ಚಿತ್ರದುರ್ಗ
10 ವರ್ಷಗಳ ನಂತರ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಬರುತ್ತಿದ್ದಾರೆ.
ಬಸವಕಲ್ಯಾಣದ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಸಂಕಿರಣಗಳು ಚಿಂತನ, ವಚನ ಗಾಯಕ, ರೂಪಕ ಚಟುವಟಿಕೆಗಳು ಶನಿವಾರ ಹಾಗೂ ಭಾನುವಾರ ನಡೆಯಲಿವೆ. ಪ್ರತಿ ದಿನ ಕಾರ್ಯಕ್ರಮಗಳಲ್ಲಿ 15-25,000 ಜನ ಸೇರುವ ನಿರೀಕ್ಷೆಯಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಮೊದಲು ತಿಳಿಸಲಾಗಿತ್ತು. ಈಗ ಅವರ ಬದಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆಂದು ಕೇಳಿ ಬರುತ್ತಿದೆ. ಪರಿಷತ್ ಗೌರವಾಧ್ಯಕ್ಷರಾದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ಮಹಾಂತ ರುದ್ರೇಶ್ವರ ಸ್ವಾಮೀಜಿ, ರಾವಂದೂರು ಮೋಕ್ಷಪತಿ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬ್ಯಾಡಗಿ ಮುಪ್ಪಿನಸ್ವಾಮಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ರಾಷ್ಟ್ರಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣದ ನಂತರ ಬೆಳಿಗ್ಗೆ 10ಕ್ಕೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 11ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತೋಂಟದ ಸಿದ್ಧರಾಮ ಸ್ವಾಮೀಜಿ, ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಮುರುಘಾ ಮಠ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಗಣಿ ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದ ಗೋವಿಂದ ಕಾರಜೋಳ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಸಿ.ವೀರೇಂದ್ರ , ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕರಾದ, ಎಂ.ಚಂದ್ರಪ್ಪ, ವೈ.ಎನ್. ಗೋಪಾಲಕೃಷ್ಣ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ದಾವಣಗೆರೆ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಆನಂದ ಪಾಟೀಲ ಮತ್ತು ಸಂಗಡಿಗರಿಂದ ವಚನ ಸಂಗೀತ, ನಾಟ್ಯರಂಜನಿ ನೃತ್ಯ ಕಲಾಕೇಂದ್ರದ ನಂದಿನಿ ಶಿವಪ್ರಕಾಶ್ ಇವರಿಂದ ನೃತ್ಯ ರೂಪಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 4 ಗಂಟೆಗೆ ‘ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ವಿಚಾರ ಕುರಿತು ಚಿಂತನಗೋಷ್ಠಿ ನಡೆಯಲಿದೆ. ಹರಿಹರದ ವಚನಾನಂದ ಸ್ವಾಮೀಜಿ ಯೋಗಿವೇಮನ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಯಶ್ರೀ ಸಬರದ ಅಧ್ಯಕ್ಷತೆ ವಹಿಸುವರು. ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಭಾಗವಹಿಸವರು.
ಕೆ.ಲಲಿತಾ ಹೊಸಪೇಟೆ ಆಶಯ ನುಡಿಗಳನ್ನಾಡಲಿದ್ದು ವಿಜಯಾದೇವಿ ವಸುಂದರಾ ಭೂಪತಿ ಉಪನ್ಯಾಸ ನೀಡುವರು. ನಂತರ ಆನಂದ ಪಾಟೀಲ ಮತ್ತು ಸಂಗಡಿಗರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ‘ಶರಣ ಸಾಹಿತ್ಯದತ್ತ ಯುವಜನತೆ’ ವಿಚಾರ ಕುರಿತು ಚಿಂತನಗೋಷ್ಠಿ ನಡೆಯಲಿದೆ. ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸುವರು. ತಾರಿಣಿ ಶುಭದಾಯಿನಿ ಆಶಯ ನುಡಿಗಳನ್ನಾಡುವರು. ಸೋಮನಾಥ್ ಯಾಳವಾರ ಪ್ರಕಾಶ್ ಗಿರಿಮಲ್ಲನವರ್ ಪ್ರಿಯದರ್ಶಿನಿ ಸಾಣೆಕೊಪ್ಪ ಉಪನ್ಯಾಸ ನೀಡುವರು. ದಾವಣಗೆರೆ ಕ.ಸಾ.ಪ ಅಧ್ಯಕ್ಷ ವಾಮದೇವಪ್ಪ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಸಾಹಿತಿ ಸಿ.ಶಿವಲಿಂಗಪ್ಪ ಭಾಗವಹಿಸುವರು.
ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಟ ಮುಖ್ಯಮಂತ್ರಿ ಚಂದ್ರು ಚಾಲನೆ ನೀಡುವರು. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ವೀರಶೈವ ಲಿಂಗಾಯತ ಮಹಾಸಭಾದ ಮಹಡಿ ಶಿವಮೂರ್ತಿ ವಕ್ಛ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷ ಉದ್ಯಮಿ ಕೆ.ಸಿ.ನಾಗರಾಜ್ ರಂಗಕರ್ಮಿ ವೈ.ಡಿ.ಬದಾಮಿ ಮೈಸೂರಿನ ಎಂ.ಚಂದ್ರಶೇಖರ್ ವೀರಶೈವ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಶಿವಕುಮಾರ್ ಭಾಗವಹಿಸುವರು.
ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದ ಸದಸ್ಯರಿಂದ ‘ಜಯದೇವ ಜ್ಯೋತಿ’ ರೂಪಕ ನಡೆಯಲಿದೆ. ಮೈಸೂರು ನಿರಂತರ ಫೌಂಡೇಶನ್ ಕಲಾವಿದರಿಂದ ಬಸವಣ್ಣನ ವಚನಾಧಾರಿತ ದೃಶ್ಯ ರೂಪಕ ‘ಕೂಡಲ ಸಂಗಮ’ ಪ್ರರ್ದಶನ ನಡೆಯಲಿದೆ.
ತುಂಬಾ ಆನಂದದ ವಿಚಾರ ಶ್ರೀಗಳಿಗೆ ಅಬಿನಂದನೆಗಳು ಆದರೆ ಗುರು ಬಸವಣ್ಣನವರು ಮತ್ತು ಅಕ್ಕಮಹಾದೇವಿಯವರ ಪೋಟೋ ನಿಜಲಿಂಗಪ್ಪನವರ ಪೋಟೋಗಿಂತ ಸ್ವಲ್ಪ ಮೇಲೆ ಇರಬೇಕಾಗಿತ್ತು.