ಸರ್ವಧರ್ಮ ಸಮ್ಮೇಳನದೊಂದಿಗೆ ಜಾಮಿಯಾ ಮಜೀದ್ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಆಳಂದ

ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ ಗಡಿ ಪ್ರದೇಶದ ಕೊನೆಯ ಹಳ್ಳಿ ಜವಳಗ(ಜೆ) ಗ್ರಾಮದಲ್ಲಿ, ನೂತನವಾಗಿ ನಿರ್ಮಿಸಿದ ಜಾಮಿಯಾ ಮಜೀದ್ (ಪ್ರಾರ್ಥನಾ ಮಂದಿರ)ವನ್ನು ಸರ್ವಧರ್ಮ ಸಮ್ಮೇಳನ-ಸಮಾರಂಭ ಮಾಡುವ ಮೂಲಕ ಉದ್ಘಾಟಿಸಿ, ಸರ್ವಧರ್ಮ ಸಮತೆಯನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯರಾದ ಕೊರಣೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ, ಎಲ್ಲ ಧರ್ಮಗಳು ಕಲಿಸುವುದು ಮಾನವೀಯತೆಯನ್ನ, ಮನುಷ್ಯತ್ವವನ್ನು. ಧರ್ಮಗುರು ಬಸವಣ್ಣನವರು ಹೇಳಿದರು ‘ದಯವೇ ಧರ್ಮದ ಮೂಲವಯ್ಯ’ ಎಂದು. ದಯೆ, ಕರುಣೆ, ಸಹೋದರತ್ವ, ಸಾಮಾಜಿಕ ನ್ಯಾಯವನ್ನು ನಮ್ಮ ಸಂವಿಧಾನ ಕೂಡ ಹೇಳುತ್ತದೆ.
ಪರಮಾತ್ಮನ ಮನೆಯ ಮಕ್ಕಳು ನಾವೆಲ್ಲ ಎಂದು ಬಸವಣ್ಣ ಹೇಳಿದರು. ಅದೇ ವಿಚಾರವನ್ನು ಭಗವಾನ್ ಬುದ್ಧ, ಗುರುನಾನಕರು, ಮೊಹಮ್ಮದ ಪೈಗಂಬರರು, ಯೇಸುಸ್ವಾಮಿ, ಮಹಾವೀರರು, ಬಾಬಾಸಾಹೇಬರು ಹೇಳಿದ್ದಾರೆ.

ಈ ಭೂಮಿ ಮೇಲಿನ ಸಂತರು ಶರಣರು ಸೂಫಿಗಳು ಮಹಾತ್ಮರು ಹೇಳಿದ ವಿಚಾರಗಳೆಲ್ಲ ಮಾನವೀಯತೆಯ ವಿಚಾರಗಳೇ ಆಗಿವೆ. ನಾವೆಲ್ಲ ವೇದಿಕೆ ಮೇಲೆ ಈ ವಿಚಾರವನ್ನೆಲ್ಲ ಹೇಳುವುದು ಮಾತ್ರವಲ್ಲ, ನಾವು ಅದನ್ನು ಜನರೊಂದಿಗೆ ಆಚರಣೆ ಮಾಡುವಂತದ್ದು ನಿಜವಾದ ಧರ್ಮ, ನಿಜವಾದ ತತ್ವಜ್ಞಾನ ಎಂದರು.

ಸಮಾರಂಭದಲ್ಲಿ ಅಭಿನವ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಮಾದನ ಹಿಪ್ಪರಗಾ, ಭಂತೆ ಅಮರ ಜ್ಯೋತಿ ಬುದ್ಧ ವಿಹಾರ ಬೆಳಮಗಿ, ಜಸ್ವೀರ್ ಸಿಂಗ್ ಛಬ್ರಾ ಮುಖ್ಯಸ್ಥರು ಸಿಖ್ ಧರ್ಮ ಕಲಬುರ್ಗಿ, ನೇಮಿನಾಥ್ ಜೈನ ಮುಖ್ಯಸ್ಥರು ಜೈನ ಧರ್ಮ ಕಲಬುರ್ಗಿ, ಫಾದರ್ ಯಶವಂತ್ ಕೋಟಿ ಫೇತ ಗೌಸ್ಪಾಲ್ ಚರ್ಚ್ ಆಳಂದ, ಆರ್. ಕೆ. ಪಾಟೀಲ ಅಧ್ಯಕ್ಷರು ಕೆಎಂಎಫ್ ಕಲಬುರ್ಗಿ, ಹಜರತ್ ಮೌಲಾನ ಮುಸ್ತಾಫ ಸಾಹೇಬ್ ಇಮಾಮ ಮೆಕ್ಕಾ ಮಸ್ಜಿದ್ ಲಾತೂರ, ಹಜರತ್ ಮೌಲಾನ ಗುಲಾಮ ನಬಿ ಸಾಹೇಬ ಕಾಶ್ಮೀ ಉಮರ್ಗಾ ಭಾಗವಹಿಸಿ, ಎಲ್ಲಾ ಧರ್ಮಗಳ ನಡುವಿನ ಸಹೋದರತ್ವ ಮತ್ತು ಏಕತೆಯ ಸಂದೇಶ ಸಾರಿದರು. ವಿವಿಧ ಧರ್ಮಗಳ ಪೂಜ್ಯರಿಂದ ಆಶೀರ್ವಚನ, ಶಾಂತಿ ಮಾನವೀಯತೆ ಮತ್ತು ಪ್ರೀತಿಯ ಕುರಿತು ಸಂದೇಶ ನೀಡಲಾಯಿತು.

ನಾವೆಲ್ಲರೂ ಭಾರತೀಯರು, ಸಹೋದರತ್ವ ಶಾಂತಿ ಮತ್ತು ಮಾನವೀಯತೆಯಿಂದ ಬದುಕುತ್ತೇವೆ. ಧರ್ಮವು ನಮಗೆ ಪರಸ್ಪರ ದ್ವೇಷಿಸಲು ಕಲಿಸುವುದಿಲ್ಲ, ಪರಸ್ಪರ ಪ್ರೀತಿಸುವುದನ್ನು ಕಲಿಸುತ್ತದೆ. ಏಕತೆಯಲ್ಲಿ ಬಲವಿದೆ, ಮಾನವೀಯತೆ ಧರ್ಮಕ್ಕಿಂತ ಮಿಗಿಲು ಎಂದು ಸಮ್ಮೇಳನ ಸಾರಿ ಹೇಳಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
3 Comments

Leave a Reply

Your email address will not be published. Required fields are marked *