ಮೈಸೂರು
ಶನಿವಾರ ನಗರದಲ್ಲಿ ನಡೆದ ಲಿಂಗಾಯತ ಧರ್ಮದ ವಚನಾಧಾರಿತ ಕಮ್ಮಟದಲ್ಲಿ ವಚನಮೂರ್ತಿಗಳಾದ ಪಿ. ರುದ್ರಪ್ಪ, ಮಡಿವಾಳಪ್ಪ ಸಂಗೊಳ್ಳಿ, ಎಸ್.ಎನ್. ಅರಬಾವಿ, ಭಾರತಿ ತಾಯಿಯವರು ನಿಜಾಚರಣೆಯ ವಿವಿಧ ಆಯಾಮಗಳನ್ನು ಸರಳವಾಗಿ ಪರಿಚಯ ಮಾಡಿಕೊಟ್ಟರು.
ಅಷ್ಟಾವರಣ ಮತ್ತು ಪಂಚಾಚಾರಗಳ ಸ್ಥೂಲ ಪರಿಚಯ, ಲಿಂಗಾಯತ ಧರ್ಮದ ಆಚರಣೆಗಳು ಮತ್ತು ಸಂಸ್ಕಾರದ ಪರಿಚಯ, ಕಲ್ಯಾಣ ಮಹೋತ್ಸವದ ಚಿಂತನ ಹಾಗೂ ಕಾರ್ಯವಿಧಾನ, ಗರ್ಭಕ್ಕೆ ಲಿಂಗಧಾರಣೆ ಮತ್ತು ನಾಮಕರಣ, ಷಟಸ್ಥಲ ಸಿದ್ಧಾಂತ, ಅಂತ್ಯ ಸಂಸ್ಕಾರ ಮತ್ತು ಸ್ಮರಣೋತ್ಸವ, ಮತ್ತಿತರ ಆಚರಣೆಗಳು ಮತ್ತು ಸಂಸ್ಕಾರಗಳು ಕುರಿತು ಪ್ರಾತ್ಯಕ್ಷಿಕೆ ಮತ್ತು ಪಾಠಗಳು ಜರುಗಿದವು.
ಜೊತೆಗೆ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಅವರು ಮಾಡಿದ ಪ್ರಯತ್ನ ಇಲ್ಲಿ ಬಂದ ಅನೇಕರಲ್ಲಿ ಹೊಸ ಅರಿವು ಮೂಡಿಸಿತು.
ಶರಣ ಪಿ ರುದ್ರಪ್ಪನವರು ವರ್ಷಗಳಿಂದ ಹುದುಗಿ ಹೋಗಿರುವಂತ ಬಸವ ತತ್ವವನ್ನು ಮೊದಲಿಗೆ ನಾವು ಆಚರಿಸುತ್ತಾ ಜನರಿಗೆ ತಿಳಿಸಬೇಕಾಗಿದೆ. ಲಿಂಗಾಯತ ಧರ್ಮಕ್ಕಿಂತ ಮೊದಲೇ ಅನೇಕ ಧರ್ಮಗಳು ನಮ್ಮ ಭಾರತದಲ್ಲಿ ಇದ್ದವು ಆದಾಗ್ಯೂ ಶೈವ ಕುಲದಲ್ಲಿ ಹುಟ್ಟಿದ ಅಪ್ಪ ಬಸವಣ್ಣನವರು ಪ್ರತ್ಯೇಕ ಲಿಂಗಾಯತ ಧರ್ಮವನ್ನು ಯಾಕೆ ಸ್ಥಾಪಿಸಿದರು ಅದರ ತತ್ವ ಸಿದ್ಧಾಂತಗಳು ಏನು ಎಂಬುದನ್ನು ನಾವುಗಳೆಲ್ಲ ಅರಿತು ಅದರಂತೆ ನಡೆಯಬೇಕು.
ಅಪ್ಪ ಬಸವಣ್ಣರು ಕೊಟ್ಟ ದೈವದ ಮೂಲ ಸ್ವರೂಪವನ್ನು ಅರಿತು ಬಾಳಬೇಕು, ನಿಜಾಚರಣೆ ಎಂದರೆ ತನ್ನೊಳಗಿನ ಅರಿವನ್ನು ಅರಿತು ಮಾಡುವ ಕೆಲಸ… ಸಿದ್ಧಾಂತದ ತಳಹದಿಯೊಂದಿಗೆ ಸಂಘಟನೆಯನ್ನು ಮಾಡಬೇಕು ಇಲ್ಲವಾದರೆ ಬೇರು ಇಲ್ಲದ ಮರದಂತೆ ಆಗುತ್ತದೆ ನಮ್ಮ ಧರ್ಮ, ಎಂದು ಹೇಳಿದರು.
ಶರಣ ಎಂ ಎಂ ಸಂಗೊಳ್ಳಿರವರು ಮನೆಮನೆಗೂ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ತಲುಪಿಸುವ ಕೆಲಸವನ್ನು ಎಲ್ಲಾ ಲಿಂಗಾಯತರು ಮಾಡಬೇಕು. ಅವರು ಗುರು ಲಿಂಗ ಜಂಗಮ ತತ್ವವನ್ನು ಬೀಜ ಎಲೆ ಫಲಕ್ಕೆ ಹೋಲಿಸಿದರು. ಗುರುವಾಗಿ ಬಸವಣ್ಣನವರು ಜ್ಞಾನಬೀಜವನ್ನು ಬಿತ್ತಿದರು, ಲಿಂಗವಾಗಿ ಚೆನ್ನಬಸವಣ್ಣನವರು ನಮ್ಮ ತತ್ವ ಸಿದ್ಧಾಂತಗಳನ್ನು ನಾವೆಲ್ಲ ಹೇಗೆ ಜೀವಿಸಬೇಕು ಎಂಬುದನ್ನು ತಿಳಿಸಿದರು, ಜಂಗಮವಾಗಿ ಅಲ್ಲಮಪ್ರಭುಗಳು ಪ್ರಪಂಚದಾದ್ಯಂತ ಸಂಚರಿಸುತ್ತಾ ಬದುಕುವ ರೀತಿಯನ್ನು ತೋರಿಸಿಕೊಟ್ಟರು ಎಂದು ಮನಮುಟ್ಟುವಂತೆ ತಿಳಿಸಿಕೊಟ್ಟರು.
ಶರಣ ಶ್ರೀ ಎಸ್ ಎನ್ ಅರಭಾವಿರವರು ಕಲ್ಯಾಣ ಮಹೋತ್ಸವದ ಚಿಂತನ ಹಾಗೂ ಕಾರ್ಯವಿಧಾನವನ್ನು ಬೋಧಿಸುವಾಗ ಒಂದು ಹಣ್ಣು ಅಥವಾ ತರಕಾರಿಯನ್ನು ತರುವಾಗ ಅದನ್ನು ಕೂಲಂಕುಶವಾಗಿ ಪರೀಕ್ಷಿಸಿ ತೆಗೆದುಕೊಂಡು ಬರ್ತೀವಿ. ಹಾಗಿರುವಾಗ ನಮ್ಮ ಧರ್ಮದ ನಿಜಾಚರಣೆಗಳನ್ನು ಆಚರಿಸೋದು ಬಿಟ್ಟು ಬೇರೆ ಧರ್ಮದ ಆಚರಣೆಗಳನ್ನು ಯಾಕೆ ಪ್ರಶ್ನಿಸದೆ ಒಪ್ಪಿಕೊಳ್ಳಬೇಕು. ನಾಲ್ಕಾರು ದಿನಗಳಲ್ಲಿ ಕೊಳೆತು ಹೋಗುವ ಹಣ್ಣು ತರಕಾರಿ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ನಾವು ನಮ್ಮ ಧರ್ಮ ಸಿದ್ಧಾಂತಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಆಚರಿಸಬೇಕೋ ಬೇಡವೋ ಅಂತ ಪ್ರಶ್ನೆ ಮಾಡಿದರು.
ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಕಲ್ಯಾಣ ಮಹೋತ್ಸವಗಳು ಬಾಹ್ಯಾಡಂಬರದ ಶ್ರೀಮಂತಿಕೆಯ ದುಂದು ವೆಚ್ಚವೇ ಹೊರತು ಬೇರೇನೂ ಇಲ್ಲ. ಆಗಬೇಕಾದ್ದು ಆಂತರಿಕ ಶ್ರೀಮಂತಿಕೆ. ನಿಜ ಲಿಂಗಾಯತ ತತ್ವ ಸಿದ್ಧಾಂತದ ತಳಹದಿಯ ಮೇಲೆ ನಾವುಗಳೆಲ್ಲ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರು. ಲಿಂಗಾಯತ ಧರ್ಮದ ಕಲ್ಯಾಣ ಮಹೋತ್ಸವದ ಪ್ರಾತ್ಯಕ್ಷಿಕೆಯನ್ನು ನವ ಜೋಡಿಯನ್ನು ವೇದಿಕೆಯ ಮೇಲೆ ಕುಳ್ಳಿರಿಸಿ ತುಂಬಾ ಸರಳವಾಗಿ ತೋರಿಸಿಕೊಟ್ಟರು.
ಭಾರತಿ ತಾಯಿಯವರು ಲಿಂಗಾಯತ ಧರ್ಮ ಸಿದ್ದಾಂತದ ಪ್ರಕಾರ ಹೇಗೆ ಗರ್ಭಕ್ಕೆ ಸಂಸ್ಕಾರ ಮತ್ತು ನಾಮಕರಣ ಮಾಡಬೇಕು ಎನ್ನುವ ವಿಚಾರವನ್ನು ತಿಳಿಸಿಕೊಟ್ಟರು.
ಜಾಗತಿಕ ಲಿಂಗಾಯಿತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹದೇವಪ್ಪ ಹಾಗೂ ಕಾರ್ಯದರ್ಶಿ ಶರಣ ಮರಪ್ಪ ಮತ್ತು ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
Nice discription short & sweet 🌹
ಲಿಂಗಾಯತ ಧಮ೯ದ ನಿಜಾಚರಣೆ ನಡೆಸಿಕೊಟ್ಟ, ಕಾಯ೯ಕ್ರಮ ಆಯೋಜಿತ ಹಾಗೂ ಕಾಯ೯ಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೋಳಿಸಿದ ಮೈಸೂರಿನ ಶರಣ ಬಂಧುಗಳಿಗೆ ಅನಂತ ಶರಣುಗಳು. ಮುಂದಿನ ದಿನಗಳಲ್ಲಿ ತಮ್ಮ ಕಾಯ೯ಗಳು ಬಸವ ತತ್ವದಲ್ಲಿ ನಡೆಯಲಿ ಮತ್ತು ಮುಂದಿನ ಜನಾಂಗಕ್ಕೆ ಪ್ರೆರಣೆಯಾಗಲಿ ಜೈ ಬಸವೇಶ್ವರ.
ಬಸವತತ್ವ ಒಂದು ಸತ್ಯ ನಿತ್ಯ ತತ್ವ. ನಿಸರ್ಗದಷ್ಟೇ ಸತ್ಯ ನಿರಂತರ. ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರು ಪ್ರದೇಶದಲ್ಲಿಹೆಚ್ಚು ಹೆಚ್ಚು ಆಚರಣೆಯಲ್ಲಿ ಬರುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಕಾರಣರಾದ ಎಲ್ಲ ಶರಣ ಶರಣೆಯರು ಅಭಿನಂದನಾರ್ಹರು. ಶರಣು ಶರಣಾರ್ಥಿಗಳು