ಮೈಸೂರು
ಮೊದಲನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶರಣರು ನಿರ್ದೋಷಿ ಎಂದು ಬಂದಿರುವ ತೀರ್ಪಿನ ವಿರುದ್ಧ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟಾನ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ತೀರ್ಪು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಬೇಕು. ಸರ್ಕಾರದ ಮೇಲ್ಮನವಿ ಹಾಕದೇ ಇದ್ದರೆ ನಾವೇ ಸಂತ್ರಸ್ತ ಬಾಲಕಿಯರ ಪರ ನಿಂತು ಅರ್ಜಿ ಹಾಕುತ್ತೇವೆ”, ಎಂದು ಸ್ಟ್ಯಾನ್ಲಿ ಹೇಳಿದರು.
ಮುರುಘಾ ಶರಣರ ಪ್ರಕರಣದಲ್ಲಿ ಒಡನಾಡಿ ಸಂಸ್ಥೆ ಮಕ್ಕಳ ಪರ ಹೋರಾಡುತ್ತಿದೆ.
ನಗರದಲ್ಲಿ ಮಾಧ್ಯಮಗಳ ಜೊತೆ ಬುಧವಾರ ಮಾತನಾಡಿದ ಅವರು “ನ್ಯಾಯಾಲಯ ಏನು ಹೇಳಿದೆಯೋ ಆ ತೀರ್ಪನ್ನು ಮೊದಲು ಓದಬೇಕು. ವಕೀಲರ ಜೊತೆ ಸೇರಿ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ. ಆದರೆ ಈ ತೀರ್ಪನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಹಣ, ಅಧಿಕಾರ ಇದ್ದರೆ ಗೆದ್ದುಕೊಂಡು ಬರಬಹುದು ಎಂಬ ಸಂದೇಶವನ್ನು ಈ ತೀರ್ಪು ನೀಡುತ್ತದೆ. ಆರೋಪಿಗಳು ಕುಣಿದಾಡುತ್ತಾ ಹೊರಗೆ ಬಂದರೆ ನೊಂದ ಮಕ್ಕಳಿಗೆ ಧೈರ್ಯ ಕುಗ್ಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಡೀ ವ್ಯವಸ್ಥೆಯೆ ಆರೋಪಿಗಳ ಪರ ನಿಂತಿತು. ಸಂತ್ರಸ್ತ ಮಕ್ಕಳ ಪರ ಯಾರು ನಿಲ್ಲಲಿಲ್ಲ. ತನಿಖೆಯಲ್ಲಿ ನೂರಾರು ತಪ್ಪು ಮಾಡಲಾಗಿದೆ. 90 ಮಕ್ಕಳ ಕೌನ್ಸೆಲಿಂಗ್ ಒಂದೇ ದಿನಕ್ಕೆ ಮಾಡಿದ್ದಾರೆ. ಇದು ಸಾಧ್ಯನಾ? ಮಹಜರಿಗೆ ಮಕ್ಕಳನ್ನು ಕರೆದೊಯ್ದು ಒತ್ತಡ ಹಾಕಿದ್ದಾರೆ. ಒತ್ತಡ, ಆಮಿಷ, ಭಯ, ಧರ್ಮ ಎಲ್ಲವೂ ಇಲ್ಲಿ ಕೆಲಸ ಮಾಡಿದೆ” ಎಂದು ಸ್ಟಾನ್ಲಿ ಆರೋಪಿಸಿದರು.
ತನಿಖಾಧಿಕಾರಿಗಳು ಸಾಕ್ಷಿಯನ್ನು ಕೊಡುವಲ್ಲಿ ಬಹಳಷ್ಟು ಎಡವಿದ್ದರು. ನಾವು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆಯೇ ಷಡ್ಯಂತ್ರದ ಕೇಸ್ ಹಾಕಿದ್ದರು ಎಂದು ಒಡನಾಡಿ ಸಂಸ್ಥೆಯ ಮತ್ತೊಬ್ಬ ಮುಖ್ಯಸ್ಥ ಪರಶು ಹೇಳಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಮಕ್ಕಳ ಧ್ವನಿಯನ್ನು ಸರ್ಕಾರ ಕೇಳಬೇಕಿತ್ತು. ಆದರೆ ಈ ಪ್ರಕರಣವನ್ನು ದುರ್ಬಲ ಮಾಡುತ್ತಲೇ ಬಂದಿದ್ದರು. ವಿಚಾರಣಾ ಹಂತದಲ್ಲೇ ಈ ಪ್ರಕರಣವನ್ನು ದುರ್ಬಲ ಮಾಡಿದ್ದು ಗೊತ್ತಾಗಿತ್ತು. ಪೋಕ್ಸೋ ಕೇಸ್‌ಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವುದು ಮಕ್ಕಳ ಮೇಲಿನ ಅಪರಾಧಗಳನ್ನು ಪ್ರೋತ್ಸಾಹಿಸುತ್ತದೆ, ಎಂದು ಹೇಳಿದರು.
