ಮುಸ್ತಾಪುರ ಗ್ರಾಮದಲ್ಲಿ ವಚನ ವಿಜಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಸದೃಢ ಸಮಾಜ ಕಟ್ಟಲು ವಚನಗ್ರಂಥ ಹೊತ್ತ ಪ್ರಭುದೇವ ಸ್ವಾಮೀಜಿ

ಹುಲುಸೂರು:

ಪಟ್ಟಣಕ್ಕೆ ಪಂಚರಾತ್ರಿ ಹಳ್ಳಿಗಳಿಗೆ ಏಕರಾತ್ರಿ ಎನ್ನುವ ಮಾತು ಮೊದಲಿನಿಂದಲೂ ನಾವೆಲ್ಲ ಕೆಳುತ್ತಾ ಬಂದಿದ್ದೇವೆ. ಆದರೆ ಪ್ರಭುದೇವ ಮಹಾಸ್ವಾಮೀಜಿ ಹಳ್ಳಿಗಳಿಗೆ ಪಂಚರಾತ್ರಿಯಂತೆ ಪ್ರವಚನಗಳು ಮಾಡುತ್ತ ಇಷ್ಟಲಿಂಗ ದೀಕ್ಷೆ ನೀಡುತ್ತ ತಲೆಮೇಲೆ ವಚನಗ್ರಂಥ ಹೊತ್ತು ವಚನಗಳು ಮೆರೆಸುತ್ತ ವಚನ ವಿಜಯೋತ್ಸವ ಆಚರಿಸುತ್ತ ಸದೃಢ ಸಮಾಜ ಕಟ್ಟಲು 770 ಪ್ರವಚನಗಳ ಸಂಕಲ್ಪ ಹೊತ್ತು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಸಾಹಿತಿ ರಮೇಶ ಮಠಪತಿ ತಿಳಿಸಿದರು.

ಹುಲುಸೂರು ತಾಲೂಕಿನ ಮುಸ್ತಾಪುರ ಗ್ರಾಮ ಅತ್ಯಂತ ಕುಗ್ರಾಮ. ಕೇವಲ 60 ಮನೆಗಳು ಹೊಂದಿರುವ ಇಂಥ ಅತಿ ಚಿಕ್ಕಗ್ರಾಮದಲ್ಲಿಯೂ ಐದು ದಿನಗಳ ಕಾಲ ‘ವಚನ ಜೀವನ’ ಪ್ರವಚನ ನೀಡಿ ಜಾತಿ-ಮತ -ಪಂಥ ನೋಡದೆ, ಬಡವ- ಬಲ್ಲಿದ ಎನ್ನದೆ, ದೊಡ್ಡಊರು- ಚಿಕ್ಕಊರು ಎಂಬ ಭೇದ ಮಾಡದೆ, ಪ್ರತಿಯೊಬ್ಬರ ಮನದಾಳದಲ್ಲಿ ವಚನಗಳು ಬಿತ್ತುವ ಕಾರ್ಯ ಮಾಡಿರುವುದು ಅತ್ಯಂತ ಮಾದರಿ ಕಾರ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿರುವ ಮಾಣಿಕಪ್ಪ ಗೋರನಾಳೆ ಅವರು, ಮನುಕುಲವು ಇಂದು ಭೌತಿಕ ಸಂಪತ್ತಿನಿಂದ ಬಳಲುತ್ತಿಲ್ಲ, ಮಾನಸಿಕ ನೆಮ್ಮದಿಯಿಂದ ಬಳಲುತ್ತಿದೆ. ಎಲ್ಲವೂ ಇದ್ದ ಏನು ಇಲ್ಲದಂತೆ ಭಾಸವಾಗಲು ಕಾರಣ ಧರ್ಮ ಮಾರ್ಗದಲ್ಲಿ ನಡೆಯದಿರುವುದು. ಬಂಗಾರಕ್ಕೆ ಮಹತ್ವ ಕೊಡುವ ನಾವು ಇಷ್ಟಲಿಂಗಕ್ಕೆ ಮಹತ್ವ ನೀಡಲಾರೆವು. ಇಷ್ಟಲಿಂಗದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಚನ್ನಬಸಪ್ಪ ಪತಂಗೆಯವರು ಅಂತರಂಗ ಬಹಿರಂಗ ಶುದ್ಧವಾಗಬೇಕಾದರೆ ಬಸವಣ್ಣನವರ ಸಪ್ತಸೂತ್ರದ ವಚನದಂತೆ ಬದುಕಬೇಕು. ಪ್ರತಿಯೊಬ್ಬ ಮಗು ವಚನ ಓದಬೇಕು. ವಚನ ಓದುವ ಹವ್ಯಾಸ ಪಾಲಕರು ಮಕ್ಕಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ, ಜೀವನ ಆಶಾಶ್ವತವಾದುದ್ದು, ಬಸವಣ್ಣನವರು ಹೇಳುವಂತೆ ನೆರೆ ಕೆನ್ನೆಗೆ ತೆರೆಗಲ್ಲಕ್ಕೆ ಶರೀರ ಗೂಡು ಹೋಗದ ಮುನ್ನ ಲಿಂಗವ ಪೂಜಿಸು ಎನ್ನುವ ವಚನದಂತೆ ಶಕ್ತಿಯಿದ್ದಾಗಲೇ ಲಿಂಗಪೂಜೆ, ಜಂಗಮಸೇವೆ ಮಾಡಬೇಕು.

ಶಕ್ತಿ ಕಳೆದು ಹೋದಮೇಲೆ ಏನು ಮಾಡಲಾಗದು. ಅರಿವು ಮೂಡಿಸುವ ಗುರುವಿನ ಗರಡಿಯಲ್ಲಿ ಪಳಗಬೇಕು. ವಚನಗಳ ಮಹತ್ವ ಅರಿತ ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣತಾಯಿಯವರು ನಾಡಿನಾದ್ಯಂತ ಎಲ್ಲೆಲ್ಲಿ ಪ್ರವಚನಗಳು ಮಾಡುತ್ತಿದ್ದರೊ ಅಲ್ಲಲ್ಲಿ ವಚನ ವಿಜಯೋತ್ಸವ ಆಚರಿಸುತ್ತಿದ್ದರು.

ಕಲಬುರಗಿ, ಲೋಕಾಪುರ, ಉಳವಿ, ಕೂಡಲಸಂಗಮ, ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸಿದವರು ಅಕ್ಕನವರು. ಅವರ ಸಂಕಲ್ಪದಂತೆ ವಚನ ವಿಜಯೋತ್ಸವ ಇಂದು ಹಳ್ಳಿ ಹಳ್ಳಿಗಳಲ್ಲಿ ಆಚರಿಸುತ್ತಾ ವಚನಗಳ ಮಹತ್ವ ಸಾರುವ ಉದ್ದೇಶದಿಂದ 770 ಪ್ರವಚನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಂದು ಗ್ರಾಮದಲ್ಲಿ ಕನಿಷ್ಠ ಐದುದಿನ ಪ್ರವಚನ ಮಾಡಿದರೆ ಅದು ಒಂದು ಪ್ರವಚನ. ದುಶ್ಚಟಗಳ ಭಿಕ್ಷೆ, ಇಷ್ಟಲಿಂಗ ದೀಕ್ಷೆ, ವಚನ ಸಾಹಿತ್ಯ ಮೆರವಣಿಗೆ ಮಾಡುತ್ತ ವಚನ ವಿಜಯೋತ್ಸವ ಆಚರಿಸುವುದೇ ಅಭಿಯಾನದ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಗೊರಟಾ ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷರಾದ ವಿಜಯಲಕ್ಷ್ಮಿ ರಾಜೋಳೆ, ಧನ್ನೂರ ಕೆ. ಗ್ರಾಮದ ನೀಲಮ್ಮನ ಬಳಗದ ಅಧ್ಯಕ್ಷರಾದ ಸಂಗೀತಾ ಬಿರಾದಾರ, ಲಿಂಗಾಯತ ಸೇವಾದಳದ ಅಧ್ಯಕ್ಷರಾದ ಸುಪ್ರೀತ ಪತಂಗೆ ಹಾಗೂ ಶರಣೆ ಗೋದಾವರಿ ತಾಯಿಯವರು ಭಾಗವಹಿಸಿದರು.

ಗ್ರಾಮದ ಹಿರಿಯರಾದ ದಯಾನಂದ ಪಾಟೀಲ, ಮಾರುತಿ ಪಾಟೀಲ, ರೇವಣಪ್ಪ ಪಾಟೀಲ, ಪ್ರಕಾಶ ಪಾಟೀಲ, ಲಹು ಜ್ಯಾಮದಾರ, ಬಾಲಾಜಿ ಪಾಟೀಲ ಮುಂತಾದವರು ಭಾಗವಹಿಸಿದರು. ಪ್ರಜ್ವಲ ಪತಂಗೆ ನಿರೂಪಣೆ ಗೈದರು. ಗ್ರಾಮದ ಹಿರಿಯರು, ಮಕ್ಕಳು, ತಾಯಂದಿರು ತಲೆಮೇಲೆ ವಚನ ಗ್ರಂಥ ಹೊತ್ತು ಆನಂದದಿಂದ ಹೆಜ್ಜೆ ಹಾಕಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *