ನಂಜನಗೂಡು
ತಾಲೂಕಿನ ಕೆರೆಹುಂಡಿ ಗ್ರಾಮದ ಶರಣ ಕುಟುಂಬದವರಾದ ಕೆ.ಪಿ. ಮಾದಪ್ಪ ಅವರ ಸೊಸೆ ನಾಗಮಣಿ ಮತ್ತು ಮಗ ನಂಜುಂಡಸ್ವಾಮಿ ಇವರ ಮಗು ‘ಮನ್ವಿಕ್ ಲಿಂಗಾಯತ್’ನ ತೊಟ್ಟಿಲು ಕಟ್ಟುವ ಕಾರ್ಯಕ್ರಮವನ್ನು ಇಷ್ಟಲಿಂಗ ಪೂಜೆಯೊಡನೆ ಈಚೆಗೆ ನಡೆಸಲಾಯಿತು.

ಮೊದಲಿಗೆ ಶ್ರೀ ಬಸವಯೋಗಿ ಪ್ರಭುಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣವನ್ನು ಕುಟುಂಬದ ಸಂಬಂಧಿಕರೊಡನೆ ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆಸಿದರು. ನಂತರ ಬಸವಾದಿ ಶರಣರ ಭಾವಚಿತ್ರ ಮತ್ತು ವಚನ ಸಂಪುಟಗಳನ್ನು ತಲೆ ಮೇಲೆ ಇಟ್ಟುಕೊಂಡು ಮನೆಯೊಳಗೆ ಗುರುವಿನ ಜೊತೆ ಪ್ರವೇಶಿಸಿ ನಂತರ ಇಷ್ಟಲಿಂಗ ಪೂಜಾ ಕಾರ್ಯವನ್ನು ನಡೆಸುವುದರೊಂದಿಗೆ ತೊಟ್ಟಿಲು ಕಟ್ಟುವ ಕಾರ್ಯಕ್ರಮ ಮಾಡಲಾಯಿತು.

ವಿಶೇಷವಾದ ಆಹ್ವಾನ ಪತ್ರ ಆಕರ್ಷಣೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ವಿಶಿಷ್ಟವಾಗಿ ಮಾಡಿಸಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.

ಗುಂಡ್ಲುಪೇಟೆ ತಾಲೂಕಿನ ಮೂಡಗೂರು ವಿರಕ್ತ ಮಠಾಧ್ಯಕ್ಷರಾದ ಶ್ರೀ ಉದ್ದಾನ ಶಿವಯೋಗಿಗಳು ಕಾರ್ಯಕ್ರಮದ ಸಮ್ಮುಖವನ್ನು ವಹಿಸಿದ್ದರು.

ಸಾಮೂಹಿಕ ಇಷ್ಟಲಿಂಗ ಪೂಜೆ ನಂತರ ಇಷ್ಟಲಿಂಗದ ಮಹತ್ವ, ಇಷ್ಟಲಿಂಗ ಶಿವಯೋಗದ ವಿಶೇಷ ಸಿದ್ಧಾಂತವನ್ನು ಹಾಜರಿದ್ದ ಎಲ್ಲರಿಗೂ ತಿಳಿಸಲಾಯಿತು. ಜಗತ್ತಿನಲ್ಲಿಯೇ ವಿಶೇಷವಾದ ವಿಶಿಷ್ಟವಾದ ಇಷ್ಟಲಿಂಗ ಶಿವಯೋಗ ಸಿದ್ಧಾಂತವನ್ನು ಪ್ರತಿಯೊಬ್ಬರು ಮಾಡಿಕೊಳ್ಳುವ ಮುಖಾಂತರ ತಾವು ಶಿವಯೋಗಿಗಳಾಗಬಹುದು ಎಂದು ನೆರೆದವರಿಗೆ ಮನವರಿಕೆ ಮಾಡಲಾಯಿತು.

ನಂಜದೇವನಪುರದ ಮಾದಪ್ಪಣ್ಣ ಮತ್ತು ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು. ನೆರೆದಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದ ಸಹಯೋಗವನ್ನು ವಿಶ್ವ ಬಸವಸೇನೆ ಮತ್ತು ಕಾಯಕಯೋಗಿ ಬಸವೇಶ್ವರ ಸಂಘಟನೆ ವಹಿಸಿಕೊಂಡಿತ್ತು.
