ಮೈಸೂರು ಭಾಗದ ಯುವಕರಿಗೆ ಮಾರ್ಗದರ್ಶಕರಾಗಿದ್ದ ವೀರಭದ್ರಪ್ಪ ಶರಣರು

ಬಿ. ಚನ್ನಪ್ಪ
ಬಿ. ಚನ್ನಪ್ಪ

ಬಸವತತ್ವದ ಪ್ರಚಾರಕ್ಕಾಗಿ ನಮ್ಮ ಚಾಮರಾಜನಗರ, ಮೈಸೂರು ಜಿಲ್ಲೆಯ ಕಾರ್ಯಕ್ರಮಗಳಿಗೆ ಸ್ವಂತ ಖರ್ಚಿನಲ್ಲಿ 700 ಕಿ.ಮೀ ಪ್ರಯಾಣ ಮಾಡಿಕೊಂಡು ಬರುತ್ತಿದ್ದರು.

ನಂಜನಗೂಡು

ರಾಜ್ಯಾದ್ಯಂತ ಶರಣತತ್ವ ಕಾರ್ಯಕ್ರಮಗಳನ್ನ ನಡೆಸುವ ಮುಖಾಂತರ ಬಸವತತ್ವದ ವೀರ ಗಣಚಾರಿ ವೀರಭದ್ರಪ್ಪ ಕುರಕುಂದಿ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಬಸವತತ್ವದ ಪ್ರಚಾರಕ್ಕಾಗಿ ನಮ್ಮ ಚಾಮರಾಜನಗರ, ಮೈಸೂರು ಜಿಲ್ಲೆಯ ಕಾರ್ಯಕ್ರಮಗಳಿಗೆ ಸ್ವಂತ ಖರ್ಚಿನಲ್ಲಿ 700 ಕಿ.ಮೀ ಪ್ರಯಾಣ ಮಾಡಿಕೊಂಡು ಬರುತ್ತಿದ್ದರು.

ಇಷ್ಟು ದೂರ ಕುಟುಂಬ ಸಮೇತ ಆಗಮಿಸಿ ಸುಮಾರು 30ಕ್ಕೂ ಹೆಚ್ಚು ವಚನ ಕಲ್ಯಾಣಗಳನ್ನು ನಡೆಸಿಕೊಟ್ಟಿದ್ದರು. ಜೊತೆಗೆ ಹಲವಾರು ಗುರು ಪ್ರವೇಶ, ಗರ್ಭ ಲಿಂಗದೀಕ್ಷೆ, ನಾಮಕರಣ, ಹಾಗೂ ಯುವ ಸಮುದಾಯಕ್ಕೆ ಕಮ್ಮಟಗಳನ್ನೂ ಅವರ ನೇತೃತ್ವದಲ್ಲಿಯೇ ಆಯೋಜಿಸಲಾಗಿತ್ತು.

ಶರಣ ತತ್ವದ ಅನುಭವ ನೀಡಿ ಈ ಎರಡೂ ಜಿಲ್ಲೆಗಳಲ್ಲಿ ನೂರಾರು ಯುವಕರನ್ನ ಬಸವ ತತ್ವದ ಕಟ್ಟಾಳುಗಳನ್ನಾಗಿ ಮಾಡಿದ್ದರು. ಹಾಗೆಯೆ ಹಲವಾರು ಕುಟುಂಬಗಳಲ್ಲಿ ಮನೆ ಮಾತಾಗಿದ್ದರು.

ಈ ಭಾಗದ ಬಸವತತ್ವದ ಯುವಕರನ್ನ, ಬಸವ ತತ್ವದ ಮನೆಗಳನ್ನ ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೊಂದು ಕಾರಣವು ಇತ್ತು. ಎಲ್ಲಾ ಕಡೆ ಬಸವತತ್ವದ ಪ್ರಚಾರಕರು ಹಿರಿಯರೇ ಇರುತಿದ್ದರು, ಆದರೆ ಈ ಜಿಲ್ಲೆಗಳಲ್ಲಿ ಹಿರಿಯರ ಜೊತೆ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ವೀರಭದ್ರಪ್ಪ ದಂಪತಿಗಳಿಬ್ಬರು ಅಭಿಮಾನದಿಂದ ಸಂಭ್ರಮಿಸುತಿದ್ದರು.

ಬಸವಣ್ಣನವರ ತತ್ವಸಿದ್ದಾಂತಗಳನ್ನ ಜಗತ್ತಿಗೆ ಹಂಚುವುದು ನಮ್ಮೆಲ್ಲರ ಕರ್ತವ್ಯ ಎಂದು ಅಣ್ಣನ ಸ್ಥಾನದಲ್ಲಿ ನಿಂತು ಯುವಕರಿಗೆ ಉತ್ಸಾಹ ತುಂಬುತ್ತಿದ್ದರು. ಇತ್ತೀಚೆಗೆ ನಂಜನಗೂಡಿಗೆ ಬಂದಾಗ ವಿಶ್ವ ಬಸವಸೇನೆಯ ಪದಾಧಿಕಾರಿಗಳೊಂದಿಗೆ ಎಲ್ಲಾ ಶರಣರ ಜಯಂತಿಗಳನ್ನ ರಾಜ್ಯಾದ್ಯಂತ ಮಾಡಬೇಕೆಂದು ಮಾತನಾಡಿದ್ದರು.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗಲೂ ಈ ಕಾರ್ಯದ ಬಗ್ಗೆ ವಿಶ್ವ ಬಸವಸೇನೆಯ ಅದ್ಯಕ್ಷರಾದ ಬಸವಯೋಗೀಶ್ ರವರೊಂದಿಗೆ ಉತ್ಸಾಹದಿಂದ ಯೋಜನೆ ಹಾಕಿಕೊಂಡಿದ್ದರು. ಅನಾರೋಗ್ಯ ಸದ್ಯಕ್ಕೆ ಸರಿಯಾಗುತ್ತೆ ಬೇಗ ಗುಣಮುಖನಾಗಿ ಬರುತ್ತೇನೆ. ಬಸವಣ್ಣನವರ ತತ್ವಸಿದ್ದಾಂತಗಳು ಜಗತ್ತಿನ ಸರ್ವಸಮಸ್ಯೆಗಳಿಗೆ ಪರಿಹಾರಕ್ಕೆ ಮಾರ್ಗ ಸೂಚಕವಾಗಿವೆ, ಅದಕ್ಕಾಗಿ ಸರ್ವಸಮುದಾಯದ ಕಾಯಕ ಶರಣರ ಜಯಂತಿ ನಡೆಸಿ ಎಲ್ಲರಿಗೂ ತಿಳಿಸೋಣವೆಂದು ಕಾತರಿಸುತಿದ್ದರು.

ರಾಜ್ಯದ ಎಲ್ಲಾ ಬಸವಾಭಿಮಾನಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ರಾಯಚೂರಿನಿಂದ ಊಟಿಯವರೆಗೂ ಶರಣ ಅನುಭಾವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೀರಭದ್ರಣ್ಣನವರು ಇಂದು ನಮ್ಮೊಡನೆ ಇಲ್ಲದಿರವುದನ್ನ ನೆನೆಸಿಕೊಳ್ಳಲು ಕಷ್ಟವಾಗುತ್ತಿದೆ.

ಅವರ ಲಿಂಗೈಕ್ಯ ಸುದ್ದಿ ಕೇಳಿದಾಕ್ಷಣ ಬಸವ ಭಕ್ತರಿಗೆ ಸಿಡಿಲುಬಡಿದಂತಾಯಿತು. ಸದಾ ಶ್ವೇತವಸ್ತ್ರದಾರಿಯಾಗಿ ಎದುರು ಬಂದವರನ್ನ ಬರ್ರಿ ಶರಣು ಎಂದು ನಗತ್ತಲೆ ಕೈ ಮುಗಿಯುತ್ತಿದ್ದ ವೀರಭದ್ರಣ್ಣನವರ ನಗುಮುಖ ಮರೆಯಲು ಸಾಧ್ಯವಾಗುತ್ತಿಲ್ಲ.

ಈಗ ಎಲ್ಲರ ಆಶಯ ಒಂದೇ, ಶರಣ ವೀರಭದ್ರಪ್ಪನವರ ಲಿಂಗ ಜ್ಯೋತಿ ಬಸವನಲ್ಲಿ ಐಕ್ಯ ಹೊಂದಲಿ. ಅವರು ಹೊರಟಿದ್ದ ದಾರಿಯಲ್ಲೇ ನಾವೆಲ್ಲ ಸಾಗೋಣ, ಅವರ ಯೋಜನೆ, ಆಶಯಗಳನ್ನೆಲ್ಲ ಅನುಷ್ಠಾನಕ್ಕೆ ತರೋಣ. ಅವರು ಬಂದ ಕಾರ್ಯಕ್ಕೆ ನಾವೆಲ್ಲಾ ಕೈಜೋಡಿಸೋಣ.

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು