ನಂಜನಗೂಡು
ಪಟ್ಟಣದದಲ್ಲಿ ರಾಜ್ಯ ಗೆಜ್ಜೆಗಾರ ರಕ್ಷಣಾ ಸಮಿತಿಯ ವತಿಯಿಂದ ಇತ್ತೀಚೆಗೆ ಶರಣ ಗೆಜ್ಜೆಗಾರ ಘಟ್ಟಿವಾಳಯ್ಯ ಜಯಂತಿ ಆಚರಿಸಲಾಯಿತು.
ನಂಜನಗೂಡು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಶರಣ ಗೆಜ್ಜೆಗಾರ ಘಟ್ಟಿವಾಳಯ್ಯರವರ ಭಾವಚಿತ್ರಕ್ಕೆ ಶ್ರೀ ಬಸವಯೋಗಿ ಪ್ರಭುಗಳು, ವಚನ ಸಾಹಿತ್ಯ ಚಿಂತಕರಾದ ಅಲ್ಲರೆ ಶಿವಬುದ್ಧಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕರಂಗನಾಯಕ ಹಾಗೂ ಗೆಜ್ಜೆಗಾರ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಲ್ಲೇಶ ಅವರು ಪುಷ್ಪಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಂಜನಗೂಡಿನ ಪ್ರಮುಖ ರಸ್ತೆಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದವರೆಗೆ ಘಟ್ಟಿವಾಳಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
12ನೇ ಶತಮಾನದ ಅನುಭವ ಮಂಟಪದಲ್ಲಿ ಶರಣರಾದ ಗೆಜ್ಜೆಗಾರ ಘಟ್ಟಿವಾಳಯ್ಯ ಅವರು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಾನತೆಯನ್ನು ಪ್ರತಿನಿಧಿಸುವ ವಚನಗಳನ್ನು ಬರೆದರು. ಈಗಾಗಲೇ ಅವರ 145ಕ್ಕೂ ಹೆಚ್ಚು ವಚನಗಳು ಲಭ್ಯವಾಗಿವೆ, ಎಂದು ಶರಣತತ್ವ ಚಿಂತಕ ಹಲ್ಲರೆ ಶಿವಬುದ್ಧಿ ಜಯಂತಿ ಮಹೋತ್ಸವದಲ್ಲಿ ಅನುಭಾವ ನೀಡಿದರು.
ಗೆಜ್ಜೆಗಾರ, ಕಮ್ಮಾರ, ವಿಶ್ವಕರ್ಮ ಎಂದು ಗೆಜ್ಜೆಗಾರ ಸಮುದಾಯದಲ್ಲಿ ಪಂಗಡಗಳಿವೆ. ಆಯಾ ಸಮುದಾಯದ ಕೆಲಸಗಳು ಬೇರೆಯಾಗಿವೆ. ಹಿತ್ತಾಳೆ, ಕಬ್ಬಿಣ, ಚಿನ್ನದ ಕುಶಲ ಕಾಯಕವನ್ನು ನಮ್ಮವರು ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಗೆಜ್ಜೆಗಾರ ಸಮುದಾಯದವರು ರಾಜಕೀಯದಲ್ಲಿ ಮತ್ತು ಶಿಕ್ಷಣದಲ್ಲಿ ಮುಂದೆ ಬರಬೇಕು, ಆಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ, ಎಂದು ಹಲ್ಲರೆ ಶಿವಬುದ್ಧಿ ಹೇಳಿದರು.
ಸಂಘಟನೆಯ ಗೌರವಾಧ್ಯಕ್ಷ ರಂಗಸ್ವಾಮಿ “12ನೇ ಶತಮಾನದ ಅನುಭವ ಮಂಟಪದಲ್ಲಿ ಎಲ್ಲ ಸಮಾಜದವರು ಬಸವಣ್ಣನವರ ಜೊತೆ ಕೈ ಜೋಡಿಸಿ ಸಮ ಸಮಾಜವನ್ನು ಕಟ್ಟಲು ಹಲವಾರು ಕ್ರಾಂತಿಗಳನ್ನು ನಡೆಸಿದ್ದರು, ಎಂದು ಹೇಳಿದರು.
.
ಉಪಾಧ್ಯಕ್ಷ ಕೋಟೆ ಮಹಾದೇವಶೆಟ್ಟಿ, ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ, ಸಂಘಟನಾ ಕಾರ್ಯದರ್ಶಿ ಗೊಳೂರು ಸ್ನೇಕ್ ಬಸವರಾಜು, ತಾಲೂಕ ಗೌರವಾಧ್ಯಕ್ಷ ಶಿವನಂಜಶೆಟ್ಟಿ, ಅಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಮೇಶ, ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ಯೋಗೇಶ, ಖಜಾಂಚಿ ಮೋಹನ ಸೇರಿದಂತೆ ಹೆಚ್‍ಡಿ ಕೋಟೆ, ಸರಗೂರು, ಹಿರಿಯೂರು ಹೊಸವೀಡು ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಮುದಾಯದ ಜನ ಉಪಸ್ಥಿತರಿದ್ದರು.
ನಂಜನಗೂಡಲ್ಲಿ ಇಷ್ಟು ಜನ ಶರಣ ಪರಂಪರೆಯವರು ಇರುವುದು ಗೊತ್ತಿದ್ದಿಲ್ಲ ನೋಡಿ, ಕರ್ನಾಟಕದ ದಕ್ಷಿಣ ಅಂಚಾದ ನಂಜನಗೂಡು , ಗುಂಡ್ಲುಪೇಟೆ ಇವೆ. ಇಷ್ಟು ಸಣ್ಣ ಸಣ್ಣ ಸಮುದಾಯಗಳು ಎಲ್ಲ ಸೇರಿ ಬ್ರಹತ್ ಬಸವ ಧರ್ಮ ಅಥವಾ ಲಿಂಗಾಯತ ಧರ್ಮವಾಗಿದೆ. ಇಂತಹ ಸಣ್ಣ ಸಮುದಾಯಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಸಂಘಟಿಸಬೇಕು, ಲಿಂಗಾಯತ ಧರ್ಮದ ಆಚಾರ ವಿಚಾರ ತತ್ವ ಉಳಿಯುವಲ್ಲಿ ಇಂತಹ ಸಣ್ಣ ಸಮುದಾಯಗಳ ಜನರ ಕೊಡುಗೆ ಸಾಕಷ್ಟಿದೆ.