ಚಿತ್ರದುರ್ಗ:
ಯುವಕರು, ಮಹಿಳೆಯರು, ಮಕ್ಕಳು ಜಾಗೃತರಾಗಿರಿ. ನೀವೇ ನಾಡಿನ ನಾಳಿನ ಆಸ್ತಿ ಆಗಿರುವಿರಿ. ಬನ್ನಿ ಎಲ್ಲರೂ ಸೇರಿ ಬಲಿಷ್ಠ ಭಾರತ ಕಟ್ಟೋಣ ಎಂಬ ಜಾಗೃತ ಘೋಷವಾಕ್ಯಗಳನ್ನು ಹರ್ಡೇಕರ್ ಮಂಜಪ್ಪನವರು ಅಂದು ಹೇಳಿದ್ದರು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹುರಳಿ ಬಸವರಾಜು ಸ್ಮರಿಸಿಕೊಂಡರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲ ಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಬುಧವಾರ ಏರ್ಪಡಿಸಿದ್ದ ಹರ್ಡೆಕರ್ ಮಂಜಪ್ಪ ಅವರ ಶರಣೋತ್ಸವ ಕಾರ್ಯಕ್ರಮದಲ್ಲಿ ವಿಷಯಾವಲೋಕನ ಮಾಡುತ್ತ ಮಾತನಾಡಿದರು.
ಕಡುಬಡತನದಲ್ಲಿ ಹುಟ್ಟಿ ಅನೇಕ ಸಂಕಷ್ಟಗಳನ್ನು ತಮ್ಮ ಹೋರಾಟದ ಬದುಕನ್ನು ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದ, ಕರ್ನಾಟಕದ ಗಾಂಧಿ ಎಂದೇ ಕರೆಸಿಕೊಂಡಿದ್ದ ಹರ್ಡೇಕರ್ ಮಂಜಪ್ಪನವರ ವ್ಯಕ್ತಿತ್ವ, ಸಾಧನೆಯ ಬಗೆಗೆ ಎಷ್ಟು ಹೇಳಿದರೂ ಸಾಲದು ಎಂದರು.

ಹುಟ್ಟು ಎಲ್ಲೇ ಪಡೆದಿರಲಿ ಸಾವು ಎಲ್ಲೇ ಆಗಲಿ, ಇವರೆಡೂ ನಮ್ಮ ಕೈಯೊಳಗಿಲ್ಲ. ಆದರೆ ಇವುಗಳ ನಡುವೆ ಇರುವ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಅಂತಹ ಸಿದ್ಧಿಯನ್ನು, ಅಂದುಕೊಂಡದ್ದನ್ನು ಸಾಧಿಸಿ, ವ್ಯಕ್ತಿಯಾಗಿ ಹುಟ್ಟಿ ಕನ್ನಡಿಗನಾಗಿ ಬೆಳೆದು ಭಾರತೀಯತೆಯ ರಾಷ್ಟ್ರಪ್ರಜ್ಞೆಯನ್ನು ಸ್ವತಃ ಜಾಗೃತಗೊಳಿಸಿಕೊಂಡು ಅದನ್ನು ಇತರರಿಗೂ ಮುಟ್ಟುವಂತೆ ಹಗಲಿರುಳು ಶ್ರಮಿಸಿದವರು ಮಂಜಪ್ಪನವರು.
ಮಲೆನಾಡಿನ ಸೆರಗು ಅಕ್ಕ, ಅಲ್ಲಮ, ಪಂಪರಂತಹ ಮಹಾನ್ ಚೇತನಗಳನ್ನು ನೀಡಿದೆ. ಅದೇ ರೀತಿ ಮಂಜಪ್ಪನವರು ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹುಟ್ಟಿ ಶಿಕ್ಷಣ ಕಲಿತದ್ದು ಸ್ವಲ್ಪವೇ ಆದರೂ ಸಾಧಿಸಿದ್ದು ಅಗಾಧ ಎಂದು ಹೇಳಿದರು.

ಈ ನಡುವೆ ದಾವಣಗೆರೆ ವಿರಕ್ತಮಠದಲ್ಲಿದ್ದ ಮೃತ್ಯುಂಜಯಪ್ಪಗಳ ಸಂಪರ್ಕಕ್ಕೆ ಬಂದು ಭಜನಾ ಸಂಘ ಸ್ಥಾಪಿಸಿದರು. ಮುಂದುವರೆದು ಗಣೇಶ ಹಬ್ಬ, ರಾಮನವಮಿ ಆಚರಣೆಯಂತೆ ನಾವು ಬಸವ ಜಯಂತಿಯನ್ನು ಆಚರಿಸಬೇಕೆಂದು ಮೃತ್ಯುಂಜಯಪ್ಪಗಳು ಇತರರೊಂದಿಗೆ ಚರ್ಚಿಸಿ ೧೯೧೩ರಲ್ಲಿ ಮೊಟ್ಟಮೊದಲು ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಾರಂಭ ಮಾಡಿದ್ದು ದೊಡ್ಡ ಇತಿಹಾಸವೆಂದರು.
ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧನೆ ಮಾಡಬಹುದಾ! ಎಂದು ಆಶ್ಚರ್ಯಪಡುವಷ್ಟು ಸಾಧನೆ ಮಾಡಿದರು. ಸದಾ ರಾಷ್ಟ್ರಪ್ರೇಮ ಜಾಗೃತಿಯೇ ಉಸಿರಾಗಿಸಿಕೊಂಡಿದ್ದ ಮಂಜಪ್ಪನವರು ಫ.ಗು. ಹಳಕಟ್ಟಿಯವರ ವಚನಶಾಸ್ತ್ರಸಾರ ಪ್ರಕಟಣೆಗೆ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿ ಕೊಟ್ಟದ್ದು ಸೇರಿದಂತೆ, ಕನ್ನಡಿಗರಾಗಿ ಹುಟ್ಟಿ ಭಾರತೀಯರಾಗಿ ಈ ನಾಡಿಗೆ ಬೆಳಕು ಬೀರಿದ ಮಂಜಪ್ಪನವರು ಸ್ವಾತಂತ್ರ್ಯ ಸಿಗುವ ಎಂಟು ತಿಂಗಳು ಮೊದಲು ೩ನೇ ಜನವರಿ ೧೯೪೭ರಲ್ಲಿ ಲಿಂಗೈಕ್ಯರಾದರು.
ಅವರು ಬಿಟ್ಟು ಹೋದ ಆದರ್ಶವನ್ನು ಮಕ್ಕಳು ಅರಿಯಬೇಕಿದೆ. ಇದಕ್ಕೆ ದೊಡ್ಡವರ ಪ್ರೊತ್ಸಾಹ ಅಗತ್ಯ ಎಂದು ಮಂಜಪ್ಪನವರ ಸಮಗ್ರ ವ್ಯಕ್ತಿತ್ವವನ್ನು ಬಸವರಾಜು ಕಟ್ಟಿಕೊಟ್ಟರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ, ಸಾಮಾನ್ಯವಾಗಿ ಈ ನಾಡಿನಲ್ಲಿ ಶರಣ ಪರಂಪರೆಯನ್ನು ಇಷ್ಟೊಂದು ಗಹನವಾಗಿ ಗುರುತಿಸಿ ಆಧರಿಸಿ ಆಚರಿಸಲು ಪ್ರೇರಣೆ ಮತ್ತು ಪ್ರವರ್ತಕರಾದವರೆಂದರೆ ಹರ್ಡೇಕರ್ ಮಂಜಪ್ಪನವರು ಹಾಗೂ ಫ.ಗು. ಹಳಕಟ್ಟಿಯವರು.
ನಮ್ಮ ನಾಡು ಈ ಮಹನೀಯರನ್ನು ಯಾವತ್ತಿಗೂ ಮರೆಯುವಂತಿಲ್ಲ. ಮಂಜಪ್ಪನವರು ಬಾಲ್ಯ, ಯೌವ್ವನ ಕೊನೆಗೆ ತಮ್ಮ ಅಂತಿಮ ದಿನಗಳವರೆಗೂ ನಿರಂತರವಾಗಿ ಈ ತತ್ವದ ಬಗ್ಗೆ ಪ್ರಸಾರ ಮತ್ತು ಅನುಷ್ಠಾನಕ್ಕಾಗಿ ಅತಿಹೆಚ್ಚು ಆಸ್ಥೆ ವಹಿಸಿ ದುಡಿದವರು.

ಭಾರತೀಯ ಪರಂಪರೆಯಲ್ಲಿ ಗಣೇಶ ಆರಾಧನೆ ನಡೆದಿದೆ. ಈಗೀಗ ಗಣೇಶ ಚತುರ್ಥಿಯಂದು ಗಣೇಶ ಕೂರಿಸುವ, ವಿಸರ್ಜಿಸುವ ವಿಧಾನ ಹೇಗಿದೆ ಎಂಬುದು ನಿಮಗೆ ಗೊತ್ತು. ಆದರೆ ಬಸವ ಜಯಂತಿ? ಯಾವ ಬಸವಣ್ಣ ದುಡಿಯುವ ವರ್ಗವನ್ನು ದೇವರು ಅಂದರೋ ಅಂತಹ ಪುಣ್ಯಾತ್ಮನ ಸ್ಮರಣೆಯನ್ನು ಯಾವ ರೀತಿ ಮಾಡುತ್ತೇವೆಯೆಂದು ನಾವೆಲ್ಲ ಯೋಚಿಸಬೇಕಿದೆ ಎಂದರು.
ಅಂದಿನ ಕಾಲದಲ್ಲಿ ಮಠಗಳು ಕಂತೇಭಿಕ್ಷೆಯಲ್ಲೇ ನಡೆದಿದ್ದವು. ಇಂದಿನ ಹಾಗೆ ಆರ್ಥಿಕ ಸಬಲೀಕರಣಗೊಂಡಿರಲಿಲ್ಲ. ವಿದ್ಯಾರ್ಥಿಗಳು ಕಂತೇಭಿಕ್ಷೆ ಎತ್ತಿ ತಂದು ಅದೇ ಪ್ರಸಾದದಲ್ಲಿ ಬೆಳೆದು ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗುತ್ತಿದ್ದರು. ಸ್ವಾಮಿಗಳು ಸಹ ಕಂತೇಭಿಕ್ಷೆಯ ಪ್ರಸಾದವನ್ನು ತೆಗೆದುಕೊಂಡ ಉದಾಹರಣೆ ಸಾಕಷ್ಟಿವೆ.
ಅರ್ಧ ದಶಕದ ಹಿಂದೆ ಇದೆಲ್ಲ ನಡೆದಿದೆ. ಓಂತಹ ಕಠಿಣ ಪರಿಸ್ಥಿತಿಯಲ್ಲಿ ಹರ್ಡೇಕರ್ ಮಂಜಪ್ಪನವರು ಹಾಗೂ ಫ.ಗು. ಹಳಕಟ್ಟಿ ಅವರುಗಳು ಮುದ್ರಣಾಲಯ ಆರಂಭ ಮಾಡೋದು ಅಂದರೆ ಹುಡುಗಾಟದ ಮಾತಲ್ಲ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ನಾಗರಾಜ ಸಂಗಮ, ಬಸವರಾಜ ಕಟ್ಟಿ, ಎಸ್.ಎಂ. ಕೊಟ್ರೇಶಪ್ಪ, ಗಂಗಾಧರಪ್ಪ, ಟಿ.ಪಿ. ಜ್ಞಾನಮೂರ್ತಿ, ಮಹಂತಮ್ಮ, ಜಯಶೀಲ ವೀರಣ್ಣ, ಗೀತಾ ರುದ್ರೇಶ್, ಇಟಗಿ ವಿಜಯಕುಮಾರ್ ಸೇರಿದಂತೆ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುನಾಥರೆಡ್ಡಿ, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭದಲ್ಲಿ ಜಮುರಾ ಕಲಾವಿದ ಉಮೇಶ್ ಪತ್ತಾರ ವಚನ ಪ್ರಾರ್ಥನೆ ಮಾಡಿದರು. ಗೀತಾ ಸ್ವಾಗತಿಸಿದರು. ಅನುಪಮ ಲಿಂಗರಾಜು ಕಾರ್ಯಕ್ರಮ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
