ಮುರುಘಾ ಮಠದ ಸಮಿತಿಯಲ್ಲಿ ವಚನ ದರ್ಶನದ ಮಲ್ಲೇಪುರಂ ವೆಂಕಟೇಶ್

ಎಂ. ಎ. ಅರುಣ್
ಎಂ. ಎ. ಅರುಣ್

ಮುರುಘಾ ಮಠದ ಜಯದೇವ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವ ಅಂಗವಾಗಿ ಪ್ರಕಟವಾಗುತ್ತಿರುವ ಸಂಸ್ಮರಣಾ ಗ್ರಂಥ ಸಲಹಾ ಮಂಡಳಿಯ ಸದಸ್ಯರಾಗಿ ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ್ ನೇಮಕವಾಗಿದ್ದಾರೆ. ಪುಸ್ತಕವನ್ನು ಚರ್ಚಿಸಲು ಸೆಪ್ಟೆಂಬರ್ 8 ಚಿತ್ರದುರ್ಗದಲ್ಲಿ ಕರೆದಿದ್ದ ವಿದ್ವಾಂಸರ ಸಭೆಯಲ್ಲಿ ಮಲ್ಲೇಪುರಂ ವೆಂಕಟೇಶ್ ಭಾಗವಹಿಸಿದ್ದರು.

ಬಸವ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವ ವಚನ ದರ್ಶನ ಪುಸ್ತಕಕ್ಕೆ ಮಲ್ಲೇಪುರಂ ವೆಂಕಟೇಶ್ ಮುನ್ನುಡಿ ಬರೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಚನ ದರ್ಶನದ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡರ ಜೊತೆ ವೇದಿಕೆ ಹಂಚಿಕೊಂಡು ಭಾಷಣ ಮಾಡಿದ್ದರು.

ಜೂನ್ ತಿಂಗಳಿಂದ ಇಲ್ಲಿಯವರೆಗೆ ಸಂಘ ಪರಿವಾರ ಪ್ರಾಯೋಜಿತ ವಚನ ದರ್ಶನ ಒಂಬತ್ತು ಜಿಲ್ಲೆಗಳಲ್ಲಿ ಬಿಡುಗಡೆಯಾಗಿದೆ. ಅದು ಬಿಡುಗಡೆಯಾಗಿರುವ ಸ್ಥಳಗಳಲೆಲ್ಲಾ ಬಸವ ಸಂಘಟನೆಗಳು ಪ್ರತಿಭಟಿಸಿವೆ. ಲಿಂಗಾಯತ ಸಮಾಜದ ಒತ್ತಡಕ್ಕೆ ಮಣಿದು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಕಟವಾಗಿದ್ದರೂ ಮೂರು ಸಾವಿರ ಮಠದ ಶ್ರೀಗಳು ಮತ್ತು ಬೇಲಿ ಮಠದ ಶ್ರೀಗಳು ಕಾರ್ಯಕ್ರಮಕ್ಕೆ ಹೋಗಲು ನಿರಾಕರಿಸಿದ್ದರು.

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿಗಳು (ಚಿತ್ರದಲ್ಲಿ) ಮಠದ ಜೊತೆ ಮಲ್ಲೇಪುರಂ ವೆಂಕಟೇಶ್ ಅವರ ಹಳೆಯ ಒಡನಾಟ ಮುಂದುವರೆದಿದೆ ಎಂದರು. ಅವರು ಇರುವುದು ಸಂಪಾದಕ ಮಂಡಳಿಯಲ್ಲಿ ಅಲ್ಲ ಸಲಹಾ ಮಂಡಳಿಯಲ್ಲಿ ಮಾತ್ರ ಎಂದು ತಿಳಿಸಿದರು.

ಮಲ್ಲೇಪುರಂ ವೆಂಕಟೇಶ್ ಮಠದ ಸಂಶೋಧನಾ ಕೇಂದ್ರದ ಜೊತೆ ಬಹಳ ವರ್ಷಗಳಿಂದ ಕೆಲಸ ಮಾಡಿದ್ದಾರೆ, ಮಠದಲ್ಲಿರುವ ಹಸ್ತಪ್ರತಿ, ತಾಳೆಗರಿಗಳ ಮೇಲೆ ಸಂಸ್ಮರಣಾ ಗ್ರಂಥಕ್ಕೆ ಲೇಖನ ಬರೆಯಲಿದ್ದಾರೆ ಎಂದರು.

ವಚನ ದರ್ಶನ ಪುಸ್ತಕದ ವಿರುದ್ಧ ಲಿಂಗಾಯತ ಸಮಾಜ ಪ್ರತಿಭಟಿಸುತ್ತಿರುವ ಸಂಧರ್ಭದಲ್ಲಿ ಸಲಹಾ ಮಂಡಳಿಯಲ್ಲಿ ಮಲ್ಲೇಪುರಂ ವೆಂಕಟೇಶ್ ಅವರ ನೇಮಕ ವಿವಾದ ಹುಟ್ಟಿಸುವುದಿಲ್ಲವೇ ಎಂದು ಕೇಳಿದೆ.

ಮಲ್ಲೇಪುರಂ ವೆಂಕಟೇಶ್ ಅವರು ವಚನ ದರ್ಶನ ಪುಸ್ತಕದಲ್ಲಿ ತಮ್ಮದು ಪ್ರಮುಖ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಬಸವ ಕುಮಾರ ಸ್ವಾಮೀಜಿ ಹೇಳಿದರು.

“ನಿಮ್ಮ ಬಗ್ಗೆ ಎಲ್ಲಾ ಕಡೆ ಅಪಸ್ವರ ಬರುತ್ತಿದೆಯಲ್ಲಾ ಎಂದು ಅವರನ್ನು ಕೇಳಿದೆ. ಅದಕ್ಕವರು
ರಘುನಂದನ್ (ಆರ್ ಎಸ್ ಎಸ್ ಹಿರಿಯ ಪ್ರಚಾರಕ) ಕಳುಹಿಸಿದ ಲೇಖನಗಳಿಗೆ ಮುನ್ನುಡಿ ಬರೆದಿದ್ದೇನೆ ಅಷ್ಟೇ ಎಂದು ಹೇಳಿದರು,” ಎಂದರು.

ವಚನ ದರ್ಶನ ಪುಸ್ತಕದಲ್ಲಿ ಯಾವುದೇ ಬಸವ ವಿರೋಧಿ ಉದ್ದೇಶವಿಲ್ಲ, ವಚನಗಳನ್ನು ಹಿಂದೂ ಧರ್ಮಕ್ಕೆ ಸೇರಿಸುವ ಆಶಯಗಳೂ ಇಲ್ಲ, ಹಿಂದೂ ಅನ್ನುವ ಪದ ಕೂಡ ಬಳಕೆಯಾಗಿಲ್ಲ ಎಂದು ಮಲ್ಲೇಪುರಂ ವೆಂಕಟೇಶ್ ಸ್ವಷ್ಟನೆ ಕೊಟ್ಟಿದ್ದಾರೆ ಎಂದು ಬಸವ ಕುಮಾರ ಸ್ವಾಮೀಜಿ ಹೇಳಿದರು.

ಅವರ ಕೊಟ್ಟಿರುವ ಸ್ಪಷ್ಟನೆಯನ್ನು ನೀವು ಒಪ್ಪಿಕೊಳ್ಳುತೀರಾ ಅಂತ ಕೇಳಿದೆ.

“ನಾನು ವಚನ ದರ್ಶನ ಪುಸ್ತಕ ಓದಿಲ್ಲ, ಅವರ ಭಾಷಣವನ್ನೂ ಕೇಳಿಲ್ಲ. ಪುಸ್ತಕ ಓದಿ ವಚನಗಳನ್ನು ಹಿಂದೂ ಧರ್ಮಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಅನಿಸಿದರೆ ಅದನ್ನು ಖಂಡಿಸುತ್ತೇನೆ ಮತ್ತು ಮಲ್ಲೇಪುರಂ ವೆಂಕಟೇಶ್ ಅವರನ್ನು ನಮ್ಮ ಕಾರ್ಯಕ್ರಮಗಳಿಂದ ಕೈ ಬಿಡುತ್ತೇವೆ,” ಎಂದು ಹೇಳಿದರು.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 4 ರಂದು ವಚನ ದರ್ಶನ ವಿರುದ್ಧ ನಡೆದ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಬಸವ ಕುಮಾರ ಸ್ವಾಮೀಜಿ ಮಾತನಾಡಿದ್ದರು.

ಬಸವ ಸಮಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಟಿ ಆರ್ ಚಂದ್ರಶೇಖರ್ ಮತ್ತು ಉಮೇಶ್ ಎಚ್ ಸಿ ಆಯೋಜಿಸಿದ್ದರು.

ಮುರುಘಾ ಮಠ ಸಮಿತಿಯಲ್ಲಿ ಮಲ್ಲೇಪುರಂ ವೆಂಕಟೇಶ್ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡುತ್ತ ಚಂದ್ರಶೇಖರ್ ಅವರು ಇದೊಂದು ಅನಾಹುತ, ಪ್ರತಿಭಟಿಸಬೇಕಾಗಿರುವ ವಿಷಯ ಎಂದರು.

Share This Article
3 Comments
  • ಮಲ್ಲೇಪುರ ವೆಂಕಟೇಶ್ ಒಂದು ತರ, ಹೇಗೆಂದರೆ,ಬ್ರಾಹ್ಮಮನಶಾಹಿ ದೋರಣೆ,ನಿಲುವನ್ನು,ಅಭಿಪ್ರಾಯವನ್ನು ಕೊನೆಗೆ,ತನ್ನ ಕಾದಂಬರಿಗಳಲ್ಲಿ, ತಿಳಿಸುವ,, ಬೇರೆ ತರಹದ ಎಸ್ ಎಲ್ ಭೈರಪ್ಪ ಇದ್ದಂಗೆ, ಇಲ್ಲಿ ಉಂಡು, ಅಲ್ಲಿಯದರ ಹೆಸರು ಹೇಳುವ ರೀತಿ.
    ಪೂಜ್ಯ ಬಸವಕುಮಾರ ಸ್ವಾಮೀಜಿ ಅಂತವರನ್ನು, ಇಷ್ಟು ಹಚ್ಚಿಕೊಳ್ಳಬಾರದು.

  • ನಿಜಕ್ಕೂ ಇದೊಂದು ಪ್ರತಿಭಟಿಸಬೇಕಾಗಿರುವ ಪುಸ್ತಕ. ಮಲ್ಲೇಪುರಂ ಅವರು ಬಹಳ ಸ್ಪಷ್ಟವಾಗಿ ವಚನಗಳು ಉಪನಿಷತ್ತಿನ ಮುಂದುವರಿದ ಮತ್ತು ಅಂತಹುದೇ ಆಶಯಗಳನ್ನಿಟ್ಟುಕೊಂಡಿರುವ ಸಾಹಿತ್ಯವೆ ಹೊರತು ವೇದ ಮತ್ತು ಉಪನಿಷತ್ತಿನ ಆಶಯಗಳಿಗೆ ಹೊರತಾಗಿಲ್ಲ ಅನ್ನುವ ಅರ್ಥ ಬರುವ ಮಾತುಗಳನ್ನು ಆಡುತ್ತಾ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವೇ ಅನ್ನುವ ವಿಷಯಕ್ಕೆ ಒಟ್ಟುಕೊಟ್ಟಿರುವುದು ಎದ್ದು ಕಾಣುತ್ತದೆ.

  • ಬಸವಕುಮಾರ ಸ್ವಾಮೀಜಿ ಅತ್ತ-ಇತ್ತ ನಿಲ್ಲಿಸಿ ಮುಂದೆ ಆರ್ ಎಸ್ ಎಸ್ ಸಿದ್ಧಾಂತ ಬಾಹಿರಂಗವಾಗಿ ಪ್ರತಿಭಟಿಸಿದರೆ ಬೆಲೆ ಇಲ್ಲದಿದ್ದರೆ ಇಲ್ಲ!

Leave a Reply

Your email address will not be published. Required fields are marked *