ಪ್ರತಿ ಜಿಲ್ಲೆಯಲ್ಲಿ “ನಮ್ಮ ನಡೆ ಸರ್ವೋದಯದ ಕಡೆ” ಆಂದೋಲನ

ಬಸವ ಮೀಡಿಯಾ
ಬಸವ ಮೀಡಿಯಾ

ಚನ್ನಗಿರಿ:

ಸರ್ವೋದಯ ಸಂಘಟನೆ ವತಿಯಿಂದ ಜನಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಮೇ 1ರಿಂದ 16ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಮುಂಜಾನೆ ವೇಳೆ ಒಂದು ಜಿಲ್ಲೆ ಹಾಗೂ ಸಂಜೆ ಒಂದು ಜಿಲ್ಲೆಯಲ್ಲಿ ಜನ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಡಿನ ವಿವಿಧ ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಲಿದ್ದು, ಆರೋಗ್ಯ, ಪರಿಸರ, ಕೃಷಿ, ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ನಮ್ಮ ನಡೆ ಸರ್ವೋದಯದ ಕಡೆಗೆ’’ ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಗುಣಮಟ್ಟದ ಶಿಕ್ಷಣ, ಸರ್ವರಿಗೂ ಉತ್ತಮ ಆರೋಗ್ಯ ಸೇವೆ, ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದೆ. ಸಾವಯವ ಕೃಷಿ ಮತ್ತು ಭ್ರಷ್ಟಾಚಾರರಹಿತ ಆಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಈ ಜಾಗೃತಿ ಕಾರ್ಯಕ್ರಮವು ಜಾತ್ಯತೀತ ಮತ್ತು ಧರ್ಮಾತೀತ ಕಾರ್ಯಕ್ರಮವಾಗಿದ್ದು, ಮಹಾತ್ಮಾ ಗಾಂಧೀಜಿಯವರ ಗ್ರಾಮ ಅಭಿವೃದ್ಧಿಯ ಕನಸುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಿದೆ ಎಂದು ಹೇಳಿದರು.

ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ ಮತ್ತು ಆಡಳಿತ ಈ ಐದು ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕಾಗಿದೆ. ಸಮಾಜವನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ಜವಾಬ್ದಾರಿ ಮಠಗಳ ಮೇಲಿದೆ. ಈ ನಿಟ್ಟಿನಲ್ಲಿ ವಿವಿಧ ಮಠಾಧೀಶರು, ಚಿಂತಕರ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸಭೆಯಲ್ಲಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಗಳು, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಸವ ತಪೋವನದ ಜಯಬಸವಾನಂದ ಮಹಾಸ್ವಾಮಿಗಳು, ಹೊಳಲ್ಕೆರೆ ಒಂಟಿಕಂಬದ ತಿಪ್ಪೇರುದ್ರ ಮಹಾಸ್ವಾಮಿಗಳು, ರುದ್ರಮುನಿ ಮಹಾಸ್ವಾಮಿಗಳು, ಮಾಜಿ ಶಾಸಕ ಮಹಿಮಾ ಪಟೇಲ್, ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ, ಕೆಆರ್ಎಸ್ ಪಕ್ಷದ ರವಿ ಕೃಷ್ಣಾರೆಡ್ಡಿ, ನಿವೃತ್ತ ಶಿಕ್ಷಕ ಎಂ.ಯು. ಚನ್ನಬಸಪ್ಪ, ಶಿವಮೂರ್ತಿ, ಚಂದ್ರಪ್ಪ ಸೇರಿದಂತೆ ಹಲವಾರು ಚಿಂತಕರು, ಹೋರಾಟಗಾರರು, ಬರಹಗಾರರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *