ಕಲಬುರ್ಗಿ
ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬದುಕಬೇಕಾದರೆ ಅವನ ನಡೆನುಡಿ ನೈತಿಕತೆ ಹೇಗಿರಬೇಕೆಂಬುವುದನ್ನು ಶರಣರು ನಡೆದು ನುಡಿದು ತೋರಿಸಿದ್ದಾರೆ, ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಎನಗಿಂತ ಕಿರಿಯರಿಲ್ಲ ಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿ ಸಮಾಜದಲ್ಲಿ ವ್ಯಕ್ತಿಯ ಕಿಂಕರತ್ವದ ನೈತಿಕತೆ ಮೆರೆದಿದ್ದಾರೆ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಿರಣ ಗಾಜನೂರು ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಅಂಬವ್ವ ರುದ್ರವಾಡಿ ಮತ್ತು ಶಾಂತಾಬಾಯಿ ಹಲವಾಯಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ 875 ನೆಯ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆ ನೋಡಾ ಬಡವರು ಮನ ನೋಡಾ ಘನಮಹಿಮರು ಎಂಬಲ್ಲಿ ಶರಣರು ವ್ಯಕ್ತಿಯ ಭೌತಿಕ ಶ್ರೀಮಂತಿಕೆಗಿಂತ ವ್ಯಕ್ತಿತ್ವದ ಶ್ರೀಮಂತಿಕೆಗೆ ಮಹತ್ವ ಕೊಟ್ಟಿದ್ದಾರೆ. ಏನಾದರೂ ಆಗು ಮೊದಲು ಸಮಾಜದಲ್ಲಿ ಮಾನವನಾಗಿ ಬದುಕು ಎಂದು ಶರಣರು ಹೇಳುತ್ತಾರೆ.
ವ್ಯಕ್ತಿಯೊಬ್ಬ ಸಮಾಜದಲ್ಲಿ ನ್ಯಾಯನಿಷ್ಠುರಿ ಆಗಬೇಕು, ಹೊರತು ಸತ್ಯ ಹೇಳುವಲ್ಲಿ ಯಾವುದೇ ದಾಕ್ಷಿಣ್ಯ ಹಂಗು ಇರಬಾರದು ಆಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಗಟ್ಟಿ ಧ್ವನಿಯಲ್ಲಿ ಅನ್ಯಾಯವನ್ನು ಪ್ರತಿಭಟಿಸಲು ಸಾಧ್ಯವಿದೆ ಎಂಬುದು ಅರಿಯಬೇಕು.

ಶರಣರು ಮನುಷ್ಯ ಕುಲ ಜಾತಿ ಛಲ ಮನಸೂತಕಗಳಿಂದ ಹೊರಬರಬೇಕು ಎಂದಿದ್ದಾರೆ. ಶರಣರು ಹೇಳುವಂತೆ ಆಸೆ ಎಂಬುದು ಭವದ ಬೀಜವಾಗಿದೆ, ನಿರಾಶೆ ಎಂಬುದು ನಿತ್ಯ ಮುಕ್ತಿಯಾಗಿದೆ. ಪ್ರಸ್ತುತ ವರ್ತಮಾನ ಸಮಾಜದ ಪ್ರಜಾಪ್ರಭುತ್ವ ಎದುರಿಸುತ್ತಿರುವ ನೈತಿಕ ಸವಾಲುಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ.
ಪ್ರಜಾಪ್ರಭುತ್ವದಲ್ಲಿ ಹಣದ ಸಂಗ್ರಹದ ಸಂಘರ್ಷವು ದಾಸೋಹದಿಂದ ಪರಿಹಾರವಾಗುತ್ತದೆ. ಬಸವಣ್ಣನವರು ಮತ್ತು ಶರಣರ ಸಂದೇಶಗಳು ಜಾಗತಿಕ ಸಂವಿಧಾನವಾಗಿದೆ.
ವರ್ತಮಾನ ಸುಧಾರಿಸಲು ಗತಕಾಲದ ಸಂಪೂರ್ಣ ಚಿಂತನೆಗಳಿಗೆ ಹೋಗುವುದಕ್ಕಿಂತ ಗತಕಾಲದ ನೈಜ ವೈಚಾರಿಕ ಜ್ಞಾನದ ಮೂಲವಾಗಿರುವ ವಚನಗಳಿಗೆ ಹೋಗುವುದು ಸೂಕ್ತವಾಗಿದೆ. ಇಂದಿನ ಕಾಲದ ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗೆ ನೈತಿಕ ವಚನಗಳಲ್ಲಿ ಉತ್ತರವಿದೆ.
ಅಂಬೇಡ್ಕರ್ ಅವರು ಹೇಳುವಂತೆ ಮೊದಲು ಸಮ ಸಮಾಜದ ನಿರ್ಮಾಣವಾಗಬೇಕು. ಆಗ ಮಾತ್ರ ರಾಷ್ಟ್ರದ ಉನ್ನತಿಯಾಗುತ್ತದೆ. ವ್ಯಕ್ತಿಗಳ ನೈತಿಕತೆ ಬಲಿಷ್ಠವಾಗಿದ್ದರೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವಿದೆ. 12ನೇ ಶತಮಾನದಿಂದ 21ನೇ ಶತಮಾನದವರೆಗೆ ಸಾಮಾಜಿಕ ಸಮಸ್ಯೆಗಳು ಜೀವಂತವಾಗಿರುವುದರಿಂದ ಶರಣರ ವಚನಗಳು ಸಾರ್ವಕಾಲಿಕ ಸತ್ಯಗಳಾಗಿ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳಾಗಿ ನಿಲ್ಲುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ , ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ , ಡಾ. ಕೆ. ಎಸ್. ವಾಲಿ, ಡಾ. ನೀಲಾಂಬಿಕ ಪೊಲೀಸಪಾಟೀಲ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ, ದತ್ತಿ ದಾಸೋಹಿಗಳಾದ ಡಾ. ಬಿ. ಎ. ರುದ್ರವಾಡಿ , ಡಾ. ಮಂಗಲಾ ರುದ್ರವಾಡಿ, ಡಾ. ಅಪರ್ಣ ನೀಲೇಗಾರ, ಮಹೇಶ ನೀಲೇಗಾರ ಭಾಗವಹಿಸಿದ್ದರು.
