ಚಿತ್ರದುರ್ಗ:
೧೨ನೇ ಶತಮಾನದ ಬಸವಣ್ಣನವರು ದೇವಾಲಯ ಸಂಸ್ಕೃತಿಗೆ ಬದಲಾಗಿ ಇಷ್ಟಲಿಂಗವನ್ನು ಸಂಶೋಧಿಸಿ ನಮ್ಮ ಕೈಗೆ ಕೊಟ್ಟರು. ಅದರ ಮೂಲಕ ನಮಗೆ ನಾವೇ ದೇವರಾಗುವ ತತ್ವವನ್ನು ನಿರೂಪಿಸಿ ಸಾಧಿಸಿದರು.
ಇಷ್ಟಲಿಂಗ ಜಗದ ಕುರುಹು. ಇದರಲ್ಲಿ ಎಲ್ಲವೂ ಅಡಗಿದೆ. ಅದರಿಂದ ಎಲ್ಲವೂ ಸಾಧ್ಯವಿದೆ. ಇಷ್ಟಲಿಂಗದ ಮೂಲಕ ಶಿವಯೋಗವನ್ನು ಮಾಡುತ್ತ ಹೋದರೆ ಮಾನವನೇ ಮಹದೇವನಾಗುವ ತತ್ವವಿದೆ ಎಂದು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಅವರು ಇಷ್ಟಲಿಂಗದ ಕುರುವಿನ ಮಹತ್ವ ಅರುಹಿದರು.

ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ರವಿವಾರ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಸಹಜ ಶಿವಯೋಗದ ಪ್ರಾತ್ಯಕ್ಷಿಕೆಯ ಮೂಲಕ ಚಿಂತನ ನೀಡಿದರು.
ಬಸವಾದಿ ಶರಣರ ದೃಷ್ಟಿಯಲ್ಲಿ ಶಿವನ ಕಲ್ಪನೆ ಎಂದರೆ ಸರ್ವರಿಗೂ ಒಳಿತನ್ನು ಬಯಸುವರು, ಶಿವನನ್ನು ಬೇರೆಡೆ ಹುಡುಕುವ ಬದಲಿಗೆ ಸದ್ಭಾವದಿಂದ ನಿಮ್ಮ ದೇವರನ್ನು ನೀವೇ ನಿಮ್ಮ ಕರದಲ್ಲಿಟ್ಟು ಪೂಜಿಸುವ, ಜಗದಗಲ ಮುಗಿಲಗಲ ವಿಶ್ವಾತ್ಮನ ಕುರುಹು ಈ ಇಷ್ಟಲಿಂಗ.
ಇಷ್ಟಲಿಂಗದ ನಿರೀಕ್ಷಣೆಯನ್ನು ಯಾರು ಬೇಕಾದರೂ ಧರಿಸಿ ಆಧರಿಸಬಹುದು. ಇದಕ್ಕೆ ಯಾವ ರೀತಿಯ ಕಟ್ಟಳೆ, ಸೋಂಕು, ಮಡಿ ಮೈಲಿಗೆ ಜಾತಿ ಲಿಂಗ ತಾರತಮ್ಯವಿಲ್ಲದಂತಹ ತಾಯಿ ಸ್ವರೂಪದ ಈ ಇಷ್ಟಲಿಂಗವನ್ನು ಕೊಟ್ಟಿದ್ದಾರೆ. ಇದೇ ಶಿವನ ಆರಾಧನೆ ನಮಗೆ.

ಇದನ್ನು ನಾವು ನಿತ್ಯ ನಿತ್ಯ ಮಾಡುತ್ತ ಹೋದರೆ ಮನದ ಮೈಲಿಗೆ ಕಳೆದು ಅರಿವು ಸ್ವಯಂಗೊಂಡು ದಿವ್ಯಚೇತನರಾಗುತ್ತೀರಾ ಎಂದು ಇಷ್ಟಲಿಂಗದ ಮೂಲಕ ಧ್ಯಾನದ ನಿರೀಕ್ಷಣೆಯನ್ನು ಮಾಡಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡುತ್ತ, ನಮ್ಮ ಜೀವನದಲ್ಲಿ ಸೋಲನ್ನು ನೋಡದೇ ಇರುವ ಸಾಧನವೆಂದರೆ ಅದು ಶಿವಯೋಗ. ಈ ಕೆಲಸವನ್ನು ಶಿವಯೋಗಿ ಪರಂಪರೆಯ ಸಿದ್ಧರಾಮರು, ಯಡಿಯೂರು ಸಿದ್ಧಲಿಂಗರು, ಅಥಣಿ ಮುರುಘೇಂದ್ರ ಶಿವಯೋಗಿಗಳು ಇತ್ತೀಚಿನ ಕೆಲ ಸತ್ಪುರುಷರು ಮಾಡಿದ್ದಾರೆ.
ಶಿವರಾತ್ರಿಯಂದು ಪರಂಪರೆಯಂತೆ ನಮ್ಮ ಬಸವಪ್ರಭು ಸ್ವಾಮೀಜಿ ಅರ್ಥಪೂರ್ಣವಾಗಿ ಶಿವಯೋಗ ನಡೆಸಿಕೊಟ್ಟಿದ್ದಾರೆ. ನೀವೆಲ್ಲ ಬಂದುದು ಒಂದು ರೀತಿಯಲ್ಲಿ ಶೋಭೆ. ಇದು ಇನ್ನಷ್ಟು ಜಾಸ್ತಿ ಸಂಖ್ಯೆಯಲ್ಲಿ ಜನತೆ ಬಂದರೆ ಸಾರ್ಥಕತೆ ಬರುತ್ತದೆಂದು ನುಡಿದರು.

ಈ ಸಂದರ್ಭದಲ್ಲಿ ವಿವಿಧ ಸಮಾಜ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಎಸ್. ಷಣ್ಮುಖಪ್ಪ, ಜೆ.ಎಸ್. ಮುರುಘೇಶ್, ನಾಗರಾಜ ಸಂಗಂ, ಚಂದ್ರಣ್ಣ, ತಿಮ್ಮಾರೆಡ್ಡಿ, ಎಸ್.ಎಂ. ಕೊಟ್ರೇಶಪ್ಪ, ಶಿಕ್ಷಕ ಗೊಂಚಿಗಾರ್, ಎಸ್.ವಿ. ಹರ್ತಿ, ಗೀತಾ ರುದ್ರೇಶ, ಶೈಲಜಾಬಾಬು, ರಾಜಶೇಖರ್, ಜಾಗತಿಕ ಲಿಂಗಾಯತ ಸಭಾದ ಕಡೂರು ಕುಮಾರಸ್ವಾಮಿ, ಮಲ್ಲೇಶ ಮತ್ತಿತರರು ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲನೌಕರರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜೆ.ಎಂ. ಐ.ಟಿ.ಐ. ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದೆ ಗಿರಿಜಾ ಹಿರೇಮಠ ಅವರು ಪ್ರಾರ್ಥನೆ ಹಾಗೂ ಶಿವಯೋಗದ ಗೀತೆಗಳನ್ನು ಹಾಡಿದರು. ಪ್ರಾಚಾರ್ಯ ಬೋರೇಶ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಬಸವ ತತ್ವ ಸರಳ ಹಾಗೂ ಸಾಮಾನ್ಯ ಜನರ ಮನದ ಕೊನೆಯ, ಮೊನೆಯ ಮೇಲೆ ಪ್ರಕಾಶ, ಬೆಳಕು ಚೆಲ್ಲಿ, ಅವರ ಮನಸ್ಸು ಮತ್ತು ವಚನಗಳನ್ನು ಮತ್ತು ಇಷ್ಟ ಲಿಂಗದಲ್ಲಿ ನೆಲೆಗೊಳಿಸಿ, ಶಿವ ಯೋಗ, ಅಥವಾ ಬಸವ ಯೋಗ ಸರಳವಾಗಿ ಆಚರಿಸಿ ತೋರಿಸಿದ ಎಲ್ಲ ಮಹನೀಯರಿಗೂ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.