ನಿಜಾಚರಣೆ: ‘ಗೃಹ ಪ್ರವೇಶ’ ಬಸವತತ್ವದ ‘ಗುರು ಪ್ರವೇಶ’ ಆಗಿದ್ದು

ನನ್ನ ಸ್ನೇಹಿತರು ಗ್ರಹಪ್ರವೇಶದ ಪೂಜೆಗೆ 60,000 ರೂಪಾಯಿ ಖರ್ಚು ಮಾಡಿದರು. ನನಗಾದ
ಖರ್ಚು 200 ರೂಪಾಯಿ. ಜೊತೆಗೆ ಬಂದವರ ಮನ ಮುಟ್ಟುವಂತಹ ಕಾರ್ಯಕ್ರಮವಾಯಿತು.

ಬೆಂಗಳೂರು

ನನ್ನ ಸ್ನೇಹಿತರಾದ ಶರಣ ಶ್ರೀಶೈಲ ಮಸೂತಿಯವರು ಬಸವತತ್ವದ ಅನುಭಾವಿಗಳು ಮತ್ತು ಅನುಯಾಯಿಗಳು. ಇತ್ತೀಚೆಗಷ್ಟೇ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಪದವಿಪೂರ್ವ ಕಾಲೇಜಿನಿಂದ ನಿವೃತ್ತಿ ಹೊಂದಿರುವ ಅವರು ಲಿಂಗಾಯತ ಅಧ್ಯಯನ ಸಂಸ್ಥೆಯ ಮುಖ್ಯಸ್ಥರೂ ಹೌದು.

ಅವರು, ತಮ್ಮ ನಿವೃತ್ತಿಯನಂತರ ಲಿಂಗಾಯತ ಧರ್ಮೀಯರ ದೈನಂದಿನ ಆಚರಣೆಗಳು ವೈದೀಕರಣಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬಸವಾದಿ ಶರಣರ ತತ್ವಗಳ ಆಧಾರದಲ್ಲಿ ತಾವೇ ಅವುಗಳನ್ನು ನಡೆಸಿಕೊಡುವ ಕೆಲಸವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ನಾನು ನೂತನವಾಗಿ ಕಟ್ಟಿಸಿರುವ ಮನೆಯ ಗೃಹ ಪ್ರವೇಶ ನೆರವೇರಿಸುವ ಸಲುವಾಗಿ ಅವರನ್ನು ಸಂಪರ್ಕಿಸಿದಾಗ ಅವರು ಗೃಹ ಪ್ರವೇಶದ ಆಚರಣೆಯ ಶೀರ್ಷಿಕೆಯಿಂದಲೇ ಸರಿಪಡಿಸಲು ಪ್ರಾರಂಭಿಸಿದರು.

ಗುರು ಪ್ರವೇಶ

ಅವರು ನನಗೆ “ಗೃಹ ಪ್ರವೇಶ” ಎಂದು ಕರೆಯುವ ಬದಲಾಗಿ “ಗುರು ಪ್ರವೇಶ” ಎಂದು ಬದಲಾಯಿಸಲು ಸೂಚಿಸಿದರು. ಅದಕ್ಕೆ ಅವರು ಕೊಟ್ಟ ವಿವರಣೆ “ನಾವು ಲಿಂಗಾಯತರು, ನಾವು ಸನಾತನ ಮತ್ತು ಹಿಂದೂ ಧರ್ಮದ ಆಧಾರದಲ್ಲಿ ಯಾವುದೇ ವೈದಿಕ ಸಂಪ್ರದಾಯ ಮತ್ತು ಪೂಜೆ, ಹೋಮ, ಹವನಗಳನ್ನು ಮಾಡುವುದಿಲ್ಲ ಅಲ್ಲದೆ ವೀರಶೈವ ಸಹೋದರರ ವೈದಕೀಕರಣಗೊಂಡಿರುವ ಆಚರಣೆಗಳನ್ನೂ ಪಾಲಿಸುವುದಿಲ್ಲ. ಬದಲಾಗಿ, ಲಿಂಗಾಯತ ಧರ್ಮೀಯರಾದ ನಮ್ಮ ಧಾರ್ಮಿಕ ಗ್ರಂಥವಾದ “ವಚನ ಸಂಗ್ರಹ”ದ ಕಟ್ಟು ಮತ್ತು ನಮ್ಮ ಧರ್ಮ ಗುರುವಾದ ಬಸವಣ್ಣನವರ ವಿಗ್ರಹ ಅಥವಾ ಪ್ರತಿಕೃತಿಯನ್ನು ಹೊಸ ಮನೆಯೊಳಗೆ ತೆಗೆದುಕೊಂಡು ಹೋಗುತ್ತೇವೆ.

ಈ ಆಚರಣೆಗೆ ನಾವು “ಗುರು ಪ್ರವೇಶ” ಎಂದು ಕರೆಯುತ್ತೇವೆ” ವಿವರಿಸಿದರು. ಅವರ ಮಾರ್ಗದರ್ಶನದಂತೆ ನಮ್ಮ ನೂತನ ಮನೆಯ “ಗುರು ಪ್ರವೇಶ”ವನ್ನು ನೆರೆವೇರಿಸಲಾಯ್ತು. ಆ ಆಚರಣೆಯ ಪ್ರತಿ ಹಂತದ ವಿವರಗಳು ಈ ಕೆಳಗಿನಂತಿವೆ:

  1. ನೂತನ ಮನೆಯ ಮಾಲೀಕರಾದ ನಾನು ಮತ್ತು ನನ್ನ ಪತ್ನಿ, ಒಬ್ಬರು ಬಸವಣ್ಣನವರ ಪ್ರತಿಮೆ ಇನ್ನೊಬ್ಬರು ವಚನ ಪುಸ್ತಕಗಳ ಕಟ್ಟನ್ನು ಹೊತ್ತು ವಚನಗಳನ್ನು ಪಠಿಸುತ್ತಾ ಮನೆಯ ಕೆಳ ಅಂತಸ್ತಿನಿಂದ ನಾಲ್ಕೂ

ಅಂತಸ್ತುಗಳಲ್ಲಿನ ಎಲ್ಲಾ ಕೊಠಡಿಗಳಿಗೆ ಪ್ರದಕ್ಷಿಣೆ ಹಾಕಿ ಕೆಳಗಿನ ಅಂತಸ್ತಿನಲ್ಲಿ ಪೂಜೆಗೆ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಸ್ಥಾಪಿಸಲಾಯ್ತು.

  1. ಬಸವಣ್ಣನವರ ಜೀವನ ಚರಿತ್ರೆಯನ್ನು 101 ಸ್ತೋತ್ರಗಳಾಗಿ ಶ್ರೀಶೈಲ ಮಾಸೂತಿಯವರು ಪಠಿಸಿದರು. ಪ್ರತಿ ಸ್ತೋತ್ರದ ಕೊನೆಯಲ್ಲಿ ನಮ್ಮನ್ನೂ ಸೇರಿಸಿದಂತೆ ಅಲ್ಲಿ ನೆರೆದಿದ್ದ ಎಲ್ಲಾ ಶರಣ ಶರಣೆಯರು “ಓಂ ಶ್ರೀ ಗುರು ಬಸವ ಲಿಂಗಾಯ ನಮಃ” ಎಂದು ಮಸೂತಿಯವರ ನಿರ್ದೇಶನದಂತೆ ಎಲ್ಲರೂ ಪಠಿಸಿದರು.
  2. ನೆರೆದಿದ್ದ ಶರಣ ಶರಣೆಯರು ಇಷ್ಟಲಿಂಗ ಪೂಜೆ ಮಾಡಿಕೊಂಡರು. ಶ್ರೀಶೈಲ ಮಸೂತಿಯವರು ವಚನಗಳ ಪಾಠಿಸುತ್ತಿದ್ದರು ಅಲ್ಲಿ ನೆರೆದಿದ್ದವರು ಅದನ್ನು ಅನುಸರಿಸುತ್ತಿದ್ದರು. ಅವರು ಮಾಡಿದ ಎಲ್ಲಾ ಪೂಜಾ ವಿಧಾನಗಳಲ್ಲಿ ಕಣ್ಣದಲ್ಲಿರುವ ಶರಣರ ವಚನಗಳನ್ನೇ ವಾಚಿಸುತ್ತಿದ್ದರು.
  3. ಪೂಜಾ ಆಚರಣೆಗಳು ಮುಗಿದನಂತರ ಬಸವ ಧ್ವಜವನ್ನು ಹಾರಿಸಿ ಅದನ್ನು ಮನೆಯ ಮುಂದೆ ಕಟ್ಟಲಾಯ್ತು.
  4. ಕೊನೆಯಲ್ಲಿ, ಗುರುಪ್ರವೇಶಕ್ಕಾಗಿ ನೆರೆದಿದ್ದ ಶರಣ ಸಮೂಹದೊಟ್ಟಿಗೆ 10 ನಿಮಿಷಗಳ ಕಾಲ ಅನುಭಾವ ನಡೆಸಲಾಯ್ತು. ಅನುಭಾವದಲ್ಲಿ, ಬಸವತತ್ವ, ಲಿಂಗಾಯತರಲ್ಲಿ ಅದರ ಬಗೆಗೆ ಜಾಗೃತಿ ಮೂಡಿಸುವ ಮತ್ತು ಆಚರಿಸುವ ಅವಶ್ಯಕತೆಯ ಬಗ್ಗೆ ಚರ್ಚಿಸುವುದರ ಮೂಲಕ ನೂತನ ಮನೆಯ “ಗುರು ಪ್ರವೇಶ” ಕಾರ್ಯಕ್ರಮವನ್ನು ನನ್ನ ಮತ್ತೊಬ್ಬ ಸ್ನೇಹಿತ ಶರಣ ಉಮೇಶ್ ಸಿ. ಹೆಚ್. ಅವರು ಸುಶ್ರಾವ್ಯವಾಗಿ ವಾಚನವೊಂದನ್ನು ಹಾಡುವ ಮೂಲಕ ಮುಕ್ತಾಯಗೊಳಿಸಲಾಯ್ತು. ಈ ಎಲ್ಲಾ ಆಚರಣೆಗಳು ಒಂದು ಗಂಟೆ ಸಮಯದಲ್ಲಿ ಮುಕ್ತಾಯಗೊಂಡವು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಿದೆವು.

ಸರಳ ಕನ್ನಡದ ಆಚರಣೆಗಳು

ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನೂ ಶರಣ ಶ್ರೀಶೈಲ ಮಸೂತಿಯವರೂ ಮಾರ್ಗದರ್ಶನ ಮಾಡುವುದರ ಮೂಲಕ ಎಲ್ಲವನ್ನೂ ನಮ್ಮಿಂದಲೇ ಮಾಡಿಸಿದರು. ಸಂಪೂರ್ಣ ಕಾರ್ಯಕ್ರಮ ಕನ್ನಡದಲ್ಲಿ ಮತ್ತು ವಚನಗಳ ವಾಚನ ಮತ್ತು ಪಠಣಗಳ ಮೂಲಕ ನೆರವೇರಿತು. ಇಡೀ ಕಾರ್ಯಕ್ರಮದಲ್ಲಿ, ಹೋಮ, ಹವನ, ಗಣಹೋಮ, ಸತ್ಯನಾರಾಯಣ ಪೂಜೆ, ಲಕ್ಷ್ಮೀ ಪೂಜೆ, ಅಷ್ಟಲಕ್ಷ್ಮೀ ಪೂಜೆ, ಹಾಲು ಉಕ್ಕಿಸುವುದು, ನಮಗೆ ಅರ್ಥವಾಗದ ಸಂಸ್ಕೃತ ಶ್ಲೋಕಗಳು ಮತ್ತು ಮಂತ್ರಗಳು ಯಾವುದೂ ಇರಲಿಲ್ಲ.

ಎರಡು ನೂರು ರೂಪಾಯಿ

ಇದನ್ನೆಲ್ಲಾ ನಡೆಸಿಕೊಡಲು ಯಾರೂ ಮಧ್ಯವರ್ತಿಗಳೂ ಸಹ ಇರಲಿಲ್ಲ ಬದಲಾಗಿ ಒಬ್ಬರು ಮಾರ್ಗದರ್ಶಕರಾಗಿದ್ದರು. ಅವರೇ ಹಣಕೊಟ್ಟು ಬಸವ ಮಂಟಪದಿಂದ ಒಂದು ಬಸವ ಧ್ವಜ ಮತ್ತು ಎರಡು ವಿಭೂತಿ ಗಟ್ಟಿಗಳನ್ನು ಎರಡು ನೂರು ರೂಪಾಯಿ ಕೊಟ್ಟು ತಂದಿದ್ದರು. ಊಟದ ಖರ್ಚು ಬಿಟ್ಟು ಗುರು ಪ್ರವೇಶಕ್ಕೆ ತಗುಲಿದ ಖರ್ಚು ಅಷ್ಟು ಮಾತ್ರ. ಅವರು ಅದನ್ನೂ ಇರಲಿ ಸರ್ ಅದು ಚಿಕ್ಕ ಖರ್ಚು ನೀವು ಕೊಡುವುದು ಬೇಡ ಎಂದು ಅದನ್ನೂ ತೆಗೆದುಕೊಳ್ಳಲಿಲ್ಲ ಜೊತೆಗೆ, ಯಾವುದೇ ರೀತಿಯ ದಕ್ಷಿಣೆಯನ್ನೂ ಪಡೆಯಲಿಲ್ಲ.

ಅಲ್ಲದೆ ದಕ್ಷಿಣೆ, ದೇಣಿಗೆ, ದಾನಗಳ ಸಂಪ್ರದಾಯದಿಂದ ಹೊರಬರುವ ಸಲುವಾಗಿ ನಾವು ಬಸವ ತತ್ವದ ಆಧಾರದಲ್ಲಿ ಇಂತಹ ಆಚರಣೆಗಳನ್ನು ಮಾಡುವ ಅರಿವು ಮೂಡಿಸುವ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯ ಅರಿವನ್ನು ಅಲ್ಲಿ ನೆರೆದಿದ್ದವರಲ್ಲಿ ಮೂಡಿಸಿದರು. ಅಲ್ಲಿ ನೆರೆದಿದ್ದವರಲ್ಲಿ ಹೆಚ್ಚಿನವರು ಈ ಪ್ರಯತ್ನವನ್ನು ಶ್ಲಾಘಿಸಿ ಇನ್ನು ಮುಂದೆ ಇಂತಹ ಅರ್ಥಪೂರ್ಣ ಮತ್ತು ಸರಳವಾದ ಆಚರಣೆಗಳನ್ನು ಪಾಲಿಸುವುದಾಗಿ ಮಾತನಾಡಿಕೊಂಡರು, ಇನ್ನೂ ಕೆಲವರು ಶರಣ ಶ್ರೀಶೈಲ ಮಾಸೂತಿಯವರ ವಿವರಗಳನ್ನೂ ಪಡೆದುಕೊಂಡರು. ಹಲವಾರು ಒಂದೆರಡು ಗಂಟೆಗಳ ಕಾಲ ಅವರೊಟ್ಟಿಗೆ ಕ್ಯಾರ್ಚಿಸುತ್ತಿದ್ದುದೂ ಕಂಡುಬಂದಿತು.

ವೈದಿಕ ಪೂಜೆಗೆ ಅರವತ್ತು ಸಾವಿರ

ಈ ಸಂದರ್ಭದಲ್ಲಿ ಸ್ನೇಹಿತರ ಮನೆಯ ಗೃಹ ಪ್ರವೇಶದಲ್ಲಿ ನಡೆದ ಎರಡು ಘಟನೆಗಳು ನೆನಪಿಗೆ ಬರುತ್ತಿವೆ. ಮೊದಲನೆಯದು – ಒಂದು ಗಣಹೋಮ, ಲಕ್ಷ್ಮೀ ಪೂಜೆ ಮತ್ತು ಪೂಜೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳು ಮತ್ತು ಪೂಜೆ ಮಾಡುವವರ ದಕ್ಷಿಣೆಯೂ ಸೇರಿದಂತೆ ಐವತ್ತು ಸಾವಿರ ರೂಪಾಯಿ ಗುತ್ತಿಗೆ ಕೊಟ್ಟಿದ್ದರು. ಅಲ್ಲಿ, ಮನೆಯ ನುಣ್ಣನೆಯ ನೆಲಹಾಸುವಿನ ಮೇಲೆ ವಿಶೇಷ ವ್ಯವಸ್ಥೆ ಮಾಡಿ ಹೋಮ ನಡೆಯುತ್ತಿತ್ತು.

ಆ ಕೋಣೆಯನ್ನು ಹಾದುಹೋಗುವವರಿಗೆ ಹೊಗೆಯಿಂದ ಕಣ್ಣುರಿ, ಮನೆಯ ದೊಡ್ಡ ಕೊಠಡಿಯ ತುಂಬಾ ನಾಲ್ಕೈದು ಚಡಿಯ ವ್ಯವಸ್ಥೆ ಮಾಡಿ ಅಲ್ಲಿ ದೇವರುಗಳು ಮತ್ತು ಲಕ್ಷ್ಮಿಯವರ ಪ್ರತಿನಿಧಿಗಳಾಗಿ ತುಂಬಿದ ಕೊಡಗಳಲ್ಲಿ ಕಳಶಗಳ ಅಲಂಕಾರ, ಸಂಸ್ಕೃತ ಶ್ಲೋಕ ಮತ್ತು ಮಂತ್ರಗಳು ಪಠಣ, ಗೃಹಪ್ರವೇಶಕ್ಕೆ ಬಂದವರಿಗೆ ಉಡುಗೊರೆಗಳು ಹೀಗೆ ಊೂಟದ ಖರ್ಚೂ ಸೇರಿ ಸುಮಾರು ಎರಡೂ ವರೆಯಿಂದ ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅವರೂ ಲಿಂಗಾಯತರೇ ಆಗಿದ್ದರೂ, ವೀರಶೈವ ಜಂಗಮರನ್ನು ಪೂಜೆಗೆ ಆಹ್ವಾನಿಸಿ ಬರೀ ಪೂಜೆಗಾಗಿ ಸುಮಾರು ಅರವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದರು.

ಹಸು ಪ್ರವೇಶದ ಪೀಕಲಾಟ

ಎರಡನೆಯ ಘಟನೆ – ಇವರೂ ಲಿಂಗಾಯತರೇ, ಅವರು ಗೃಹ ಪ್ರವೇಶಕ್ಕೆ ಎಲ್ಲರಿಗಿಂತ ಮುಂಚೆ ಹಸುವೊಂದನ್ನು ಪ್ರವೇಶ ಮಾಡಿಸುವ ಸಂಪ್ರದಾಯವಿದೆ. ಅದಕ್ಕಾಗಿ ಅವರು ಉತ್ತರ ಕರ್ನಾಟಕದ ಕಡೆಯಿಂದ ಬೆಂಗಳೂರಿನಲ್ಲಿ ನೆಲಸಿರುವ ಜನಾಂಗದವರು ಹಸುಗಳು ಮತ್ತು ಎತ್ತುಗಳನ್ನು ಬೀದಿ ಬೀದಿಗಳಲ್ಲಿ ತಿರುಗಿಸುತ್ತಾ ಭಿಕ್ಷಾಟನೆ ಮಾಡುತ್ತಾರೆ. ಗೃಹ ಪ್ರವೇಶಕ್ಕೆ ದೇಸಿ ಹಸುವಿನ ಪ್ರವೇಶ ಮಾಡಿಸಬೇಕು ಎಂದು ಅವರಿಗೆ ಎರಡು ಸಾವಿರ ರೂಪಾಯಿಗೆ ಗುತ್ತಿಗೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಪ್ರವೇಶ ಮಾಡಿದ ಹಸುವಿನಿಂದ ಸಗಣಿ ಮತ್ತು ಮೂತ್ರ ಮಾಡಿಸುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿತ್ತು. ಕಾರಣಾಂತರದಿಂದ ಅವರು ಹಸು ಕರೆದು ತರಲು ಆಗಲಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಅವರನ್ನು ಹುಡುಕುವುದು ಹೇಗೆ?

ಆದರೆ ಹಸುವಿನ ಮೊದಲ ಪ್ರವೇಶ ಆಗದೆ ಗೃಹ ಪ್ರವೇಶ ಪ್ರಾರಂಭ ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಹರ ಸಾಹಸ ಮಾಡಿ ಮಿಶ್ರ ಹೈಬ್ರಿಡ್ ಹಸುವುಂದನ್ನು ಕರೆತರಲಾಯಿತು. ಅದಕ್ಕೆ ಅಭ್ಯಾಸವಿಲ್ಲದ ಇದ್ದುದರಿಂದ ಅಷ್ಟೂ ಜನರ ಮಧ್ಯೆ ಮನೆಯನ್ನು ಪ್ರವೇಶ ಮಾಡಲು ಅದಕ್ಕೂ ತುಂಬಾ ಕಷ್ಟ ಅನುಭವಿಸಬೇಕಾಯ್ತು ಕರೆತಂದವರು ಹಾಗೂ ಹೊಸ ಮನೆಯ ಮಾಲೀಕರೂ ಹರಸಾಹಸ ಮಾಡಬೇಕಾಯಿತು. ಅಲ್ಲದೆ, ಆ ಹಸು ಸಗಣಿ ಮತ್ತು ಮೂತ್ರ ಮಾಡಲಿಲ್ಲ. ಹಾಗಾಗಿ ಅದನ್ನು ಶುಭಸೂಚಕವಲ್ಲದ ಪ್ರವೇಶ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯ್ತು.

ಮೇಲಿನ ಎರಡು ಘಟನೆಗಳ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮೀಯರಾಗಿ ನಾವು ಮಾಡಿದ “ಗುರು ಪ್ರವೇಶ” ಅತ್ಯಂತ ಸರಳ ಮತ್ತು ಅರ್ಥಪೂರ್ಣವಾಗಿತ್ತು ಅನಿಸಿತು. ಇಲ್ಲಿ ನಾನು ಯಾರ ನಂಬಿಕೆ ಅಥವಾ ಶ್ರದ್ಧೆಗಳನ್ನೂ ಪ್ರಶ್ನಿಸುವ ಅಥವಾ ಹೀಗಳೆಯುವ ಕೆಲಸ ಮಾಡುತ್ತಿಲ್ಲ ಬದಲಾಗಿ ಸರಳವಾಗಿ, ಅರ್ಥಪೂರ್ಣವಾಗಿ, ಕಡಿಮೆ ಖರ್ಚಿನಲ್ಲಿ, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸರಳವಾಗಿ ಮಾಡಿದ್ದು ನನಗೆ ಅರ್ಥಪೂರ್ಣವಾಗಿ ಕಂಡಿತು. ಎಲ್ಲಾ ಬಸವ ಪ್ರಣೀತ ಲಿಂಗಾಯತ ಧರ್ಮೀಯರು ತಮ್ಮ ಆಚರಣೆಗಳನ್ನು ಮರು ವಿಮರ್ಷೆಗೊಳಪಡಿಸುವ ಹಿಂದೆ ಲಿಂಗಾಯತ ಧರ್ಮದ ಅಳಿವು ಉಳಿವಿನ ಪ್ರಶ್ನೆ ಅಡಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
4 Comments
  • ಹೊಸ ಮನೆ ಕಟ್ಟಿಸುವಾಗ , ಪುರೋಹಿತರಿಗೆ ದುಡ್ಡು‌ಕೊಟ್ಟು ತಳಪಾಯ ದಿಂದ ಮನೆ ಮುಗಿಯುವರೆಗೆ
    ತರೇವಾರಿ ಪೂಜೆ ಹೋಮ ಮಾಡಿಸಿದರೂ ಭಯಭೀತರಾಗಿಯೇ ಮನೆ ಪ್ರವೇಶ ಮಾಡುವುವರನ್ನು ಸಾಕಷ್ಟು ನೋಡಿದ್ದೇವೆ , ಹಾಗಾಗಿ ಈ ಬಸವತತ್ವ ನಿಜಾಚರಣೆ ಮೂಲಕ ನಿರ್ಭಯವಾಗಿ ಖುಷಿಯಿಂದ ಹೊಸ ಆತ್ಮವಿಶ್ವಾಸದೊಂದಿಗೆ ಮನೆ ಪ್ರವೇಶ ಮಾಡುವುದೇ ಸೂಕ್ತ, ಅಭಿನಂದನೆಗಳು ಸರ್.

  • Excellent 👌 and the way forward to Lingayats. Loved the term “Guru Pravesh”. This resonates exactly the way I had imagined it should be without knowing any os Basava tatvas as I do not relate to any Vedic rituals. I have been following simple idols worship as the case would be due to lack of awareness. However, I am kneen to learn more of such practices and free ourselves from any rituals bindings.

  • ನಿಜವಾಗಲೂ ಉತ್ತಮ ಪ್ರಾರಂಭ, ಹೊಸ ಮನೆ ಪೂಜಾ ಕಾರ್ಯಕ್ರಮ, ಗುರು ಪ್ರವೇಶ. ಸತಿಪತಿ ಯೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ ಎಂಬಂತೆ ಮನೆಯವರೇ ಪೂಜೆ ಇತ್ಯಾದಿ ಮಾಡುವುದರಿಂದ, ಸ್ವಲಂಬಿ ಬದುಕು ಕಟ್ಟಿಕೊಳ್ಳಲು ನಂದಿಯಾಗಲಿ. ಎಲ್ಲರೂ ಸರಳವಾದ ಕನ್ನಡದಲ್ಲಿ ತಿಳಿಯುವಂತೆ,ವಚನಗಳನ್ನು ಹೇಳಿಕೊಳ್ಳುತ್ತಾ ಸಾಮೂಹಿಕ ಪ್ರಾರ್ಥನೆ ಮಾಡಿ ಪ್ರಸಾದ ವಿತರಣೆ ಮಾಡಿ ಮುಕ್ತಾಯಮಾಡಿದ್ದಕ್ಕೆ. ತುಂಬಾ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ.

Leave a Reply

Your email address will not be published. Required fields are marked *