ಮೈಸೂರು:
ಮೈಸೂರಿನ ಸರ್ವಮಂಗಳ ಕೆ.ಪಿ ಮತ್ತು ಲೋಕೇಶ ಅವರ ಪುತ್ರ ”ಬಿಪಿನ್ ಎಸ್.ಎಲ್” ಅವರ ಜೊತೆ ಹೆಚ್.ಜಿ. ಅಮೃತಾಂಭ ಮತ್ತು ಎಸ್. ನಂಜುಂಡಸ್ವಾಮಿ ಅವರ ಪುತ್ರಿ ”ತೇಜಸ್ವಿನಿ ಬಿ.ಎನ್” ಅವರ ವಚನ ಕಲ್ಯಾಣ ಮಹೋತ್ಸವ ಕಾಲಭೈರವೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ನವೆಂಬರ್ 14ರಂದು ಅರ್ಥಪೂರ್ಣವಾಗಿ ನಡೆಯಿತು.

ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಂಹಾತಪ್ಪ ಸ್ವಾಮಿಗಳು ನೇತೃತ್ವ ವಹಿಸಿ ನೂತನ ದಂಪತಿಗೆ ಪ್ರಮಾಣ ವಚನ ಬೋಧಿಸಿದರು.

ಪೂಜ್ಯರು ಅನುಭಾವ ನೀಡುತ್ತ, ಲಿಂಗಾಯತರು ಏಕೆ ಲಿಂಗಾಯತ ಸಿದ್ದಾಂತವನ್ನು ಪಾಲಿಸಬೇಕೆಂದು ತಿಳಿಸಿದರು. ಹಾಗೇ ಅನ್ನದ ಮಹತ್ವದ ಬಗ್ಗೆ ತಿಳಿಹೇಳಿದರು.

ವಚನ ಕ್ರಿಯಾಮೂರ್ತಿ ನಿಂಗರಾಜಪ್ಪ ಹಾಗು ಮಲ್ಲಯ್ಯ ಗಣಾಚಾರಿ ಅವರು ಮದುವೆ ನಡೆಸಿಕೊಟ್ಟರು. ವಿಶ್ವ ಬಸವಸೇನೆ, ಬಸವ ದಳ, ಅಕ್ಕನ ಬಳಗದ ಕಾರ್ಯಕರ್ತರು ಮತ್ತು ಬಸವಾಭಿಮಾನಿಗಳು ಸಾಕ್ಷಿಕರಿಸಿದರು.

ಇದೇ ಸಂದರ್ಭದಲ್ಲಿ ನಿಂಗರಾಜಪ್ಪ, ಡ್ಯಾತಹಳ್ಳಿ ಮಾದಪ್ಪ ಮಾತನಾಡುತ್ತ, ವ್ಯವಸಾಯ ಮಾಡುವ ಹುಡುಗರಿಗೆ ಹೆಣ್ಣು ಕೊಡಿ ಅವರು ಬದುಕು ಕಟ್ಟಿಕೊಳ್ಳಲಿ. ಆ ಮೂಲಕ ವ್ಯವಸಾಯ ಉಳಿಯಲಿ ಎಂದು ನೆರೆದವರಲ್ಲಿ ಕಳಕಳಿಯಿಂದ ಬೇಡಿಕೊಂಡರು.

ವಚನ ಸಂಗೀತವನ್ನು ಇಳಕಲ್ಲನ ವಿನಯಾ ಹರಿಹರ, ಕಜ್ಜಿಹುಂಡಿ ಗುರುಪ್ರಸಾದ ಹಾಗೂ ತಂಡದವರು ನಡೆಸಿಕೊಟ್ಟರು. ಎರಡು ಮನೆತನದ ಬಂಧು-ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಪುಷ್ಪ ಹಾಕಿ ಶುಭಹಾರೈಸಿದರು. ಆರಂಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ‘ಬಿಪಿನ್’ ಮತ್ತು ‘ತೇಜಸ್ವಿನಿ’ ಅವರು ಬಸವಧ್ವಜಾರೋಹಣ ನೆರವೇರಿಸಿದರು.

