ಬೆಳಗಾವಿ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಗುರುವಾರ ಲಿಂಗಾಯತ ಸಂಘಟನೆ ವತಿಯಿಂದ ಬಸವಾದಿ ಶರಣ ನಗೆಯ ಮಾರಿತಂದೆ ಅವರ ಕುರಿತು ಉಪನ್ಯಾಸ ನಡೆಯಿತು.
ಪೂಜ್ಯ ವಾಗ್ದೇವಿ ತಾಯಿಯವರು ಉಪನ್ಯಾಸ ನೀಡುತ್ತಾ, “ಬದುಕಿನಲ್ಲಿ ಹಾಸ್ಯ ಬೇಕು, ನಗೆ ಬೇಕು ಇವಿಲ್ಲದಿದ್ದರೆ ತಲೆ, ಮನಸ್ಸು ಭಾರವಾಗುವುದು. ಹಾಸ್ಯವು ಸಹ ಅಪಹಾಸ್ಯವಾಗಬಾರದು. ನಗೆ ಹೊಗೆಯಾಗಬಾರದು. ನಗುವ ಜೀವನ ಪಾವನ, ನಕ್ಕರೆ ಸ್ವಗ೯. ಉರಿ ಬಂದರೂ ಸಿರಿಬಂದರೂ ಇಕ್ಕುವ ಶೂಲ ಪ್ರಾಪ್ತಿಯಾದರೂ ಅದನ್ನು ನಗು ನಗುತ್ತಾ ಎದುರಿಸಬೇಕು” ಎಂದರು.
“ನಗಿಸುವ ಕಾಯಕದ ಮಾರಿತಂದೆಯರ ಮಾರಿ ನೋಡಿದರೆ ನಗಬೇಕು ಅಂತಹ ನಗೆ ಮುಖದವರು ಇದ್ದರು. ದಿನಕ್ಕೆ ಮಗು ಮೂರುನೂರು ಸಾರೆ ನಗುವುದು. ಮಾನವನಿಗೆ ಬಿಗುಮಾನವಿರಬಾರದು, ಅಹಂಕಾರವಿರಬಾರದು. ನಾವು ನಗುನಗುತ್ತಾ ಮಾತನಾಡಬೇಕು. ನಗುವುದು ನುಡಿವುದು ಶಿವಭಕ್ತರೊಡನೆ ಸುಮ್ಮಾನ ಹಮ್ಮು ಇರಬಾರದು. ನಗೆಯಲ್ಲಿ ಅನೇಕ ನಗೆಗಳಿವೆ. ಮಾನವನಿಗೆ ಸಹನೆ ಇರಬೇಕು. ಸಿಡುಕು ಇರಬಾರದು. ಆಸೆ ಇರಬೇಕು, ದುರಾಸೆ ಇರಬಾರದು” ಎಂದು ಹೇಳಿದರು.

ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಕುಮದಿನಿ ತಾಯಿಯವರು ಧರ್ಮಗುರು ಬಸವಣ್ಣವರ ಭಕ್ತಿಗೀತೆ ಹಾಡಿದರು.
ಮಹಾದೇವಿ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು. ಮಂಗಳಾ ಕಾಕತಿಕರ ದಾಸೋಹ ಸೇವೆಗೈದರು. ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು. ಸಂಗಮೇಶ ಅರಳಿ ನಿರೂಪಿಸಿದರು.