ಚಿತ್ರದುರ್ಗ
ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಗಸ್ಟ್ 16ರಿಂದ ಅಕ್ಟೊಬರ್ 22ರವರೆಗೆ 12ನೇ ಶತಮಾನದ ವಚನಕಾರ್ತಿಯರ ಪಥದರ್ಶನ ಕಾರ್ಯಕ್ರಮವು ನಡೆಯಲಿದೆ.
೧೨ನೇ ಶತಮಾನದಲ್ಲಿ ಅನುಭವ ಮಂಟಪದ ಖ್ಯಾತಿಗೆ ಮಾರುಹೋಗಿ ರಾಷ್ಟ್ರ ಹೊರರಾಷ್ಟಗಳಿಂದ ಶರಣರು ಶರಣೆಯರು ಬಂದರು. ಅವರಲ್ಲಿ ಮಹಿಳೆಯರು ಸಹ ವಚನ ಚಳವಳಿಯಲ್ಲಿ ಭಾಗವಹಿಸಿದ್ದು ಐತಿಹಾಸಿಕ ಮಹತ್ವದ ಸಂಗತಿಯಾಗಿದೆ.
ಕನ್ನಡದ ಮೊಟ್ಟಮೊದಲ ಕವಯಿತ್ರಿ ಎಂಬ ಅಭಿದಾನಕ್ಕೆ ಅಕ್ಕಮಹಾದೇವಿ ಶ್ರೇಷ್ಠ ನಿದರ್ಶನ. ಅವರೊಂದಿಗೆ 33 ವಚನಕಾರ್ತಿಯರು ತಮ್ಮ ಕಾಯಕ ಕಸುಬಿನೊಂದಿಗೆ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದೂ ಅಲ್ಲದೆ ವಚನ ರಚನೆ ಮಾಡಿದ್ದು ಅಂದಿನ ಹೆಗ್ಗಳಿಕೆಯಾಗಿದೆ.
ಅವರಲ್ಲಿ ಶರಣೆಯರಾದ ಮುಕ್ತಾಯಕ್ಕ, ಅಮುಗೆ ರಾಯಮ್ಮ, ಸತ್ಯಕ್ಕ, ಕೊಟ್ಟಣದ ಸೋಮಮ್ಮ, ನೀಲಾಂಬಿಕೆ, ದುಗ್ಗಳೆ, ಗಂಗಾಂಬಿಕೆ, ಹಡಪದ ಲಿಂಗಮ್ಮ, ಮೋಳಿಗೆ ಮಹಾದೇವಿ, ಕದಿರೆ ಕಾಯಕದ ಕಾಳವ್ವೆ, ಆಯ್ದಕ್ಕಿ ಲಕ್ಕಮ್ಮ, ಕನ್ನಡಿಕಾಯಕದ ರೇಮಮ್ಮ, ಬೋಂತಾದೇವಿ, ಕದಿರೆ ರೆಮ್ಮವ್ವೆ ಅವರ ವ್ಯಕ್ತಿತ್ವ ಹಾಗೂ ಸಾಧನೆಯ ವಿಷಯಾವಲೋಕನ ನಡೆಯಲಿದೆ.
ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಮಹಿಳೆಯರು ಉಪನ್ಯಾಸ ನೀಡಲಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಕ್ಟೊಬರ್ 23ರಂದು ನಡೆಯುವ ಸಮಾರೋಪದಲ್ಲಿ ಲಿಂ. ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಜೀವನಸಾಧನೆಯ ಪಥದರ್ಶನ ಕಾರ್ಯಕ್ರಮ ನಡೆಯಲಿದೆ.