ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದ ಲಿಂಗಾಯತ ಧರ್ಮದ ನಿಜಾಚರಣೆ ಕಮ್ಮಟ

ನಾಗರತ್ನ ಜಿ ಕೆ
ನಾಗರತ್ನ ಜಿ ಕೆ

ವಚನಾಧಾರಿತ ಆಚರಣೆಗಳು ಮತ್ತು ಸಂಸ್ಕಾರಗಳು ಕುರಿತು ಪ್ರಾತ್ಯಕ್ಷಿಕೆ ಮತ್ತು ಪಾಠಗಳು ಜರುಗಿದವು.

ಮೈಸೂರು

ನಗರದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಪಂಚಗವಿ ಮಠದಲ್ಲಿ “ಲಿಂಗಾಯತ ಧರ್ಮದ ವಚನಾಧಾರಿತ ನಿಜಾಚರಣೆಯ ಕಮ್ಮಟ” ಶನಿವಾರ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕ್ರಮ ಷಟ್ ಸ್ಥಳ ಧ್ವಜಾರೋಹಣದೊಂದಿಗೆ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮುಖಾಂತರ ಉದ್ಘಾಟನೆಯಾಯಿತು.

ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಗಳು ಹೊಸಮಠ ಮೈಸೂರು ಇವರು ಅಲಂಕರಿಸಿದ್ದರು.

ಉದ್ಘಾಟನೆಯನ್ನು ನೆರವೇರಿಸಿದ ನೀಲಕಂಠ ಸ್ವಾಮಿ ಮಠದ ಪೂಜ್ಯ ಶ್ರೀ ಸಿದ್ದಮಲ್ಲ ಮಹಾಸ್ವಾಮಿಗಳು ಕನ್ನಡದ ಜೊತೆ ಏಳು ಭಾಷೆಗಳನ್ನ ಅರಿತಿದ್ದ ಪಂಚಗವಿ ಮಠದ ಗೌರಿಶಂಕರ ಮಹಾಸ್ವಾಮಿಗಳು ಸಂಸ್ಕೃತದಲ್ಲಿ ಬಸವಾನಂದ ಲಹರಿ, ಅಕ್ಕಮಹಾದೇವಿಯ ಚಂಪೂ ಕಾವ್ಯ, ಗ್ರಂಥಗಳನ್ನು ಬರೆದಿದ್ದರು ಎಂದು ಹೇಳಿದರು.

ಲಿಂಗಾಯತನಾಗಿ ಹೇಗೆ ಜೀವನ ನಡೆಸಬೇಕು ಎಂದು ವಿವರಿಸುತ್ತಾ ಎಂಟನೇ ತಿಂಗಳಲ್ಲಿಯೇ ಗರ್ಭಸ್ಥ ಶಿಶುವಿಗೆ ಲಿಂಗಧಾರಣೆಯನ್ನು ಮಾಡಬೇಕು, ಮಗು ಲಿಂಗಧಾರಿಯಾಗಿ ಭೂಮಿಗೆ ಬರಬೇಕು, ಎಂಟನೇ ವರ್ಷಕ್ಕೆಲ್ಲ ಮಗುವಿಗೆ ಲಿಂಗ ದೀಕ್ಷೆಯನ್ನು ಕೊಟ್ಟು ಲಿಂಗವನ್ನು ಆಯತ ಮಾಡಿಕೊಂಡು ಲಿಂಗಾಯತನಾಗಿ ಬದುಕನ್ನು ಸಾಗಿಸಬೇಕು, ಪ್ರತಿಯೊಬ್ಬ ಲಿಂಗಾಯತನು ದಿನಕ್ಕೆ 10 ವಚನಗಳನ್ನಾದರು ಪಠಿಸಬೇಕು ಎಂದು ಹೇಳಿದರು.

ಕುದೇರು ಮಠದ ಶ್ರೀ ಗುರು ಶಾಂತ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಾಯಿಯೇ ಮೊದಲ ಗುರು. ಗುರುವಿಗಿಂತ ಮೊದಲು ತಾಯಿಯಾದವಳು ಮಕ್ಕಳಿಗೆ ನಿಜ ಲಿಂಗಾಯತನಾಗಿ ಹೇಗೆ ಜೀವಿಸಬೇಕು ಎನ್ನುವುದನ್ನು ತಿಳಿಸಬೇಕು ಎಂದು ಹೇಳಿದರು.

ವಚನಮೂರ್ತಿಗಳಾದ ಪಿ. ರುದ್ರಪ್ಪ, ಮಡಿವಾಳಪ್ಪ ಸಂಗೊಳ್ಳಿ, ಎಸ್.ಎನ್. ಅರಬಾವಿ ಶರಣರು ಕಮ್ಮಟ ನಡೆಸಿಕೊಟ್ಟರು. ಅಷ್ಟಾವರಣ ಮತ್ತು ಪಂಚಾಚಾರಗಳ ಸ್ಥೂಲ ಪರಿಚಯ, ಲಿಂಗಾಯತ ಧರ್ಮದ ಆಚರಣೆಗಳು ಮತ್ತು ಸಂಸ್ಕಾರದ ಪರಿಚಯ, ಕಲ್ಯಾಣ ಮಹೋತ್ಸವದ ಚಿಂತನ ಹಾಗೂ ಕಾರ್ಯವಿಧಾನ, ಗರ್ಭಕ್ಕೆ ಲಿಂಗಧಾರಣೆ ಮತ್ತು ನಾಮಕರಣ, ಷಟಸ್ಥಲ ಸಿದ್ಧಾಂತ, ಅಂತ್ಯ ಸಂಸ್ಕಾರ ಮತ್ತು ಸ್ಮರಣೋತ್ಸವ, ಮತ್ತಿತರ ಆಚರಣೆಗಳು ಮತ್ತು ಸಂಸ್ಕಾರಗಳು ಕುರಿತು ಪ್ರಾತ್ಯಕ್ಷಿಕೆ ಮತ್ತು ಪಾಠಗಳು ಜರುಗಿದವು.

Share This Article
1 Comment

Leave a Reply

Your email address will not be published. Required fields are marked *