎಲ್), ಚಿತ್ರದುರ್ಗ ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಶ್ರೀ.ಕೆ.ಸಿ.ನಾಗರಾಜ್, ಚಿತ್ರದುರ್ಗ ವೀರಶೈವ ಸಮಾಜದ ನಿರ್ದೇಶಕರಾದ ಸಿದ್ದವ್ವನಹಳ್ಳಿ ಪರಮೇಶ್, ಹರಗುರು ಚರಮೂರ್ತಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳು, ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಸವ ಜಯಂತಿ ಅಂಗವಾಗಿ ನಡೆಸಿದ ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯಾಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ಶಿವಮೊಗ್ಗದ ಎಸ್.ಇ. ಗಾಯತ್ರಿ, ಚಿತ್ರದುರ್ಗದ ವಿಕಾಸ್ ಕುಮಾರ್.ವಿ, ಚಿತ್ರದುರ್ಗದ ಸಲ್ಮಾ ಎಸ್. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನಗಳನ್ನು ಪಡೆದರು. ಭಾಷಣ ಸ್ಪರ್ಧೆಯಲ್ಲಿ ಕಲಾವತಿ, ಸೌಂದರ್ಯ, ಎಸ್.ಪರಮೇಶ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನಗಳನ್ನು ಪಡೆದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕರಾದ ಶ್ರೀ. ಡಾ.ಪಂಡಿತ್ ಮುದ್ದುಮೋಹನ್ ಇವರಿಂದ ವಚನಗಾಯನ, ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು “ಅನುಭವ ಮಂಟಪ” ನೃತ್ಯರೂಪಕ, ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು “ಭಾವಿ ಮತದಾರರಿಗೆ ಅರಿವು” ಎಂಬ ರೂಪಕವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿ, ಪ್ರೊ. ಜಯಲಕ್ಷಿ ಸ್ವಾಗತಿಸಿ, ನೇತ್ರಾವತಿ ನಿರೂಪಿಸಿ ವಂದಿಸಿದರು.