ಮುರುಘಾ ಮಠದಲ್ಲಿ, ಅಂತರ್ಜಾತಿ ಸೇರಿ, 14 ಜೋಡಿಗಳ ಸರಳ ಸಾಮೂಹಿಕ ವಿವಾಹ

ಬಸವ ಮೀಡಿಯಾ
ಬಸವ ಮೀಡಿಯಾ

‘ದುಂದುವೆಚ್ಚ ಮಾಡದೆ, ಆದರ್ಶ ವಿವಾಹಕ್ಕೆ ಒಳಗಾಗಿರುವ ಇಂದಿನ ನವಜೋಡಿಗಳು ಮುಂದಿನ ಜನರಿಗೆ ದಾರಿ ದೀಪವಾಗಬೇಕು.’

ಚಿತ್ರದುರ್ಗ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ಎರಡು ಜತೆ ಅಂತರ್ಜಾತಿ ಹಾಗೂ ಆಂಧ್ರಪ್ರದೇಶದ ಒಂದು ಜೋಡಿ ಸೇರಿದಂತೆ ಒಟ್ಟು ೧೪ ಜೋಡಿಗಳ ವಿವಾಹವನ್ನು ನೆರವೇರಿಸಲಾಯಿತು.

ಮಧುರಂಜನ್ (ಶೆಟ್ಟಿಬಣಜಿಗ)-ಮೇಘ ಎಸ್.(ಆದಿಕರ್ನಾಟಕ), ಎಂ.ಪುನೀತ (ನಾಯರ್) – ಸಿಂಚನ (ಆದಿಕರ್ನಾಟಕ) ಜಾತಿ ಕಟ್ಟಳೆಯನ್ನು ಮೀಟಿಮೀರಿ ಜೊತೆಯಾದ ನವ ದಂಪತಿಗಳು.

ಶ್ರೀ ಮಠದಲ್ಲಿ ನಡೆದ ೩೫ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ.ಎಸ್. ಶಂಕರ್ ಅವರು ವಿವಾಹಗಳು ಸರಳವಾಗಿರಬೇಕು. ಬದುಕನ್ನು ಸರಳಗೊಳಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಶ್ರೇಷ್ಠ ದಾರಿ ಮಾಡಿಕೊಡಬೇಕು. ಬಸವಾದಿ ಪ್ರಮಥರ ಆಶಯಗಳನ್ನು ಇಂದು ಈಡೇರಿಸಬೇಕಿದೆ.

ಬಸವ ಪರಂಪರೆಯ ಮಠಮಾನ್ಯಗಳು ವಚನಕಾರರ ವಿಚಾರಧಾರೆಗಳನ್ನು ಸಮಾಜಕ್ಕೆ ನೀಡುತ್ತಿವೆ. ಶ್ರೀ ಮಠದಲ್ಲಿ ೩೫ ವರ್ಷಗಳಿಂದ ನಿರಂತರವಾಗಿ ವಿವಾಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ. ವ್ಯಕ್ತಿಯ ವರ್ತನೆ, ಅಂತರಂಗದ ಆಲೋಚನೆಗಳು ಇತರರಿಗೆ ನೋವಾಗದಂತಿರಬೇಕು. ಮಾನವ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ವಚನ ಸಾಹಿತ್ಯ ಇಂದಿಗೂ ಸಹ ನಮ್ಮನ್ನು ಬೆಳಕಿನೆಡೆಗೆ, ಉತ್ತಮ ಬದುಕಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸಾರ್ವಜನಿಕವಾಗಿ ಗುರುತಿಸಿಕೊಂಡಿರುವುದರಿಂದ ಶ್ರೀಮಠವು ಜನಸಾಮಾನ್ಯರಿಗೆ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಪ್ರತಿತಿಂಗಳು ನಡೆಸುತ್ತಿದೆ. ದುಂದುವೆಚ್ಚ ಮಾಡದೆ, ಆದರ್ಶ ವಿವಾಹಕ್ಕೆ ಒಳಗಾಗಿರುವ ಇಂದಿನ ನವಜೋಡಿಗಳು ಮುಂದಿನ ಜನರಿಗೆ ದಾರಿ ದೀಪವಾಗಬೇಕು. ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಇಂತಹ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ನಾವು ಇತರರಿಗೆ ಮಾದರಿಯಾಗುವಂತೆ ಬದುಕಬೇಕೆಂದರು.

ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಸಂಸಾರ ಎನ್ನುವುದು ಸಾಗರ ಇದ್ದ ಹಾಗೆ. ಸಂಸಾರದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕು ಎಂದು ಹೇಳಿದರು.

ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಮಹಾಮನೆಯಲ್ಲಿ ಎಲ್ಲರನ್ನು ನಮ್ಮವರು ಎಂದು ಭಾವಿಸುತ್ತಿದ್ದರು. ಇಂತಹ ಸಾಮೂಹಿಕ ಮಹೋತ್ಸವವು ಕೂಡ ಅದಕ್ಕೆ ಉದಾಹರಣೆಯಾಗುತ್ತದೆ. ಬದುಕಿನಲ್ಲಿ ಸಹೋದರತೆ, ಸಮಾನತೆಯಿಂದ ವರ್ತಿಸಬೇಕು. ಯಾವುದೇ ಕಾಯಕ ಕೀಳಲ್ಲ. ಈ ದೇಹ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯಿಂದ ಕೂಡಿರಬೇಕು. ಅಂತರಂಗವನ್ನು ಒಲಿಸಿಕೊಳ್ಳಬೇಕು. ಅರಿವನ್ನು ಆಚರಣೆಗೆ ತರಬೇಕು. ತಿಂಗಳುಗಳು ಸಹ ಮನುಷ್ಯ ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತವೆಂದು ಕನ್ನಡ ತಿಂಗಳುಗಳ ಮಹತ್ವವನ್ನು ತಿಳಿಸಿದರು.

ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥನೆ ಮಾಡಿದರು. ವಿಜಯದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *